Koppal: ಅಂಗವಿಕಲರಿಗೆ ನರೇಗಾ ಊರುಗೋಲು..!

By Girish Goudar  |  First Published May 24, 2022, 8:32 AM IST

*  ಕಾರಟಗಿ ತಾಲೂಕಿನ ಯರಡೋಣಾ ಗ್ರಾಪಂ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತಿರುವ ಅಂಗವಿಕಲರು
*  ದುಡಿಯೋಣ ಬಾ ಅಭಿಯಾನ
*  ಸ್ವಯಂ ಉದ್ಯೋಗ ಕಂಡುಕೊಂಡ ಅಂಗವಿಕಲರು 
 


ಕಾರಟಗಿ(ಮೇ.24): ತಾಲೂಕಿನ ಯರಡೋಣಾ ಗ್ರಾಮದಲ್ಲಿನ 62 ಜನ ಅಂಗವಿಕಲರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವ ಮೂಲಕ ಕಾರಟಗಿ ತಾಪಂ ಹೊಸ ಭಾಷ್ಯ ಬರೆದಿದೆ. ಅಂಧರು, ಬುದ್ಧಿಮಾಂದ್ಯರು, ಕೈ-ಕಾಲು ಇಲ್ಲದವರು, ಮೂಗರು, ಕಿವುಡರು ಅವರಿವರ ಮುಂದೆ ಕೈಚಾಚದೆ ನರೇಗಾದಲ್ಲಿ ಕೆಲಸ ಮಾಡುತ್ತ ಸ್ವಾವಲಂಬಿ ಜೀವನ ಸಾಗಿಸುತ್ತ ಬದುಕು ಕಟ್ಟಿಕೊಂಡಿದ್ದಾರೆ. ಇವರಲ್ಲಿ ಒಬ್ಬೊಬ್ಬರದು ಒಂದೊಂದು ಕಥೆ. ಆ ಸಮಸ್ಯೆಗಳಿಗೆ ನರೇಗಾ ಊರುಗೋಲಾಗಿದೆ. ಯರಡೋಣಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾದಡಿ ಇವರಿಗೆ ಪ್ರತ್ಯೇಕವಾಗಿ ಎನ್‌ಎಂಆರ್‌ ತೆಗೆದು ಅದೇ ಸೀಮೆಯಲ್ಲಿ ಒಂದು ಕಾಲುವೆ ಹೂಳೆತ್ತುವ ಕೆಲಸ ಮಾಡಿಸಿದ್ದಾರೆ.

ಈ ಕೆಲಸದಲ್ಲಿ ದೈಹಿಕ ನ್ಯೂನತೆ ಎದುರಿಸುತ್ತಿರುವವರು ಮಾಶಾಸನದಲ್ಲೇ ನಿತ್ಯವೂ ಕಷ್ಟದ ಜೀವನ ನಡೆಸುತ್ತಿದ್ದರು. ಈಗ ಖಾತ್ರಿ ಯೋಜನೆ ಸ್ವಾವಲಂಬಿಗಳಾಗಿ ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಯರಡೋಣಾ ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಐಇಸಿ ಚಟುವಟಿಕೆಯಡಿ ಅಂಗವಿಕಲರಿಗೆ ಇರುವ ಸೌಲಭ್ಯಗಳ ಕುರಿತು ವ್ಯಾಪಕ ಪ್ರಚಾರ ಹಾಗೂ ಅಂಗವಿಕಲರ ಸರ್ವೇ ನಡೆಸಿ ಉದ್ಯೋಗ ಚೀಟಿ ಇಲ್ಲದವರಿಗೆ ಉದ್ಯೋಗ ಚೀಟಿ ನೀಡಲಾಗಿತ್ತು. ಇದರಿಂದ ಹೆಚ್ಚಿನ ಜನರು ನರೇಗಾದಡಿ ಕೆಲಸ ಮಾಡಲು ಅನುಕೂಲವಾಯಿತು.

Latest Videos

undefined

ಡ್ಯಾಂ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ: 1,600 ಅಡಿ ತಲುಪಿದ ತುಂಗಭದ್ರಾ ನೀರಿನ ಮಟ್ಟ

ದುಡಿಯೋಣ ಬಾ ಅಭಿಯಾನ:

ಬೇಸಿಗೆ ಅವಧಿಯಲ್ಲಿ ದುಡಿಯೋಣ ಬಾ ಅಭಿಯಾನದಡಿ ನಿರಂತರ ನರೇಗಾ ಕೆಲಸ ನೀಡುತ್ತಿದ್ದರಿಂದ ಅಂಗವಿಕಲರಿಗೆ ಇದ್ದೂರಲ್ಲೇ ಕೆಲಸ ಸಿಗುತ್ತಿದೆ. ಜತೆಗೆ ಅರ್ಧ ಕೆಲಸ ಪೂರ್ತಿ ಕೂಲಿಯೂ ಸಿಗುತ್ತಿದೆ. ನರೇಗಾ ಕೂಲಿ ದಿನಕ್ಕೆ .309ಕ್ಕೆ ಹೆಚ್ಚಿಸಿದ್ದರಿಂದ ಅಂಗವಿಕಲರು ಖುಷಿಯಿಂದ ನರೇಗಾ ಕೆಲಸ ಮಾಡುತ್ತಾ ಸ್ವಾವಲಂಬಿ ಜೀವನ ನಡೆಸುತ್ತಿದ್ದಾರೆ. ಒಂದು ವಾರದ ಕಾಲ ಕೆಲಸ ಮಾಡಿದಕ್ಕೆ ಪ್ರತಿಯೊಬ್ಬರಿಗೆ ತಲಾ .2100 ಹಣ ಇವರ ಕೈ ಸೇರಿದೆ. ಹೀಗಾಗಿ ಅಂಗವಿಕಲರು ಸ್ವಯಂ ಉದ್ಯೋಗ ಕಂಡುಕೊಂಡಿದ್ದು ನರೇಗಾ ಆಸರೆಯಾಗಿದೆ.

‘ಮನೆಯಲ್ಲಿ 85 ವರ್ಷದ ತಾಯಿ ಸೇರಿ ಇಬ್ಬರೇ ಇದ್ದೇವೆ. ನನಗೆ ಕಾಲಿಲ್ಲ. ತಾಯಿ ಕಟ್ಟಿಗೆ ತರಲು ಹೋದಾಗ ಬಿದ್ದು ಗಾಯ ಮಾಡಿಕೊಂಡು ಮನೆಯಲ್ಲೇ ಇದ್ದಾರೆ. ಅಣ್ಣಂದಿರು ಬೇರೆಯಾಗಿದ್ದಾರೆ. ಎರಡು ಸ್ಟಿಕ್‌ನಿಂದಲೇ ನಡೆಯುತ್ತೇನೆ. ನರೇಗಾ ಯೋಜನೆ ದುಡಿಯಲು ಅವಕಾಶ ಸಿಕ್ಕಿತು. ಹೊಟ್ಟೆಪಾಡಿಗೆ, ಅವ್ವನ ಔಷಧಿಗೆ ಕೂಲಿ ಹಣ ಖರ್ಚು ಆಸರೆಯಾಗಿದೆ ಅಂತ ಯರಡೋಣಾದ ಹೆಸರೇಳಲಿಚ್ಛಿಸದ ಅಂಗವಿಕಲ ಮಹಿಳೆ ತಿಳಿಸಿದ್ದಾರೆ. 

SSLC Results: ಕನ್ನಡಪ್ರಭ ಪತ್ರಿಕೆ ಹಂಚುವ ಹುಡುಗ ಟಾಪರ್‌..!

‘ನಾನು ಅಂಗವಿಕಲಳಾಗಿದ್ದು, ಡಿಇಡಿ ವಿದ್ಯಾಭ್ಯಾಸ ಪೂರ್ಣಗೊಳಿಸಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಕೋವಿಡ್‌ ಹಾವಳಿಗೆ ಕೆಲಸ ಹೋಯ್ತು. ಪತಿ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದು, ಅವರ ಸಂಬಳದಲ್ಲೇ ಜೀವನ ನಡೆಯುತ್ತಿತ್ತು. ನಾನು ಮನೆಯಲ್ಲಿ ಖಾಲಿ ಇರುತ್ತಿದ್ದೆ. ನರೇಗಾದಡಿ ಅಂಗವಿಕಲರಿಗೆ ದುಡಿಯಲು ಅವಕಾಶ ಕಲ್ಪಿಸಿದ್ದರಿಂದ ನಾನು ಕೆಲಸ ಮಾಡುತ್ತಾ ಸ್ವಾವಲಂಬಿಯಾಗಿ ಬದುಕುತ್ತಿರುವೆ ಅಂತ ಯರಡೋಣಾದ ಅಂಗವಿಕಲ ಮಹಿಳೆ ಶೋಭಾ ಹೇಳಿದ್ದಾರೆ.  

ಕಾರಟಗಿ ತಾಲೂಕಿನ ಯರಡೋಣಾ ಗ್ರಾಪಂ ವ್ಯಾಪ್ತಿಯ ಅಂಗವಿಕಲರಿಗೆ ನರೇಗಾದಡಿ ಪ್ರತ್ಯೇಕ ಎನ್‌ಎಂಆರ್‌ ತೆಗೆದು ಕೆಲಸ ನೀಡಲಾಗಿದೆ. ಅಂಗವಿಕಲರು ಖುಷಿಯಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಅಂಗವಿಕಲರು ಮಾಡಬಹುದಾದ ಕೆಲಸಗಳನ್ನು ಮಾತ್ರ ನೀಡಲಾಗುತ್ತಿದೆ. ಅವರ ಸ್ವಾವಲಂಬಿ ಜೀವನಕ್ಕೆ ನರೇಗಾ ಆಸರೆಯಾಗಿದೆ ಅಂತ ಕಾರಟಗಿ ತಾಪಂ ಇಒ ಡಾ. ಡಿ. ಮೋಹನ್‌ ತಿಳಿಸಿದ್ದಾರೆ. 
 

click me!