ರಿಪೇರಿಗಾಗಿ ಬಿಟ್ಟಿದ್ದ ಕಾರಿನ ಕೀ ಎಗರಿಸಿ ಕಾರು ಕದ್ದ ಮೆಕ್ಯಾನಿಕ್‌!

By Kannadaprabha NewsFirst Published Nov 17, 2019, 8:13 AM IST
Highlights

ಗ್ಯಾರೇಜಿಗೆ ರಿಪೇರಿಗೆ ಬಂದಿದ್ದ ಕಾರನ್ನೇ ಕದ್ದು ವ್ಯಕ್ತಿಯೋರ್ವ ಪರಾರಿಯಾದ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು ಈ ಕಳ್ಳನನ್ನು ಇದೀಗ ಬಂಧಿಸಲಾಗಿದೆ. 

ಬೆಂಗಳೂರು [ನ.17]:  ತನ್ನ ಗ್ಯಾರೇಜ್‌ಗೆ ರಿಪೇರಿ ಬಂದಿದ್ದ ವ್ಯಾಪಾರಿಯೊಬ್ಬರ ಕಾರಿನ ಕೀ ಎಗರಿಸಿ ಬಳಿಕ ಆ ಕಾರು ಕದ್ದು ಪರಾರಿಯಾಗಿದ್ದ ಮೆಕ್ಯಾನಿಕ್‌ನನ್ನು ಶ್ರೀರಾಮಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಮಿಳುನಾಡು ಮೂಲದ ಕಾಮರಾಜ ಬಂಧಿತನಾಗಿದ್ದು, ಆರೋಪಿಯಿಂದ 6.30 ಲಕ್ಷ ರು. ಮೌಲ್ಯದ ಕ್ವಾಲಿಸ್‌ ಹಾಗೂ ಬೈಕ್‌ ಜಪ್ತಿ ಮಾಡಲಾಗಿದೆ. ಕೆಲವು ದಿನಗಳ ಹಿಂದೆ ಶೇಷಾದ್ರಿಪುರದ ನಿವಾಸಿ ದೇವರಾಜ್‌ ಎಂಬುವರ ಕಾರು ಕಳ್ಳತನವಾಗಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡ ಪೊಲೀಸರು, ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದಾರೆ.

57 ವರ್ಷದ ಕಾಮರಾಜ್‌, ಮೊದಲು ತಮಿಳುನಾಡಿನ ತಮ್ಮೂರಿನಲ್ಲಿ ಸೆಕೆಂಡ್‌ ಹ್ಯಾಂಡ್‌ ಕಾರುಗಳ ಮಾರಾಟಗಾರನಾಗಿದ್ದ. ಆದರೆ ಆ ವ್ಯವಹಾರದಲ್ಲಿ ನಷ್ಟಅನುಭವಿಸಿ ಸಂಕಷ್ಟಕ್ಕೆ ಸಿಲುಕಿದ ಆತ, ಬಳಿಕ ಉದ್ಯೋಗ ಅರಸಿ ನಗರಕ್ಕೆ ಬಂದಿದ್ದ. ಕೊನೆಗೆ ಶೇಷಾದ್ರಿಪುರದ ಸ್ವಸ್ತಿಕ್‌ ಸಮೀಪ ಗ್ಯಾರೇಜ್‌ನಲ್ಲಿ ಆತನಿಗೆ ಮೆಕ್ಯಾನಿಕ್‌ ಕೆಲಸ ಸಿಕ್ಕಿತು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಿರುವಾಗ ಕೆಲ ದಿನಗಳ ಹಿಂದೆ ವ್ಯಾಪಾರಿ ದೇವರಾಜ್‌ ಅವರು, ತಮ್ಮ ಕ್ವಾಲಿಸ್‌ ಅನ್ನು ರಿಪೇರಿಗೆ ಕಾಮರಾಜ್‌ ಗ್ಯಾರೇಜ್‌ಗೆ ಬಿಟ್ಟಿದ್ದರು. ಆ ವೇಳೆ ಅವರ ಕಾರು ಕೀ ಎಗರಿಸಿದ ಆರೋಪಿ, ನ.6ರಂದು ದೇವರಾಜ್‌ ಮನೆ ಮುಂದೆ ನಿಲ್ಲಿಸಿದ್ದ ಕಾರು ಕದ್ದು ಪರಾರಿಯಾಗಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ಈ ಕಳ್ಳತನ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು, ಕಾರನ್ನು ಯಾರು ರಿಪೇರಿ ಮಾಡಿದ್ದರು ಎಂಬ ಮಾಹಿತಿ ಸಂಗ್ರಹಿಸಿದರು. ಆಗ ಕಾರು ಕಳ್ಳತನವಾದ ದಿನದಿಂದ ಗ್ಯಾರೇಜ್‌ಗೆ ಕಡೆ ಕಾಮರಾಜ್‌ ಸಹ ಬಂದಿರಲಿಲ್ಲ. ಅಲ್ಲದೆ, ಆ ಗ್ಯಾರೇಜ್‌ ಅಕ್ಕಪಕ್ಕದ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿದಾಗ ದೇವರಾಜ್‌ ಕಾರಿನ ಸಂಚಾರದ ದೃಶ್ಯಸಿಕ್ಕಿತು. ಈ ಸುಳಿವು ಬೆನ್ನಹತ್ತಿದಾಗ ಕೊನೆಗೆ ಆರೋಪಿ ಸಿಕ್ಕಿಬಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

click me!