ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಫುಲ್ ಗರಂ : ಸಚಿವರ ಕಿಡಿ

By Kannadaprabha NewsFirst Published Dec 14, 2020, 2:46 PM IST
Highlights

ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಸಚಿವ ಎಸ್‌ ಟಿ ಸೋಮಶೇಖರ್ ಫುಲ್ ಗರಂ ಆಗಿದ್ದಾರೆ. 

 ಮೈಸೂರು (ಡಿ.14) : ಕಳೆದ ಮೂರ್ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್   ಮೈಸೂರು ಕೆಎಸ್ಆರ್ಟಿಸಿ ಬಸ್ ನಿಲ್ದಾಣಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲಿಸಿದರು. 

ಮುಷ್ಕರ ಮುಂದುವರಿದಿದ್ದರೂ ಬಸ್ ಸಂಚಾರ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಖುದ್ದು ಬಸ್ ಗಳ ಬಳಿ ತೆರಳಿದ ಸಚಿವರು, ಮಾಹಿತಿಯನ್ನು ಪಡೆದುಕೊಂಡರು. ಜೊತೆಗೆ ಪ್ರಯಾಣಿಕರನ್ನು ಮಾತನಾಡಿಸಿ, ಅಭಿಪ್ರಾಯ ಸಂಗ್ರಹಿಸಿದರು. ಕಳೆದ ಎರಡು-ಮೂರು ದಿನಗಳಿಂದ ಆದ ತೊಂದರೆಗೆ ಬೇಸರ ವ್ಯಕ್ತಪಡಿಸಿದರು.

ಪಟ್ಟು ಸಾಧಿಸುವುದು ಸರಿಯಲ್ಲ 

ಮುಖ್ಯಮಂತ್ರಿಗಳು ಹಾಗೂ ಸಾರಿಗೆ ಸಚಿವರು ಮಾತನಾಡಲು ಸಿದ್ಧರಿದ್ದರೂ ಸಾರಿಗೆ ನೌಕರರು ಮುಷ್ಕರ ನಡೆಸುತ್ತಿರುವುದು ಸರಿಯಲ್ಲ. ಈಗಾಗಲೇ 9 ಬೇಡಿಕೆಗಳನ್ನು ಈಡೇರಿಸುವುದಾಗಿ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಯಾರದ್ದೋ ಮಾತು ಕೇಳಿಕೊಂಡು ಪಟ್ಟು ಸಾಧಿಸುತ್ತಿರುವುದು ಸರಿಯಲ್ಲ ಎಂದು ಪರ್ತಕರ್ತರ ಪ್ರಶ್ನೆಗೆ ಸಚಿವರಾದ ಸೋಮಶೇಖರ್ ಉತ್ತರಿಸಿದರು.

ಸಾರಿಗೆ ನೌಕರರ ಸಮರಕ್ಕೆ ಕೋಡಿಹಳ್ಳಿ ಎಂಟ್ರಿ ರಾಜಕೀಯ ಪ್ರೇರಿತ: ಸವದಿ ಅಸಮಾಧಾನ ..

ಲಾಕ್ ಡೌನ್ ಸಂದರ್ಭದಲ್ಲಿ ಕೆಎಸ್ಆರ್ಟಿಸಿ ಹಾಗೂ ಬಿಎಂಟಿಸಿಗಳಿಗೆ ಸರ್ಕಾರವೇ ವೇತನ ಕೊಟ್ಟಿದೆ. ಅಲ್ಲದೆ, ಈ ಸಂದರ್ಭದಲ್ಲಿ ಕೆಲ ಸಮಯ ಬಸ್ ಸಂಚಾರವಿರಲಿಲ್ಲ. ಹೀಗಿದ್ದರೂ ಸರ್ಕಾರ ಉತ್ತಮವಾಗಿ ನೋಡಿಕೊಂಡಿದೆ. ಅಲ್ಲದೆ, ವೇತನದಲ್ಲಿ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿದೆ. ಈಗಲೂ ಸಹ ಕೊರೋನಾ ಸಂಕಷ್ಟದಿಂದ ಆರ್ಥಿಕ ಪರಿಸ್ಥಿತಿ ಚೇತರಿಸಿಕೊಳ್ಳುತ್ತಿದೆ. ಸ್ವಲ್ಪ ಸಮಯದ ಬಳಿಕ ಎಲ್ಲವೂ ಸರಿಹೊಂದಿದ ಮೇಲೆ ಕ್ರಮ ಬೇಡಿಕೆಗಳನ್ನು ಇಡಬಹುದಿತ್ತು ಎಂದು ಸಚಿವರು ಅಭಿಪ್ರಾಯ ತಿಳಿಸಿದರು.

ಕೋಡಿಹಳ್ಳಿ ರಾಜಕೀಯಕ್ಕೆ ಸಚಿವರ ಕಿಡಿ

ಕೋಡಿಹಳ್ಳಿ ಚಂದ್ರಶೇಖರ್ ಅವರು ರೈತಪರ ಹೋರಾಟವನ್ನು ಮಾಡಿಕೊಂಡಿರಲಿ. ಅದುಬಿಟ್ಟು ಎಲ್ಲ ಕಡೆ ಮೂಗುತೂರಿಸಬಾರದು. ಅವರು ಯಾವ ನಾಟಕವಾಡಿದರೂ ಜನಕ್ಕೆ ಅರ್ಥವಾಗುತ್ತದೆ. ಅವರು ತಮ್ಮ ಡ್ರಾಮಾಗಳನ್ನು ಬಿಟ್ಟು 9 ಬೇಡಿಕೆಗಳಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿರುವುದಕ್ಕೆ ಅಭಿನಂದನೆ ಸೂಚಿಸಬೇಕಿತ್ತು. ಅದು ಬಿಟ್ಟು ಸಾರಿಗೆ ನೌಕರರನ್ನು ಎತ್ತಿಕಟ್ಟಿ ಹೋರಾಟ ಮಾಡುವಂತೆ ಮಾಡುವುದು ಸರಿಯೇ? ಎಲ್ಲ ಕಡೆಯೂ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಾಂಟ್ರ್ಯಾಕ್ಟ್ ತೆಗೆದುಕೊಂಡಿದ್ದಾರೆಯೇ? ಅವರು ರೈತರ ಪರ ಹೋರಾಟ ಮಾಡಲಿ, ಇಂತಹ ರಾಜಕೀಯ ಬೇಡ ಎಂದು ಕಟುವಾಗಿ ನುಡಿದರು. 

ಕೋಡಿಹಳ್ಳಿ ಅವರು ಏನೇ ಪಿತೂರಿ ಮಾಡಿದರೂ ಸಹ ಸಾರಿಗೆ ನೌಕರರು ಅರ್ಥಮಾಡಿಕೊಳ್ಳಬೇಕಿತ್ತು. ಇಂತಹ ಕೊರೋನಾ ಸಂದಿಗ್ದ ಸ್ಥಿತಿಯಲ್ಲಿ ಹೋರಾಟ ಬೇಕಿರಲಿಲ್ಲ. ಸಾರ್ವಜನಿಕರಿಗೆ ತೊಂದರೆ ಕೊಟ್ಟು ಹೋರಾಟ ನಡೆಸುವುದು ಎಷ್ಟು ಸರಿ ಎಂದು ಸಚಿವರು ತಿಳಿಸಿದರು.

ಎಪಿಎಂಸಿ ನೀತಿಯಲ್ಲಿ ಬದಲಿಲ್ಲ, ಕನಿಷ್ಠ ಬೆಂಬಲ ಬೆಲೆ ತೆಗೆಯಲ್ಲ

ಎಪಿಎಂಸಿ ಕಾಯ್ದೆಯ ತಿದ್ದುಪಡಿ ನೀತಿಯನ್ನು ಬದಲಾಯಿಸುವುದಿಲ್ಲ. ರೈತರಿಗೆ ಅನುಕೂಲವನ್ನುಂಟು ಮಾಡುವ ಈ ಕಾಯ್ದೆಯಿಂದ ಲಾಭವೇ ವಿನಹ ಹಾನಿಯಿಲ್ಲ. ರೈತ ತಾನು ಬೆಳೆದ ಬೆಳೆಯನ್ನು ರಾಜ್ಯದ ಯಾವುದೇ ಮೂಲೆಯಲ್ಲಿ ಬೇಕಿದ್ದರೂ ಮಾರಾಟ ಮಾಡಬಹುದು, ತನ್ನ ಬೆಳೆಗೆ ರೈತನೇ ದರ ನಿಗದಿ ಮಾಡಿಕೊಳ್ಳಬಹುದು, ಅಲ್ಲದೆ, ಕನಿಷ್ಠ ಬೆಂಬಲ ಬೆಲೆ ಈಗಲೂ ಇದೆ, ಮುಂದೂ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ.  ಇಂತಹ ಒಂದು ಸತ್ವಯುತ ಕಾಯ್ದೆಯನ್ನು ಏಕೆ ಬದಲಿಸಬೇಕು? ಎಂದು ಸಚಿವರು ಪ್ರಶ್ನಿಸಿದರು.

ಇನ್ನು ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದ ಹೇಗೆ ರೈತರಿಗೆ ಪ್ರಯೋಜನಕಾರಿ ಎಂಬ ಬಗ್ಗೆ 
4 ಕಂದಾಯ ವಿಭಾಗದಲ್ಲಿಯೂ ಸಹ ಸಭೆಗಳನ್ನು ನಡೆಸಿ ರೈತರಿಗೆ ಮತ್ತೊಮ್ಮೆ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತೇವೆ ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

click me!