
ವಿಜಯಪುರ (ಜೂ.07): ನನ್ನ ಜೀವನವಿಡೀ ಸಿದ್ಧೇಶ್ವರ ಸ್ವಾಮೀಜಿಗಳ ಆಶಯದಂತೆ ಕೆಲಸ ಮಾಡುತ್ತೇನೆ. ಸಿದ್ಧೇಶ್ವರ ಸ್ವಾಮೀಜಿ ಆಶೀರ್ವಾದದಿಂದ ಜನಸೇವೆ, ಅಭಿವೃದ್ಧಿ ಕಾರ್ಯ ಕೈಗೊಂಡಿದ್ದೇನೆ. ಅವರ ಕಿವಿಮಾತು ಚಾಚೂ ತಪ್ಪದೆ ಪಾಲಿಸುತ್ತ ರಾಜ್ಯದ ಅಭಿವೃದ್ಧಿಗೆ ಸಮಯ ಮೀಸಲಿಟ್ಡಿದ್ದೇನೆ. ಶ್ರೀಗಳ ಆಶೀರ್ವಾದ ನನಗೆ ಕಾಯಕ ಮಾಡಲು ಸ್ಫೂರ್ತಿಯಾಗಿದ್ದು, ಈಗ ಮಾಡುತ್ತಿರುವ ಕೆಲಸ ಕಾರ್ಯಗಳ ಬಗ್ಗೆ ನನಗೆ ಸಂತೃಪ್ತಿ ಇದೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ ಹೇಳಿದರು.
ನೂತನ ಸಂಪುಟದಲ್ಲಿ ಸಚಿವರಾದ ನಂತರ ಇದೇ ಮೊದಲ ಬಾರಿಗೆ ತವರು ಜಿಲ್ಲೆಗೆ ಆಗಮಿಸಿದ ಕೈಗಾರಿಕೆ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲರು ನೇರವಾಗಿ ನಗರದ ಸಿದ್ಧೇಶ್ವರ ಸ್ವಾಮೀಜಿಗಳ ಜ್ಞಾನಯೋಗಾಶ್ರಮಕ್ಕೆ ತೆರಳಿ ಪೂಜೆ ಸಲ್ಲಿಸಿ ಶ್ರೀಗಳಿಂದ ಆಶೀರ್ವಾದ ಪಡೆದ ಬಳಿಕ ಮಾತನಾಡಿದರು. ಜ್ಞಾನಯೋಗಾಶ್ರಮದ ವೇದಾಂತ ಕೇಸರಿ ಮಲ್ಲಿಕಾರ್ಜುನ ಸ್ವಾಮೀಜಿಗಳ ಗದ್ದುಗೆಗೆ ಪೂಜೆ ಸಲ್ಲಿಸಿದ ಸಚಿವರನ್ನು ಆಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ ಸಿದ್ಧೇಶ್ವರ ಸ್ವಾಮೀಜಿಯವರು ರಚಿಸಿದ ಮೊದಲ ಕೃತಿ ವಚನ ಚಿಂತನ ನೀಡಿ ಆಶೀರ್ವದಿಸಿದ ಬಸವಲಿಂಗ ಸ್ವಾಮೀಜಿ, 21 ವರ್ಷಗಳ ಹಿಂದೆ ಸಿದ್ಧೇಶ್ವರ ಸ್ವಾಮೀಜಿಗಳು ಇದೇ ದಿನದಂದು 9 ಜನರಿಗೆ ಸನ್ಯಾಸ ದೀಕ್ಷೆ ನೀಡಿದ್ದರು. ಇದೇ ದಿನ ಸಚಿವರು ಆಶ್ರಮಕ್ಕೆ ಭೇಟಿ ನೀಡಿದ ಯೋಗಾಯೋಗ ಬಂದಿದೆ.
ನನ್ನ ಜೀವಮಾನದಲ್ಲಿ ಬೇಸಿಗೆಯಲ್ಲೂ ಹಳ್ಳಗಳು ತುಂಬಿ ಹರಿಯುತ್ತಿರುವುದನ್ನು ಕಂಡು ಸಂತಸವಾಗಿದೆ. ಇದಕ್ಕೆ ಸಚಿವ ಎಂ.ಬಿ. ಪಾಟೀಲ ಅವರು ಕೈಗೊಂಡಿರುವ ನೀರಾವರಿ ಯೋಜನೆಗಳು ಕಾರಣವಾಗಿವೆ. ಸಚಿವರು ಸಿದ್ಧೇಶ್ವರ ಸ್ವಾಮೀಜಿಗಳ ಮಾತನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಅಪ್ಪಟ ಭಕ್ತರಾಗಿದ್ದಾರೆ. ಶ್ರೀಗಳು ಹೇಳಿದಂತೆ ಎಂ.ಬಿ. ಪಾಟೀಲರು ಜನಮನದಲ್ಲಿ ಯಾವಾಗಲೂ ಜಲಸಂಪನ್ಮೂಲ ಸಚಿವರಾಗಿ ಉಳಿದಿದ್ದಾರೆ. ಕೊಟ್ಟ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವ ವ್ಯಕ್ತಿತ್ವ ಅವರಾಗಿದ್ದು, ಇನ್ನೂ ಉನ್ನತ ಸ್ಥಾನಕ್ಕೇರಲಿ ಎಂದು ಹಾರೈಸಿದರು.
ಅಮೃತಾನಂದ ಸ್ವಾಮೀಜಿ ಬಾಲಗಾಂವ, ಹರ್ಷಾನಂದ ಸ್ವಾಮೀಜಿ, ಪ್ರಸಾದ ಸ್ವಾಮೀಜಿ, ಜಗನು ಮಹಾರಾಜ, ವಿಡಿಎ ಅಧ್ಯಕ್ಷ ಡಾ.ಗಂಗಾಧರ ಸಂಬಣ್ಣಿ, ಮುಖಂಡರಾದ ಸಂಗು ಸಜ್ಜನ, ವಿ.ಸಿ.ನಾಗಠಾಣ, ಮಲ್ಲಿಕಾರ್ಜುನ ಹಳ್ಳದ, ಪಿ.ಎಸ್. ಬಿರಾದಾರ, ಘನಶ್ಯಾಮ ತೋಶ್ನಿವಾಲ, ಶಿವಾನಂದ ಸಂಖ, ವಿಠ್ಠಲಗೌಡ ಬಿರಾದಾರ ಇತರರು ಉಪಸ್ಥಿತರಿದ್ದರು. ನಂತರ ಸಚಿವರು ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀಮತಿ ಬಂಗಾರಮ್ಮ ಸಜ್ಜನ ಆವರಣದಲ್ಲಿರುವ ಸಂಸ್ಥೆಯ ದಿ. ಶ್ರೀ ಬಿ. ಎಂ. ಪಾಟೀಲ, ವಚನ ಪಿತಾಮಹ ಡಾ.ಫ.ಗು. ಹಳಕಟ್ಟಿ ಸಮಾದಿ, ಬಂಥನಾಳ ಶಿವಯೋಗಿಗಳ ದೇವಸ್ಥಾನ ಹಾಗೂ 770 ಅಮರಗಣಂಗಳ ಲಿಂಗದ ಗುಡಿಗೆ ತೆರಳಿ ನಮನ ಸಲ್ಲಿಸಿದರು.
ಸಾರ್ವಜನಿಕ ಜೀವನದಲ್ಲಿ ಸದಾ ನನ್ನ ಬೆನ್ನುತಟ್ಟಿ ಪ್ರೋತ್ಸಾಹಿಸುತ್ತ, ಮಾರ್ಗದರ್ಶನ ನೀಡಿದ ಮಹಾನ್ ಸಂತ, ಜ್ಞಾನಯೋಗಿ ಸಿದ್ದೇಶ್ವರ ಸ್ವಾಮಿಗಳು ನಡೆದಾಡಿದ ಪುಣ್ಯಭೂಮಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದು ಧನ್ಯನಾಗಿದ್ದೇನೆ. ಬೆಂಗಳೂರಿನಿಂದ ಬಂದು ನೇರವಾಗಿ ಆಶ್ರಮಕ್ಕೆ ಮೊದಲ ಭೇಟಿ ನೀಡಿದ್ದೇನೆ. ಶ್ರೀಗಳು ಮತ್ತು ಬಸವಾದಿ ಶರಣರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಜೀವನಪೂರ್ತಿ ಶ್ರೀಗಳ ಆಶಯದಂತೆ ನಡೆಯುತ್ತೇನೆ.
-ಎಂ.ಬಿ. ಪಾಟೀಲ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವರು