ಶಿಗ್ಗಾಂವಿ ಲಾಕ್‌ಡೌನ್‌ಗೆ ವ್ಯಾಪಾರಸ್ಥರ ವಿರೋಧ

By Kannadaprabha News  |  First Published Jul 25, 2020, 11:04 AM IST

ವ್ಯಾಪಾರಸ್ಥರ ಮನವಿ ಮೇರೆಗೆ ಮಧ್ಯಾಹ್ನ 12 ಗಂಟೆ ನಂತರ ಲಾಕ್‌ಡೌನ್‌ಗೆ ತಹಸೀಲ್ದಾರ್‌ ಪ್ರಕಾಶ ಕುದರಿ ಆದೇಶ| ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೆಂದು ಮುಖ್ಯಮಂತ್ರಿ ಹೇಳಿದ ಮೇಲೂ ಪಟ್ಟಣದಲ್ಲಿ ಅಂಗಡಿ ಮುಚ್ಚಲು ಮುಂದಾದ  ಪೊಲೀಸರು| ಈ ವೇಳೆ ವ್ಯಾಪಾರಸ್ಥರು ಪೊಲೀಸರ ಮಧ್ಯೆ ವಾಗ್ವಾದ|


ಶಿಗ್ಗಾಂವಿ(ಜು.25): ಕೊರೋನಾ ಹಿನ್ನೆಲೆ ಮಧ್ಯಾಹ್ನ 12 ಗಂಟೆ ನಂತರ ಪಟ್ಟಣವನ್ನು ಲಾಕ್‌ಡೌನ್‌ ಮಾಡಿರುವುದನ್ನು ವಿರೋಧಿಸಿ ವ್ಯಾಪಾರಸ್ಥರು ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ ನೇತೃತ್ವದಲ್ಲಿ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ವ್ಯಾಪಾರಸ್ಥರ ಮನವಿ ಮೇರೆಗೆ ಮಧ್ಯಾಹ್ನ 12 ಗಂಟೆ ನಂತರ ಲಾಕ್‌ಡೌನ್‌ ಗೆ ತಹಸೀಲ್ದಾರ್‌ ಪ್ರಕಾಶ ಕುದರಿ ಆದೇಶಿಸಿದ್ದರು. ರಾಜ್ಯದಲ್ಲಿ ಲಾಕ್‌ಡೌನ್‌ ಇಲ್ಲವೆಂದು ಮುಖ್ಯಮಂತ್ರಿ ಹೇಳಿದ ಮೇಲೂ ಪಟ್ಟಣದಲ್ಲಿ ಅಂಗಡಿ ಮುಚ್ಚಲು ಪೊಲೀಸರು ಮುಂದಾದರು. ಈ ವೇಳೆ ವ್ಯಾಪಾರಸ್ಥರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದರು. ಈ ವೇಳೆ ಮಾತನಾಡಿದ ವ್ಯಾಪಾರಸ್ಥರು, ಕೊರೋನಾ ನಿಯಂತ್ರಣಕ್ಕೆ ಸ್ವಯಂಪ್ರೇರಿತವಾಗಿ ನಾವೇ 12 ಗಂಟೆ ಬಳಿಕ ಲಾಕ್‌ಡೌನ್‌ ಮಾಡುವಂತೆ ತಿಳಿಸಿದ್ದೇವು. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ರಾಜ್ಯದಲ್ಲಿ ಯಾವ ಭಾಗದಲ್ಲೂ ಲಾಕ್‌ಡೌನ್‌ ಇರುವುದಿಲ್ಲ ಎಂದು ಘೋಷಿಸಿದ್ದಾರೆ. ಹೀಗಾಗಿ ಇದೀಗ ವ್ಯಾಪಾರ ಮಾಡುತ್ತಿದ್ದೇವೆ. ನೀವು ತಡೆಯಲು ಬಂದರೆ ಹೇಗೆ ಎಂದು ಪ್ರಶ್ನಿಸಿದರು. ಆಗ ಸೋಮಣ್ಣ ಬೇಮಿನಮರದ, ವ್ಯಾಪಾರಸ್ಥರು ವ್ಯಾಪಾರ ನಡೆಸಲು ಅನುಕೂಲ ಮಾಡಿಕೊಡುವಂತೆ ಪೊಲೀಸರಿಗೆ ವಿನಂತಿಸಿದರು.

Tap to resize

Latest Videos

ರಾಣಿಬೆನ್ನೂರು: ಕೊರೋನಾ ಸೋಂಕಿತರ ಮೃತದೇಹಕ್ಕೆ ಮುಸ್ಲಿಂ ಯುವಕರಿಂದ ಸಂಸ್ಕಾರ

ಈ ಹಿಂದೆ ತಹಸೀಲ್ದಾರ್‌ ಜು. 5ರಿಂದ ಆಗಸ್ಟ್‌ 2ರ ವರೆಗೆ ಮಧ್ಯಾಹ್ನ 12 ಗಂಟೆ ಬಳಿಕ ಲಾಕ್‌ಡೌನ್‌ ಇರಲಿದೆ ಎಂದು ಹೊರಡಿಸಿದ್ದ ಆದೇಶವನ್ನು ಹಿಂಪಡೆಯಬೇಕು ಎಂದು ಇದೇ ವೇಳೆ ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣದ ಡಿವೈಎಸ್‌ಪಿ ಕಲ್ಲೇಶಪ್ಪ, ಸಿಪಿಐ ಬಸವರಾಜ ಹಳಬಣ್ಣವರ, ಪಿಎಸ್‌ಐ ಕೆ.ಎಸ್‌. ಹಳ್ಳಿ, ಪ್ರಕಾಶ ಹಾದಿಮನಿ, ಮಾಲತೇಶ ಸಾಲಿ, ವರ್ತಕರಾದ ಕುಮಾರ ಮಿರಜಕರ, ಷಣ್ಮುಖ ಕಡೆಮನಿ, ಉಮೇಶ ಗೌಳಿ, ರಾಗಿ ವಕೀಲರು, ಕೆ.ಎಸ್‌. ಭಗಾಡೆ, ಶ್ರೀಕಾಂತ ಬುಳ್ಳಕ್ಕನವರ ಸೇರಿದಂತೆ ಹಲವಾರು ಪ್ರಮುಖರು ಇದ್ದರು.

ಸಂಜೆ ತಾಲೂಕು ಪಂಚಾಯಿತಿ ಜರುಗಿದ ಸಭೆಯಲ್ಲಿ ವಿಪ ಮಾಜಿ ಸದಸ್ಯ ಸೋಮಣ್ಣ ಬೇವಿನಮರದ, ಶ್ರೀಕಾಂತ ಬುಳ್ಳಕ್ಕನವರ, ವರ್ತಕರು ತಹಸೀಲ್ದಾರ್‌ ಮಲ್ಲಿಕಾರ್ಜುಣ ಹೆಗ್ಗಣವರ ಅವರಿಗೆ ಲಾಕ್‌ಡೌನ್‌ ಆದೇಶ ತೆರವುಗೊಳಿಸುವಂತೆ ಮನವಿ ಸಲ್ಲಿಸಿದರು.
 

click me!