ಹುತಾತ್ಮ ಯೋಧರ ಹೆಸರಲ್ಲಿ 800 ಗಿಡಗಳ ‘ಕಾರ್ಗಿಲ್‌ ವನ’

By Kannadaprabha NewsFirst Published Jul 25, 2020, 10:11 AM IST
Highlights

ಸುಮಾರು ಐದು ಎಕರೆ ಬೆಲೆಬಾಳುವ ಕೃಷಿ ಭೂಮಿಯಲ್ಲಿ ಕೃಷಿಕರೊಬ್ಬರು, ಕಾರ್ಗಿಲ್‌ ಯುದ್ಧದ ಸಂದರ್ಭ ಮಡಿದ ಯೋಧರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಪೂರ್ವ ಯೋಜನೆ ಹಮ್ಮಿಕೊಂಡಿದ್ದಾರೆ. ಶುಕ್ರವಾರ ಅವರ ಹಸಿರು ನಿರ್ಮಾಣದ ಮಹಾನ್‌ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಬೆಳ್ತಂಗಡಿ(ಜು.25): ಸುಮಾರು ಐದು ಎಕರೆ ಬೆಲೆಬಾಳುವ ಕೃಷಿ ಭೂಮಿಯಲ್ಲಿ ಕೃಷಿಕರೊಬ್ಬರು, ಕಾರ್ಗಿಲ್‌ ಯುದ್ಧದ ಸಂದರ್ಭ ಮಡಿದ ಯೋಧರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಪೂರ್ವ ಯೋಜನೆ ಹಮ್ಮಿಕೊಂಡಿದ್ದಾರೆ. ಶುಕ್ರವಾರ ಅವರ ಹಸಿರು ನಿರ್ಮಾಣದ ಮಹಾನ್‌ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ತಾಲೂಕಿನ ಮುಂಡಾಜೆಯ ಭಿಡೆ ಮನೆತನದ ಧುಂಬೆಟ್ಟು ನಿವಾಸಿ ಸಚಿನ್‌ ಭಿಡೆ ಕಲ್ಪನೆ ಇದು. ಕಾರ್ಗಿಲ್‌ ವಿಜಯ ದಿನದ ನೆನಪಿಗಾಗಿ ತಮ್ಮ ಐದು ಎಕರೆ ಪಟ್ಟಾಜಾಗದಲ್ಲಿ 800 ವಿವಿಧ ಬಗೆಯ ಗಿಡಗಳನ್ನು ನೆಟ್ಟು, ಅವುಗಳನ್ನು ಪೋಷಿಸಲು ಮುಂದಾಗಿದ್ದಾರೆ. ತಾನು ಚಿಕ್ಕವನಿದ್ದಾಗ ತನ್ನ ತಂದೆ ಗಣೇಶ್‌ ಭಿಡೆಯವರು ಕಾರ್ಗಿಲ್‌ ಯುದ್ಧ ಸಂದರ್ಭದಲ್ಲಿ ಯೋಧರ ಕಷ್ಟಗಳನ್ನು ವಿವರಿಸಿ,ಒಂದಿಷ್ಟುಹಣವನ್ನು ನೀಡಿ, ಕಾರ್ಗಿಲ್‌ ನಿಧಿಗೆ ಮನಿ ಆರ್ಡರ್‌ ಮೂಲಕ ತನ್ನಲ್ಲಿ ಜಮಾ ಮಾಡಲು ಹೇಳಿರುವುದು ಈ ಕೆಲಸಕ್ಕೆ ಸ್ಫೂರ್ತಿ ಎಂದು ಅವರು ಹೇಳಿದ್ದಾರೆ.

ಅರಣ್ಯ ಇಲಾಖೆಯ ಮುಂಡಾಜೆ ಕಾಪು ನರ್ಸರಿಯಿಂದ ರಿಯಾಯಿತಿ ದರದಲ್ಲಿ ವಿವಿಧ ಜಾತಿಯ ಗಿಡಗಳನ್ನು ಪಡೆದು ಇಲ್ಲಿ ನೆಡಲಾಗುತ್ತದೆ. ಉದ್ದೇಶಿತ ಜಾಗಕ್ಕೆ ಕಾರ್ಗಿಲ್‌ ವನ ಎಂದು ನಾಮಕರಣಗೊಂಡಿದ್ದು, ಸಚಿನ್‌ ಭಿಡೆಯವರ ತಾಯಿ ಲತಾ ಗಣೇಶ ಭಿಡೆ ಉದ್ಘಾಟಿಸಿದರು.

ನಾಗರ ಪಂಚಮಿ ಹಬ್ಬದ ಬಗ್ಗೆ ಭಗವಾನ್ ಶ್ರೀಕೃಷ್ಣ ಹೇಳಿದ್ದೇನು..?

ಬೆಳ್ತಂಗಡಿ ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣ ಭಟ್‌, ಗೌರವಾಧ್ಯಕ್ಷ ಎಂ.ವಿ. ಭಟ್‌ ಮಾಜಿ ಸೈನಿಕರಾದ ಶ್ರೀಕಾಂತ ಗೋರೆ, ಜಗನ್ನಾಥ ಶೆಟ್ಟಿ, ಸುನಿಲ್‌ ಶೆಣೈ, ಪ್ರಸನ್ನ ಬಿ. ಶಿಶಿಲ, ರಾಮ್‌ ಭಟ್‌, ಹರೀಶ್‌ ರೈ, ಉಮೇಶ್‌ ಬಂಗೇರ, ಪರಿಸರವಾದಿ ದಿನೇಶ್‌ ಹೊಳ್ಳ, ಅವಿನಾಶ್‌ ಭಿಡೆ ಇದ್ದರು. ಬಾಲಚಂದ್ರ ನಾಯಕ್‌ ಸ್ವಾಗತಿಸಿ, ನಾರಾಯಣ ಪೂಜಾರಿ ವಂದಿಸಿದರು.

click me!