Tumakur : ನಗರ ಸೌಂದರ‍್ಯಕ್ಕೆ ಕುತ್ತು ತಂದ ಗಿಡಗಂಟಿಗಳು

By Kannadaprabha NewsFirst Published Dec 12, 2022, 5:40 AM IST
Highlights

ತಿಪಟೂರು ಶೈಕ್ಷಣಿಕ ನಗರಿ, ಕೊಬ್ಬರಿ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸ್ವಚ್ಛತೆ, ನೈರ್ಮಲ್ಯತೆಯ ಕೊರತೆಯಿಂದ ತಿಪಟೂರು ಅಭಿವೃದ್ಧಿಗೆ ಕಪ್ಪು ಚುಕ್ಕೆ ಇಟ್ಟಂತಾಗಿ ಸೌಂದರ್ಯಕ್ಕೆ ದಕ್ಕೆಯುಂಟಾಗುತ್ತಿದೆ.

 ತಿಪಟೂರು (ಡಿ.12): ತಿಪಟೂರು ಶೈಕ್ಷಣಿಕ ನಗರಿ, ಕೊಬ್ಬರಿ ನಾಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರೂ ಸ್ವಚ್ಛತೆ, ನೈರ್ಮಲ್ಯತೆಯ ಕೊರತೆಯಿಂದ ತಿಪಟೂರು ಅಭಿವೃದ್ಧಿಗೆ ಕಪ್ಪು ಚುಕ್ಕೆ ಇಟ್ಟಂತಾಗಿ ಸೌಂದರ್ಯಕ್ಕೆ ದಕ್ಕೆಯುಂಟಾಗುತ್ತಿದೆ.

ತಿಪಟೂರು ಜಿಲ್ಲೆಯಾಗುವ ಎಲ್ಲಾ ಅರ್ಹತೆಗಳನ್ನು ಒಳಗೊಂಡಿದ್ದರೂ ಕೆಲ ನ್ಯೂನ್ಯತೆಗಳಿಂದ ನಗರ ಬಳಲುತ್ತಿದೆ. ನಗರದಾದ್ಯಂತ ಖಾಲಿ ನಿವೇಶನ ಸೇರಿದಂತೆ ರಸ್ತೆಯ ಬದಿಗಳು, ಬಡಾವಣೆ, ಬಸ್‌ನಿಲ್ದಾಣಗಳು, ಜನವಸತಿ ಪ್ರದೇಶಗಳಲ್ಲಿ ಅನಪೇಕ್ಷಿತ ಗಿಡ ಗಂಟಿಗಳು ಬೆಳೆದು ವಿಷ ಜಂತುಗಳ ಆವಾಸಸ್ಥಾನವಾಗಿವೆ. ನಗರದ ಯಾವ ಬಡಾವಣೆಗಳನ್ನೂ ನೋಡಿದರೂ ಇದೇ ಸ್ಥಿತಿ ನಿರ್ಮಾಣವಾಗಿದ್ದು ನಿವಾಸಿಗಳು ಹಾಗೂ ಸಾರ್ವಜನಿಕರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಖಾಲಿ ನಿವೇಶನಗಳ ಪಕ್ಕದಲ್ಲಿಯೇ ವಾಸದ ಮನೆಗಳು ಇರುವುದರಿಂದ ರಾತ್ರಿ ಸಮಯದಲ್ಲಿ ಮಕ್ಕಳು, ವಯಸ್ಸಾದವರು ಮನೆಯಿಂದ ಹೊರಗಡೆ ಬರಲು ಹೆದರುವಂತಾಗಿದೆ. ಇತ್ತೀಚಿಗೆಂತೂ ಚಿರತೆ, ಕರಡಿ ಕಾಟ ಹೆಚ್ಚಾಗಿದ್ದು ಎಲ್ಲಿ ಪೊದೆ, ಗಿಡ ಗಂಟಿಗಳು ಬೆಳೆದಿದೆಯೋ ಆ ದಾರಿಯಲ್ಲಿ ಹೋಗಲು ಭಯದ ವಾತಾವರಣ ನಿರ್ಮಾಣವಾಗಿದೆ. ನಗರಸಭೆ ಇತ್ತೀಚಿಗೆ ಖಾಲಿ ನಿವೇಶನಗಳನ್ನು ಸ್ವಚ್ಛಗೊಳಿಸುವಂತೆ ಮಾಲೀಕರಿಗೆ ಸೂಚನೆ ನೀಡಿತ್ತು. ಸ್ವಚ್ಛಗೊಳಿಸದಿದ್ದರೆ ಮುಟ್ಟುಗೋಲು ಹಾಕಿ ಸ್ವತಃ ನಗರಸಭೆಯೇ ಸ್ವಚ್ಛತೆ ಮಾಡಿ ಮಾಲೀಕರಿಗೆ ಹಣ ವಸೂಲಿ ಮಾಡುವುದಾಗಿ ಹೇಳಿತ್ತು. ಆದರೆ ಈ ಕಾರ್ಯವನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿದ್ದು, ಕಾರ್ಯರೂಪಕ್ಕೆ ಈವರೆಗೂ ಬಂದಿಲ್ಲ. ಹಾಗಾಗಿ ನಗರಸಭೆ ನಿರ್ಲಕ್ಷ್ಯಕ್ಕೆ ನಗರದ ಸೌಂದರ್ಯ ಹಾಳಾಗುತ್ತಿದ್ದು, ಜನಸಾಮಾನ್ಯರು ಓಡಾಡದಂತಹ ಸ್ಥಿತಿಯನ್ನು ನಿರ್ಮಿಸಿದ್ದಾರೆ. ಕಾಡಿನಂತಿರುವ ಪೊದೆಗಳು ನಗರದ ಮಧ್ಯದಲ್ಲಿಯೇ ಇರುವುದರಿಂದ ವಾಸದ ಮನೆಗಳವರು ನರಕ ಹಿಂಸೆ ಅನುಭವಿಸುವಂತಾಗಿದೆ. ಅಲ್ಲದೆ ಗಿಡಗಂಟಿಕೂಡಿರುವ ಜಾಗದಲ್ಲಿಯೇ ಕಸದ ರಾಶಿಯನ್ನು ತಂದು ಸುರಿಯಲಾಗುತ್ತಿದ್ದು ನಾಯಿ, ಹಂದಿಗಳು ಆಹಾರ ಹುಡುಕುತ್ತಾ ದಾರಿಯುದ್ದಕ್ಕೂ ಕಸವನ್ನು ಹರಡುತ್ತಿವೆ. ಇದರಿಂದ ಗಬ್ಬು ವಾಸನೆ ಬೀರುತ್ತಿದ್ದು ನಿವಾಸಿಗಳಂತೂ ಮೂಗುಮುಚ್ಚಿಕೊಂಡು ಓಡಾಡುವಂತಾಗಿದೆ. ನಗರದ ಬಿ.ಎಚ್‌. ರಸ್ತೆ ಸೇರಿದಂತೆ ಸಾಕಷ್ಟುಬಡಾವಣೆಗಳ ಮುಖ್ಯ ರಸ್ತೆಗಳಲ್ಲೇ ಬೀದಿದೀಪಗಳಿಲ್ಲದಿರುವುದರಿಂದ ಸಂಜೆಯಾಗುತ್ತಲೇ ಜನರು ಮನೆಯಿಂದ ಆಚೆ ಬರಲು ಹಾಗೂ ಹೊರಗಡೆಯಿಂದ ಆಟೋ ಹಿಡಿದೇ ದುಬಾರಿ ಹಣ ತೆತ್ತು ಮನೆ ಸೇರಿಕೊಳ್ಳುವಂತಾಗಿದೆ.

ನಮ್ಮ ಬಡಾವಣೆಯ ಖಾಲಿ ನಿವೇಶನಗಳಲ್ಲಿ ಅನಪೇಕ್ಷಿತ ಗಿಡಗಂಟಿಗಳು ಬೆಳೆದು ನಿಂತಿದ್ದು, ನಮ್ಮ ಮನೆಯ ಪಕ್ಕದಲ್ಲೇ ಮನೆಗಳೇ ಮುಚ್ಚಿಕೊಳ್ಳುವಂತಹ ಎತ್ತರಕ್ಕೆ ಗಿಡಗೆಂಟೆಗಳು ಬೆಳೆದು ನಿಂತಿದ್ದು ಹಗಲು ವೇಳೆಯಲ್ಲೇ ಅವುಗಳ ಪಕ್ಕದಲ್ಲಿ ಓಡಾಡಲು ಭಯವಾಗುತ್ತಿದೆ. ನಗರಸಭೆಯವರಿಗೆ ಹಲವು ಬಾರಿ ಲಿಖಿತ ದೂರು ನೀಡಿದರೂ ಪ್ರಯೋಜನವಾಗಿಲ್ಲ.

ಬ್ರಹ್ಮಚಾರಿ, ನಿ. ಜಿ.ಪಂ.ಅಧಿಕಾರಿ, ಶಂಕರಪ್ಪ ಬಡಾವಣೆ, ತಿಪಟೂರು.

click me!