ಮಹಾಮೇಳಾವ್‌ಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದರಿಂದ ತೀವ್ರ ಮುಖಭಂಗ ಅನುಭವಿಸಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ ಈಗ ಡಿ.26ಕ್ಕೆ ಕೊಲ್ಲಾಪುರ ಚಲೋಗೆ ಕರೆ ನೀಡಿದೆ.
ಶ್ರೀಶೈಲ ಮಠದ
ಬೆಳಗಾವಿ(ಡಿ.23): ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಹಮ್ಮಿಕೊಂಡಿದ್ದ ಮಹಾಮೇಳಾವ್‌ಗೆ ರಾಜ್ಯ ಸರ್ಕಾರ ಬ್ರೇಕ್ ಹಾಕಿದ್ದರಿಂದ ತೀವ್ರ ಮುಖಭಂಗ ಅನುಭವಿಸಿರುವ ನಾಡದ್ರೋಹಿ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಈಗ ಡಿ.26ಕ್ಕೆ ಕೊಲ್ಲಾಪುರ ಚಲೋಗೆ ಕರೆ ನೀಡಿದೆ. ಕರ್ನಾಟಕದ ಪೊಲೀಸರ ಖಡಕ್ ನಿರ್ಧಾರದಿಂದ ಬೆಚ್ಚಿಬಿದ್ದಿರುವ ಎಂಇಎಸ್ ಪುಂಡರು ಈಗ ರಾಜ್ಯದಲ್ಲಿ ಯಾವುದೇ ಪ್ರತಿಭಟನೆ ನಡೆಸದೆ ಮಹಾರಾಷ್ಟ್ರಕ್ಕೆ ಪಲಾಯನ ಮಾಡಿದ್ದಾರೆ.
ಗಡಿ, ಭಾಷೆಯ ವಿವಾದವನ್ನೇ ತನ್ನ ಬಂಡವಾಳವನ್ನಾಗಿ ಮಾಡಿಕೊಂಡಿರುವ ಎಂಇಎಸ್ ಪುಂಡರು, ಸದಾ ಒಂದಿಲ್ಲೊಂದು ನೆಪ ಮಾಡಿಕೊಂಡು ಕನ್ನಡಿಗರು, ಕರ್ನಾಟಕ ಸರ್ಕಾರದ ವಿರುದ್ಧ ಜಗಳ ತೆಗೆಯುತ್ತಲೇ ಬಂದಿದ್ದಾರೆ. ಗಡಿಭಾಗದಲ್ಲಿ ಕನ್ನಡ ಮತ್ತು ಮರಾಠಿ ಭಾಷಿಕರು ಅನ್ಯೋನ್ಯತೆಯಿಂದ ಬಾಳ್ವೆ ನಡೆಸುತ್ತಿದ್ದರೂ ಭಾಷಾಂಧ ಎಂಇಎಸ್ ನಾಯಕರಿಗೆ ಇದನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ, ಮರಾಠಿಗರನ್ನು ಕನ್ನಡಿಗರ ವಿರುದ್ಧ ಎತ್ತಿಕಟ್ಟುವ ಮೂಲಕ ತನ್ನ ಸ್ವಾರ್ಥ ರಾಜಕೀಯ ಬೇಳೆ ಬೇಯಿಸಿಕೊಳ್ಳುತ್ತಾ ಬಂದಿದೆ. ಇದನ್ನು ಮನಗಂಡಿರುವ ರಾಜ್ಯ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಮೂಲಕ ಎಂಇಎಸ್ ಪುಂಡರ ಹಾವಳಿಗೆ ಬ್ರೇಕ್ ಹಾಕಿತ್ತು. ಮಹಾಮೇಳಾವ್ ನಡೆಯದಂತೆ ನೋಡಿಕೊಂಡಿತು.
Belagavi Session: ಎಂಇಎಸ್ ಮಹಾಮೇಳಾವ್ ಅರ್ಜಿ ತಿರಸ್ಕಾರ: ನಿಷೇಧಾಜ್ಞೆ ನಡುವೆಯೂ ಪುಂಡಾಟ ಶುರು
ಕರ್ನಾಟಕದ ಗಡಿಭಾಗದಲ್ಲಿ ಮರಾಠಿ ಭಾಷಿಕರಿಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಆರೋಪಿಸಿ, ಕನ್ನಡ ನೆಲದಲ್ಲೇ ಕರ್ನಾಟಕ ಸರ್ಕಾರದ ವಿರುದ್ಧ ಸಮಾವೇಶ ಮಾಡಿ, ಅದಕ್ಕೆ ಮಹಾರಾಷ್ಟ್ರ ನಾಯಕರಿಗೆ ಆಹ್ವಾನ ನೀಡಿ, ಗಡಿಭಾಗದಲ್ಲಿ ಗದ್ದಲ, ಕಾನೂನು ಸುವ್ಯವಸ್ಥೆಗೆ ಅಡ್ಡಿ ಮಾಡುತ್ತಲೇ ಬಂದಿದೆ. ಗಡಿ ವಿವಾದವನ್ನು ಜೀವಂತವಾಗಿಟ್ಟುಕೊಂಡು ಬಂದಿದೆ. ಮಹಾರಾಷ್ಟ್ರ ನಾಯಕರ ಎದುರು ತನ್ನ ಮೊಸಳೆ ಕಣ್ಣೀರು ಹಾಕುತ್ತಿರುವ ಎಂಇಎಸ್ ಪುಂಡರಿಗೆ ಈಗ ಕರ್ನಾಟಕ ಸರ್ಕಾರ ಈ ಬಾರಿ ಮಹಾಮೇಳಾವ್‌ಕ್ಕೆ ಅನುಮತಿ ನೀಡದೇ ಅದಕ್ಕೆ ಬ್ರೇಕ್ ಹಾಕಿದೆ. ಇದರಿಂದಾಗಿ ತೀವ್ರ ಮುಖಭಂಗ ಉಂಟಾದರೂ ಎಂಇಎಸ್‌ನದ್ದು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಜಾಯಮಾನ. ಗಡಿ ವಿಚಾರದಲ್ಲಿ ತನ್ನ ವಿತ್ತಂಡವಾದ ಮಂಡಿಸುತ್ತಲೇ ಬಂದಿದೆ. ಹೋರಾಟದ ನೆಪದಲ್ಲಿ ಮಹಾರಾಷ್ಟ್ರಕ್ಕೆ ಪಯಾಯನ ಮಾಡಿರುವ ಎಂಇಎಸ್ ನಾಯಕರು ಡಿ.26 ರಂದು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹಕ್ಕೆ ಮುಂದಾಗಿದೆ. ಕೊಲ್ಲಾಪುರ ಚಲೋಗೆ ಕರೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಚಲೋ ಕುರಿತಾದ ಪೋಸ್ಟರ್‌ಗಳು ಈಗ ಹರಿದಾಡುತ್ತಿವೆ.