ನಮ್ಮನ್ನು ಪಕ್ಷದಲ್ಲಿ ಕಡೆ​ಗ​ಣಿಸಲಾಗುತ್ತಿದೆ : ಅಸಮಾಧಾನ ಹೊರಹಾಕಿದ ಬಿಜೆಪಿ ಮುಖಂಡ

By Kannadaprabha News  |  First Published Dec 14, 2020, 3:16 PM IST

ಪಕ್ಷದಲ್ಲಿ ನಮ್ಮನ್ನು ಗಡೆಗಣಿಸಲಾಗುತ್ತಿದೆ. ಬಿಜೆಪಿಯಲ್ಲಿ  ಹಳೆಯ ನಾಯಕರಿಗೆ  ಯಾವುದೇ ಬೆಲೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.


 ಮಾಗಡಿ (ಡಿ.14):  ಬಿಜೆಪಿ ಪಕ್ಷದ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಯಾವುದೇ ಸಭೆಗೆ ಆಹ್ವಾನಿಸದೆ. ಪಕ್ಷದ ಸಲಹೆ, ಸೂಚನೆಗಳನ್ನು ತಿಳಿಸದೆ ನಿರ್ಲಕ್ಷಿಸಲಾಗುತ್ತಿದೆ ಎಂದು ಮೊಟಗೊಂಡನಹಳ್ಳಿ ಗ್ರಾಪಂ ಮಾಜಿ ಸದಸ್ಯ ಎಂ.ಜಿ.ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕಿನ ಸೋಲೂರು ಹೋಬಳಿ ಲಕ್ಕೇನಹಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ನೊಂದಿರುವ ಬಿಜೆಪಿ ಹಳೆಯ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಒಂದು ವರ್ಷದಿಂದ ನೆಲಮಂಗಲ ಬಿಜೆಪಿ ಪಕ್ಷದ ತಾಲೂಕು, ಜಿಲ್ಲಾ, ಸೋಲೂರು ಘಟಕದವರಾಗಲಿ ಹಳೆಯ ನಿಷ್ಠಾವಂತ ಮುಖಂಡರು ಹಾಗೂ ಕಾರ್ಯಕರ್ತರನ್ನು ಯಾವುದೇ ಸಭೆಗಳಿಗಳಿಗೆ ಆಹ್ವಾನಿಸುತ್ತಿಲ್ಲ ಎಂದು ದೂರಿ​ದರು.

Latest Videos

undefined

ಸೋಲೂರು ಹೋಬಳಿಯಲ್ಲಿ ಅನೇಕ ಹಿರಿಯ ಮುಖಂಡರು, ಗ್ರಾಪಂ ಅಧ್ಯಕ್ಷರು, ಸದಸ್ಯರು ಹಾಗೂ ಪಕ್ಷದಲ್ಲಿನ ಅನೇಕ ಪದಾಧಿಕಾರಿಗಳು, ಬೂತ್‌ ಮಟ್ಟದ ಅಧ್ಯಕ್ಷರುಗಳನ್ನು ನಿರ್ಲಕ್ಷಿಸುವ ಕಾರ್ಯ ನಡೆದುಕೊಂಡು ಬರುತ್ತಿದೆ, ಇದು ಹೀಗೆ ಮುಂದುವರೆದರೆ ಪಕ್ಷವನ್ನು ಸಂಘಟಿಸುವುದು ಹೇಗೆ ಎಂದು ರೇವಣ್ಣ ಪ್ರಶ್ನಿಸಿದರು.

ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ 20 ಮುಖಂಡರು

ಗ್ರಾಮ ಪಂಚಾಯಿತಿ ಚುನಾವಣೆ ಹತ್ತಿರದಲ್ಲಿದ್ದು, ಪಕ್ಷದ ಕಾರ್ಯಕರ್ತರು, ಮುಖಂಡರು ಚುನಾವಣೆಗೆ ಸ್ವರ್ಧೆ ಮಾಡುತ್ತಿದ್ದಾರೆ. ಈ ಚುನಾವಣೆಯ ದೃಷ್ಠಿಯಿಂದ ಪಕ್ಷದ ಜಿಲ್ಲಾ, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿನ ಪಕ್ಷದ ಪದಾಧಿಕಾರಿಗಳು ಯಾವುದೇ ರೀತಿಯ ಸಲಹೆ ಸೂಚನೆಗಳನ್ನು ನೀಡದೇ ಬೇಜವಾಬ್ದಾರಿತನ ತೋರುತ್ತಿರುವುದರಿಂದ ಪಕ್ಷಕ್ಕೆ ಹಿನ್ನಡೆಯಾಗುತ್ತಿದ್ದು, ರಾಜ್ಯದ ಹಿರಿಯ ಮುಖಂಡರು ಈ ಬಗ್ಗೆ ಗಮನಹರಿಸಬೇಕು ಎಂದು ರೇವಣ್ಣ ಮನವಿ ಮಾಡಿದರು.

ಗುಡೇಮಾರನಹಳ್ಳಿ ಗ್ರಾಪಂ ಮಾಜಿ ಉಪಾಧ್ಯಕ್ಷ ಲಕ್ಷ್ಮೇ ನಾರಾಯಣಮೂರ್ತಿ ಮಾತನಾಡಿ, ಸೋಲೂರು ಹೋಬಳಿಯಲ್ಲಿ ಕಳೆದ 25 ವರ್ಷಗಳಿಂದ ಬಿಜೆಪಿ ಪಕ್ಷವನ್ನು ಸಂಘಟನೆ ಮಾಡಿಕೊಂಡು ಬರುತ್ತಿದ್ದೇವೆ. ಪಕ್ಷದ ಅಭ್ಯರ್ಥಿಗಳ ಪರವಾಗಿ ಪೋಸ್ಟರ್‌, ಬಂಟಿಂಗ್ಸ್‌ ಕಟ್ಟಿಪಕ್ಷಕ್ಕಾಗಿ ದುಡಿದಿದ್ದೇವೆ. ಅದರೆ ಇತ್ತೀಚಿನ ದಿನಗಳಲ್ಲಿ ಹಳೆಯ ಕಾರ್ಯಕರ್ತರನ್ನು ಕಡೆಗಣಿಸಲಾಗುತ್ತಿದೆ. ಕೇಂದ್ರದಲ್ಲಿ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರು​ವು​ದ​ರಿಂದ ಹೊಸಬರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದು ಹಳೆಯ ಕಾರ್ಯಕರ್ತರನ್ನು ಮೂಲೆಗುಂಪು ಮಾಡಲಾಗುತ್ತಿದೆ ಎಂದ ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಮುಖಂಡ​ರಾದ ಶಿವಾಜಿರಾವ್‌ ಸಿಂಧ್ಯಾ, ಗೊರೂರು ನಾಗರಾಜ…, ಮಂಜುನಾಥ್‌, ಮಹದೇವಯ್ಯ, ಕೃಷ್ಣಪ್ಪ, ರವಿಶಂಕರ್‌, ಜಯಣ್ಣ, ಮಹದೇವಯ್ಯ, ಮಂಜುನಾಥ್‌, ಸಿದ್ದಪ್ಪಾಜಿ, ನಾಗರಾಜು, ಶಂಕರಪ್ಪ, ಗಂಗಾಧರ್‌, ಮಂಜುಳಮ್ಮ, ಲಕ್ಷ್ಮಮ್ಮ ಹಾಜ​ರಿ​ದ್ದರು.

click me!