ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಗೆ ಸಭೆ: ಸಚಿವ ಎಸ್‌.ಟಿ.ಸೋಮಶೇಖರ್‌

By Kannadaprabha News  |  First Published Nov 19, 2022, 1:27 PM IST
  • ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪನೆಗೆ 25ರಂದು ಸಭೆ
  • ಆರ್‌ಬಿಐ ಜತೆ ಸಭೆ: ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌
  • ಮಂಗಳೂರಲ್ಲಿ 69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022 ಉದ್ಘಾಟನೆ, ಐವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಮಂಗಳೂರು (ನ.19) : ಹಾಲು ಉತ್ಪಾದಕರ ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗಾಗಿ ‘ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌’ ಸ್ಥಾಪನೆ ಕುರಿತಂತೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಜತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ. ನ.25ರಂದು ಆರ್‌ಬಿಐ ಜತೆ ಈ ಕುರಿತು ಸಭೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ. ಈ ಬ್ಯಾಂಕ್‌ ಸ್ಥಾಪನೆಯಾದರೆ, ಮೊದಲ ಬಾರಿಗೆ ಅರ್ಬನ್‌ ಕೋ ಆಪರೇಟಿವ್‌ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಮಹಿಳೆಯರಿಗೆ ಪ್ರತ್ಯೇಕ ಬ್ಯಾಂಕ್‌ ಕೊಡುಗೆ ನೀಡಿದಂತಾಗುತ್ತದೆ ಎಂದು ರಾಜ್ಯ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಬೆಂಗಳೂರು, ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ನೇತೃತ್ವದಲ್ಲಿ ಇಲ್ಲಿನ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ‘69ನೇ ಅಖಿಲ ಭಾರತ ಸಹಕಾರ ಸಪ್ತಾಹ-2022’ ಚಾಲನೆ ನೀಡಿ ಅವರು ಮಾತನಾಡಿದರು.

Tap to resize

Latest Videos

ರಾಜ್ಯದ ಹಿರಿಮೆಗೆ ಕುಂದಾಗದಂತೆ ನೋಡಿಕೊಳ್ಳಬೇಕಿದೆ: ಸಚಿವ ಸೋಮಶೇಖರ್‌

ರಾಜ್ಯದಲ್ಲಿ 15 ಹಾಲು ಉತ್ಪಾದಕರ ಒಕ್ಕೂಟಗಳಿದ್ದು, 25.50 ಲಕ್ಷ ಮಂದಿ ಹೈನುಗಾರರಿದ್ದಾರೆ. ಇವರಲ್ಲಿ 9 ಲಕ್ಷ ಮಹಿಳಾ ಹೈನುಗಾರರಿದ್ದಾರೆ. ಇವರಿಗೆ ನೆರವಾಗುವ ದಿಶೆಯಲ್ಲಿ ನಂದಿನಿ ಕ್ಷೀರ ಸಮೃದ್ಧಿ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಉದ್ದೇಶಿಸಿದ್ದು, ಇದಕ್ಕೆ ಶೀಘ್ರವೇ ಚಾಲನೆ ಸಿಗಲಿದೆ ಎಂದರು.

ರೈತರಿಗೆ ಶೂನ್ಯ ಬಡ್ಡಿದರ ಸಾಲ: ಬಜೆಟ್‌ನಲ್ಲಿ ಸಿಎಂ ಘೋಷಿಸಿದಂತೆ 33 ಲಕ್ಷ ರೈತರಿಗೆ, ಅದರಲ್ಲೂ 3 ಲಕ್ಷ ಹೊಸ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 24 ಸಾವಿರ ಕೋಟಿ ರು.ಗಳಲ್ಲಿ ಪ್ರಥಮ ಹಂತದಲ್ಲಿ 13 ಕೋಟಿ ರು. ಸಾಲ ಸೌಲಭ್ಯ ಯೋಜನೆ ಜಾರಿಗೊಳಿಸಲಾಗುತ್ತಿದೆ. 5,700 ಫ್ಯಾಕ್ಸ್‌ ಬ್ಯಾಂಕ್‌ಗಳಲ್ಲಿ ಸಾಲ ನೀಡಿಕೆ ಶುರುವಾಗಿದೆ. ಇದರಲ್ಲಿ ಸ್ವಸಹಾಯ ಸಂಘ, ಎಸ್‌ಸಿ ಎಸ್‌ಟಿ ಸಮುದಾಯದ ರೈತರು ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ಸೌಲಭ್ಯ ಪಡೆಯಲಿದ್ದಾರೆ ಎಂದರು.

ಯಶಸ್ವಿನಿ ಯೋಜನೆಯನ್ನು ಸಹಕಾರಿ ಕ್ಷೇತ್ರದಲ್ಲಿ ಮರು ಜಾರಿಗೆ ತರಲಾಗಿದೆ. ಈ ಯೋಜನೆಯಡಿ 300 ಕೋಟಿ ರು.ಗಳಲ್ಲಿ ಪ್ರಥಮ ಹಂತದಲ್ಲಿ 100 ಕೋಟಿ ರು.ಗಳನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಈ ಯೋಜನೆಯ ಎಡರುತೊಡರು ನಿವಾರಿಸಿ ಮರು ಜಾರಿಗೊಳಿಸಲಾಗಿದ್ದು, ಸಹಕಾರಿಗಳಿಗೆ ಜನಪ್ರಿಯ ಯೋಜನೆ ಇದಾಗಿದೆ ಎಂದರು.

ಕ್ಲಪ್ತ ಸಾಲ ವಸೂಲಿಗೆ ಶ್ಲಾಘನೆ: ನಬಾರ್ಡ್‌ನಿಂದ ನೀಡುವ ಸಾಲದ ಹಣ ದ್ವಿಗುಣ ಗೊಳಿಸಲು ಕ್ರಮವಹಿಸಲಾಗುತ್ತಿದೆ. ಸಾಲ ಪಡೆದವರಿಗೆ ಸಹಕಾರಿ ಸಂಘಗಳಲ್ಲಿ ಕಿರುಕುಳ ನೀಡುತ್ತಿಲ್ಲ. ರೈತರು ಸರಿಯಾದ ಸಮಯಕ್ಕೆ ಸಾಲ ಮರುಪಾವತಿ ಮಾಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ಗಳಲ್ಲಿ ಶೇ.90, ಅದರಲ್ಲೂ ವಿಶೇಷವಾಗಿ ಸ್ವಸಹಾಯ ಗುಂಪುಗಳಿಂದ ಶೇ.100 ಸಾಲ ಮರುಪಾವತಿ ಆಗುತ್ತಿದೆ ಎಂದು ಸಚಿವರು ಶ್ಲಾಘಿಸಿದರು.

ಎಲ್ಲ ಕ್ಷೇತ್ರದಲ್ಲಿ ಸಹಕಾರ ಕ್ಷೇತ್ರ ಮುಂಚೂಣಿಯಲ್ಲಿದೆ. ಭಾರತದಲ್ಲಿ ಕರ್ನಾಟಕ ಎರಡನೇ ಮುಂಚೂಣಿ ರಾಜ್ಯವಾಗಿರುವುದು ನಮ್ಮೆಲ್ಲರ ಹೆಮ್ಮೆ. ಠೇವಣಿದಾರರ ವಿಶ್ವಾಸ ಉಳಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

ಡಿಸಿಸಿ ಬ್ಯಾಂಕ್‌ ನಂಬರ್‌ ಒನ್‌: ಸಹಕಾರ ಕ್ಷೇತ್ರ ಜೀವಂತ ಇದೆ ಎಂಬುದಕ್ಕೆ ಇಲ್ಲಿ ಸೇರಿರುವ ಜನರೇ ಸಾಕ್ಷಿ. ಮಂಗಳೂರು ಭಾಗದಲ್ಲಿ ಸಹಕಾರ ಕ್ಷೇತ್ರ ಗಟ್ಟಿಯಾಗಿದೆ. ಸಹಕಾರ ಕ್ಷೇತ್ರ ಸಹಸ್ರಾರು ಜನರಿಗೆ ಉದ್ಯೋಗವಕಾಶ ಕಲ್ಪಿಸುವುದರ ಜೊತೆಗೆ ಕೋಟ್ಯಂತರ ಜನರಿಗೆ ಸಾಕಷ್ಟುಅನುಕೂಲ ಕಲ್ಪಿಸಿದೆ. ರಾಜ್ಯದ 21 ಡಿಸಿಸಿ ಬ್ಯಾಂಕ್‌ಗಳಲ್ಲಿ ಮಂಗಳೂರು ಡಿಸಿಸಿ ಬ್ಯಾಂಕ್‌ ನಂಬರ್‌ ಒನ್‌ ಸ್ಥಾನದಲ್ಲಿದೆ. ಸಹಕಾರ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ ಸಹಕಾರಿ ಗಣ್ಯರಿಗೆ ಗೌರವ ಸಲ್ಲಿಸುವುದರ ಜತೆಗೆ ಪ್ರತಿವರ್ಷ ಸಹಕಾರ ರತ್ನ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.

ಹಾಲು ಮಾರಾಟ ದರ ಏರಿಕೆ ಬೇಡ:

ಮಂಗಳೂರು ಶಾಸಕ ಯು.ಟಿ. ಖಾದರ್‌ ಮಾತನಾಡಿ, ಹತ್ತು ಕೈಗಳು ಒಂದೇ ಮನಸ್ಸಿನಿಂದ ಒಟ್ಟು ಸೇರಿದಾಗ ಮಾತ್ರ ಯಶಸ್ಸು ಸಾಧ್ಯ. ಇದು ಸಹಕಾರಿ ಕ್ಷೇತ್ರದಿಂದ ಸಾಧ್ಯವಾಗಿದೆ. ರಾಜೇಂದ್ರ ಕುಮಾರ್‌ ಅವರ ಅಹರ್ನಿಶಿ ಪರಿಶ್ರಮದಿಂದಾಗಿ ಸಹಕಾರಿಗಳು ಇಷ್ಟುದೊಡ್ಡ ಸಂಖ್ಯೆಯಲ್ಲಿ ಸೇರಿದ್ದಾರೆ. ಕೆಎಂಎಫ್‌ ಉತ್ತಮ ಕೆಲಸ ಮಾಡುತ್ತಿದೆ. ಆದರೆ ಮಾರಾಟದ ಹಾಲಿಗೆ ಏಕಾಏಕಿ ದರ ಏರಿಸುವ ಮೂಲಕ ಸರ್ಕಾರÜ ಬಡವರ ಹೊಟ್ಟೆಗೆ ಹೊಡೆಯುವ ಕೆಲಸ ಮಾಡಿದೆ. ಅದರ ಬದಲು ಸರ್ಕಾರÜ ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡುವ ಮೂಲಕ ನೆರವಾಗಬೇಕು ಎಂದರು.

ಸಹಕಾರಿ ಚಳವಳಿ ವ್ಯಾಪಕ:

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆ ವಹಿಸಿ, ಸಹಕಾರಿ ಸಪ್ತಾಹ ಸಹಕಾರ ಕ್ಷೇತ್ರಕ್ಕೆ ಶಕ್ತಿ ತುಂಬಲು ಮಹತ್ತರ ಕಾರ್ಯಕ್ರಮ. ಸಹಕಾರದಿಂದ ಅಭಿವೃದ್ಧಿ ಸಾಧ್ಯ. ಡಾ.ರಾಜೇಂದ್ರ ಕುಮಾರ್‌ ಅವರು ಸಹಕಾರಿ ಕ್ಷೇತ್ರ ಸಮೃದ್ಧಿಗೆ ಕೊಡುಗೆ ನೀಡಿದ್ದಾರೆ. ಅಲ್ಲದೆ ಸಾಮಾಜಿಕವಾಗಿಯೂ ಸಹಕಾರ ನೀಡಿದ್ದಾರೆ. ಸಹಕಾರ ರಂಗದ ಮೂಲ ಪುರುಷ ದಿ.ಮೊಳಹಳ್ಳಿ ಶಿವರಾಯರು ಪ್ರಾರಂಭಿಸಿದ ಸಹಕಾರ ಚಳವಳಿ ಈಗ ಎಲ್ಲೆಡೆ ವ್ಯಾಪಿಸಿದೆ ಎಂದರು.

ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್‌ ಕುಮಾರ್‌ ಕೊಡ್ಗಿ, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ, ದ.ಕ. ಮತ್ತು ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಮಹಾಮಂಡಳದ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಸಹಕಾರ ಸಂಘಗಳ ನಿಬಂಧಕರಾದ ಕ್ಯಾಪ್ಟನ್‌ ಡಾ. ಕೆ.ರಾಜೇಂದ್ರ ಮತ್ತಿತರರಿದ್ದರು. ನಿರ್ದೇಶಕ ಟಿ.ಜಿ. ರಾಜರಾಮ ಭಟ್‌ ಸ್ವಾಗತಿಸಿದರು. ದ.ಕ. ಸಹಕಾರಿ ಯೂನಿಯನ್‌ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿವಂದಿಸಿದರು. ನಿತೀಶ್‌ ಶೆಟ್ಟಿಎಕ್ಕಾರ್‌ ನಿರೂಪಿಸಿದರು.

ನಾರಿ ಶಕ್ತಿ, ಸಹಕಾರಿ ಶಕ್ತಿಯೇ ಸರ್ವಸ್ವ: ಡಾ.ಎಂ.ಎನ್‌.ಆರ್‌

ಸನ್ಮಾನ ಸ್ವೀಕರಿಸಿ ಮಾತಾಡಿದ ಡಾ. ಎಂ.ಎನ್‌. ರಾಜೇಂದ್ರ ಕುಮಾರ್‌, ದೇವರ ಆಶೀರ್ವಾದದಿಂದ ನಾನು ಎರಡನೇ ಬಾರಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನು ಇಷ್ಟುಬೆಳೆಯಲು ಕಾರಣ ನೀವು. ನಾನು ಎನ್ನುವ ಪದ ಅಹಂಕಾರ ಸೂಚಕವಾಗಿದ್ದು ನನ್ನ ಏಳಿಗೆಯಲ್ಲಿ ಸಹಕಾರಿಗಳ ಪಾತ್ರ ಅಧಿಕವಾಗಿದೆ. ನಮ್ಮ ಜಿಲ್ಲೆಗೆ ಇಂದು ಸಹಕಾರ ರತ್ನ ಪ್ರಶಸ್ತಿ ಬಂದಿರುವುದು ಸಂತಸದ ವಿಚಾರವಾಗಿದೆ. ಜಿಲ್ಲೆಯ ಸಹಕಾರಿ ಕ್ಷೇತ್ರವನ್ನು ಪರಿಗಣಿಸಿದ್ದಕ್ಕಾಗಿ ಸಚಿವರು ಮತ್ತು ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಲ್ಲರೂ ಒಗ್ಗಟ್ಟಾಗಿದ್ದಾಗ ಮಾತ್ರ ಗೆಲುವು ಸಾಧ್ಯವಿದೆ. ನಮ್ಮ ನವೋದಯ ಸ್ವಸಹಾಯ ಗುಂಪಿನ ಸದಸ್ಯ ಮಹಿಳೆಯರು ಶೇ.ನೂರಕ್ಕೆ ನೂರು ಸಾಲ ಮರುಪಾವತಿ ಮಾಡಿರುವುದು ಸಂಘಟನೆಯ ಹೆಗ್ಗಳಿಕೆಯಾಗಿದೆ. ನಾರಿ ಶಕ್ತಿ ಮತ್ತು ಸಹಕಾರಿ ಶಕ್ತಿ ಒಂದಾದರೆ ನಮ್ಮನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.

ವಿಜ್ರಂಭಣೆಯ ಸಹಕಾರ ಜಾಥಾ

ಬೆಳಗ್ಗೆ ಕೊಡಿಯಾಲಬೈಲ್‌ನಲ್ಲಿರುವ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಆವರಣದಿಂದ ಸಮಾರಂಭ ನಡೆಯುವ ಕರಾವಳಿ ಉತ್ಸವ ಮೈದಾನ ವರೆಗೆ ಬೃಹತ್‌ ‘ಸಹಕಾರ ಜಾಥಾ’ ನಡೆಯಿತು. ಬ್ಯಾಂಡ್‌ಸೆಟ್‌, ಚೆಂಡೆ, ಬಣ್ಣ ಬಣ್ಣದ ಛತ್ರಗಳೊಂದಿಗೆ ಸಹಕಾರದ ಮಹತ್ವ ಸಾರುವ ಟ್ಯಾಬ್ಲೋ, ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಪ್ರತಿಮೆ ಇರುವ ರಥ ಸೇರಿದಂತೆ 12ಕ್ಕೂ ಅಧಿಕ ಟ್ಯಾಬ್ಲೋಗಳು, ಸಹಕಾರಿಗಳು ಜಾಥಾದಲ್ಲಿ ಸಭಾಂಗಣಕ್ಕೆ ಸಾಗಿ ಬಂದರು.

ಯಾರೂ ಸಿಗದಿದ್ದಾಗ ವಿಶ್ವನಾಥ್‌ ಆತ್ಮೀಯರಿಗೆ ಮದ್ದಾಕುತ್ತಾರೆ: ಸಚಿವ ಸೋಮಶೇಖರ್‌

ನಂದಿನಿ ಸ್ಪೈಸಿ ಮಜ್ಜಿಗೆ, ಉಪ್ಪು ರಹಿತ ಬೆಣ್ಣೆ ಉತ್ಪನ್ನ ಬಿಡುಗಡೆ

ಇದೇ ಸಂದರ್ಭ ದ.ಕ. ಸಹಕಾರಿ ಹಾಲು ಒಕ್ಕೂಟದಿಂದ ಸ್ಪೈಸಿ ಮಜ್ಜಿಗೆ ಹಾಗೂ ಉಪ್ಪುರಹಿತ ಬೆಣ್ಣೆ ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಯಿತು.

ಡಾ.ರಾಜೇಂದ್ರ ಕುಮಾರ್‌ ಚಾಣಕ್ಯ!

ಡಾ. ರಾಜೇಂದ್ರ ಕುಮಾರ್‌ ಅವರನ್ನು ಕೆಣಕಿದರೆ ಯಾರೂ ಶಾಸಕರಾಗಲು ಸಾಧ್ಯವಿಲ್ಲ ಎನ್ನುವುದನ್ನು ಮಂಗಳೂರು ಮಾತ್ರವಲ್ಲ ಉತ್ತರ ಕನ್ನಡದಲ್ಲೂ ಸಾವಿರಾರು ಸಂಖ್ಯೆಯ ಸಹಕಾರಿಗಳನ್ನು ಸೇರಿಸುವ ಮೂಲಕ ತೋರಿಸಿಕೊಟ್ಟಿದ್ದಾರೆ. ಅವರೊಬ್ಬ ಸಹಕಾರಿ ರಂಗದ ಚಾಣಕ್ಯ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಬಣ್ಣಿಸಿದರು.

ಸಹಕಾರಿ ಮಹಾಮಂಡಳದ ಚುನಾವಣೆ ಯಾವಾಗ ನಡೆಯುತ್ತದೆ ಎಂದು ಯಾರಿಗೂ ಗೊತ್ತಾಗುವುದಿಲ್ಲ, ಆದರೆ ಡಾ.ರಾಜೇಂದ್ರ ಕುಮಾರ್‌ ಅವರು ಅಧ್ಯಕ್ಷರಾಗುವ ಮೂಲಕ ಅಭಿವೃದ್ಧಿಗೆ ಚಾಲನೆ ನೀಡುತ್ತಿದ್ದಾರೆ ಎಂದರು.

ಡಾ.ಎಂ.ಎನ್‌.ಆರ್‌. ಮಾದರಿ

ಅಭಿನಂದನಾ ಭಾಷಣ ಮಾಡಿದ ಬ್ಯಾಂಕಿನ ನಿರ್ದೇಶಕ ದೇವಿಪ್ರಸಾದ್‌ ಶೆಟ್ಟಿಬೆಳಪು, 12,800 ಕೋಟಿ ರು. ವ್ಯವಹಾರ ನಡೆಸುವ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕ್‌ ಸಾಧನೆ ಮಾಡಿದರೆ ಅದಕ್ಕೆ ರಾಜೇಂದ್ರ ಕುಮಾರ್‌ ಅವರ ಕಾರ್ಯವೈಖರಿ ಕಾರಣವಾಗಿದೆ. ರಾಜೇಂದ್ರ ಕುಮಾರ್‌ ಅವರ ಸಾಧನೆ ಉಡುಪಿ, ದ.ಕ. ಜಿಲ್ಲೆಯ ಸಹಕಾರಿಗಳಿಗೆ ಹೆಮ್ಮೆಯ ವಿಚಾರವಾಗಿದೆ. ಲಕ್ಷಾಂತರ ನವೋದಯ ಸ್ವಸಹಾಯ ಗುಂಪುಗಳನ್ನು ರಚನೆ ಮಾಡಿ ಮಹಿಳೆಯರ ಕೈಗೆ ಶಕ್ತಿ ತುಂಬಿರುವ ರಾಜೇಂದ್ರ ಕುಮಾರ್‌ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.

ಐವರಿಗೆ ಸಹಕಾರ ರತ್ನ ಪ್ರಶಸ್ತಿ ಪ್ರದಾನ

ಕರ್ನಾಟಕ ಸರ್ಕಾರ ರಾಜ್ಯ ಮಟ್ಟದಲ್ಲಿ ನೀಡುವ ‘ಸಹಕಾರ ರತ್ನ’ ಪ್ರಶಸ್ತಿಗೆ ಅವಿಭಜಿತ ದ.ಕ. ಜಿಲ್ಲೆಯಿಂದ ಈ ಬಾರಿ ಐವರು ಆಯ್ಕೆಗೊಂಡಿದ್ದಾರೆ. ದ.ಕ.ದಿಂದ ಕೊಂಕೋಡಿ ಪದ್ಮನಾಭ, ನಿತ್ಯಾನಂದ ಮುಂಡೋಡಿ, ದಂಬೆಕಾನ ಸದಾಶಿವ ರೈ, ಉಡುಪಿ ಜಿಲ್ಲೆಯಿಂದ ಜಯಕರ ಶೆಟ್ಟಿಇಂದ್ರಾಳಿ ಮತ್ತು ಯಶ್ಪಾಲ್‌ ಸುವರ್ಣ ಇವರಿಗೆ ‘ಸಹಕಾರ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

click me!