ಚಿಕ್ಕಮಗಳೂರು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಗರಿಗೆದರಿದೆ. ಹೆಚ್ಚಿನ ಸಂಖ್ಯೆ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುತ್ತಿದ್ದಾರೆ.
ಆರ್. ತಾರಾನಾಥ್
ಚಿಕ್ಕಮಗಳೂರು [ಜ.30]: ಹಸಿರು ಮಲೆಗಳ ನಾಡು, ಆಸ್ತಿಕರ ಶ್ರದ್ಧಾಕೇಂದ್ರ, ಜೀವನದಿಗಳ ತವರೂರು ಕಾಫಿ ಕಂಪಿನ ನಾಡು ಚಿಕ್ಕಮಗಳೂರು ಜಿಲ್ಲೆ ಪ್ರವಾಸೋದ್ಯಮದಲ್ಲಿ ಮತ್ತೆ ಜನಪ್ರಿಯಗೊಳ್ಳುತ್ತಿದೆ.
ಕಳೆದ ಐದು ವರ್ಷಗಳ ಅಂಕಿ ಅಂಶಗಳನ್ನು ತಾಳೆ ಹಾಕಿ ನೋಡಿದರೆ ಹಿಂದಿನ ಎರಡು ವರ್ಷಗಳಲ್ಲಿ ಕುಸಿದ ಪ್ರವಾಸಿಗರ ಸಂಖ್ಯೆಯಲ್ಲಿ ಮತ್ತೆ ಏರಿಕೆ ಕಂಡುಬಂದಿದ್ದು, ಪ್ರವಾಸೋದ್ಯಮ ಚೇತರಿಕೆಯಾಗುತ್ತಿದೆ.
2018ರಲ್ಲಿ ಜಿಲ್ಲೆಗೆ ಬಂದಿರುವ ಪ್ರವಾಸಿಗರ ಸಂಖ್ಯೆ 62,50,278 ಇತ್ತು. 2019ಕ್ಕೆ ಈ ಸಂಖ್ಯೆ 70,28,664ಕ್ಕೆ ಏರಿದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಸತತವಾಗಿ ಎರಡು ವಾರಗಳ ಕಾಲ ಭಾರಿ ಪ್ರಮಾಣದಲ್ಲಿ ಮಳೆ ಸುರಿದು ರಸ್ತೆಗಳು, ಸೇತುವೆಗಳು ಕುಸಿದು ಸಂಪರ್ಕ ಕಡಿದುಹೋಗಿದ್ದರೂ, ಆ ತಿಂಗಳನ್ನು ಹೊರತುಪಡಿಸಿದರೆ ಇನ್ನುಳಿದ ಮಾಹೆಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ.
ಶೃಂಗೇರಿಯ ಶ್ರೀ ಶಾರದಾಂಬೆ ದೇಗುಲಕ್ಕೆ ಕಳೆದ ವರ್ಷ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಕೇಂದ್ರ ಚುನಾವಣಾ ಆಯೋಗದ ಆಯುಕ್ತರು ಸೇರಿದಂತೆ ಗಣ್ಯರು ಭೇಟಿ ನೀಡಿದ್ದರು. 2018ರಲ್ಲಿ ಇಲ್ಲಿಗೆ ಭೇಟಿ ನೀಡಿದ್ಧ ಭಕ್ತರ ಸಂಖ್ಯೆ 27.75 ಲಕ್ಷ ಇತ್ತು. 2019ರಲ್ಲಿ ಈ ಸಂಖ್ಯೆ 39.30 ಲಕ್ಷಕ್ಕೆ ಏರಿದೆ. ಇತರೆ ಧಾರ್ಮಿಕ ಹಾಗೂ ಪ್ರವಾಸಿ ತಾಣಗಳಿಗೆ ಹೋಲಿಕೆ ಮಾಡಿದರೆ ಶೃಂಗೇರಿಗೆ ಭೇಟಿ ನೀಡಿದ್ದವರ ಸಂಖ್ಯೆ ಅತಿ ಹೆಚ್ಚಾಗಿದೆ.
ಮಳೆಯ ಎಫೆಕ್ಟ್:
ಕಳೆದ ಆ.3ರಂದು ಮೂಡಿಗೆರೆ ತಾಲೂಕಿನ ಬಣಕಲ್, ಕಳಸ ಹಾಗೂ ಗೋಣಿಬೀಡು ಹೋಬಳಿಯಲ್ಲಿ ಸುರಿದ ಮಹಾಮಳೆಗೆ ಚಾರ್ಮಾಡಿ ಘಾಟ್ ಸೇರಿದಂತೆ ಇತರೆ ಕರಾವಳಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಭೂ ಕುಸಿತ ಉಂಟಾಗಿತ್ತು. ಹಲವೆಡೆ ರಸ್ತೆ ಸಂಚಾರ ಬಂದ್ ಆಗಿತ್ತು. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ಅಪಾಯ ಮಟ್ಟಮೀರಿ ಹರಿದವು. 12 ಮಂದಿ ಪ್ರಾಣ ಕಳೆದುಕೊಂಡರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಂದು ಸುರಿದ ಮಹಾ ಮಳೆ ಪ್ರವಾಸಿಗರ ಮೇಲೂ ದುಷ್ಪರಿಣಾಮ ಬೀರಿತ್ತು. 2018ರ ಆಗಸ್ಟ್‌ನಲ್ಲಿ ಜಿಲ್ಲೆಗೆ 4,25,780 ಮಂದಿ ಪ್ರವಾಸಿಗರು ಆಗಮಿಸಿದ್ದರು. 2019ರಲ್ಲಿ ಇದೇ ಮಾಹೆಯಲ್ಲಿ ಜಿಲ್ಲೆಗೆ ಬಂದಿದ್ದ ಪ್ರವಾಸಿಗರ ಸಂಖ್ಯೆ 2,94,200 ಮಾತ್ರ. ನಂತರದಲ್ಲಿ ಜಿಲ್ಲೆಯಲ್ಲಿ ಮತ್ತೆ ಪ್ರವಾಸಿಗರ ಸಂಖ್ಯೆ ಏರಿಕೆಯಾಗಿದೆ. ವರ್ಷದ ಕೊನೆಯ ಡಿಸೆಂಬರ್‌ನಲ್ಲಿ ಕ್ರಿಸ್‌ಮಸ್ ಹಾಗೂ ಇತರೆ ಸರಣಿ ರಜೆಗಳು ಇರುವುದರಿಂದ ಪ್ರವಾಸಿ ಕೇಂದ್ರಗಳಿಗೆ ಬರುವ ಜನಸಂಖ್ಯೆ ಹೆಚ್ಚಾಗಿರುತ್ತದೆ. ಆದರೆ, 2018ಕ್ಕೆ ಹೋಲಿಕೆ ಮಾಡಿದರೆ ಈ ಬಾರಿ ಚಿಕ್ಕಮಗಳೂರು ಜಿಲ್ಲೆಗೆ ಬಂದು ಹೋದ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು.
2018ರ ಡಿಸೆಂಬರ್‌ನಲ್ಲಿ 11,71,000 ಮಂದಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದರು. ಕಳೆದ ವರ್ಷ 7,20,877 ಮಂದಿ ಬಂದು ಹೋಗಿದ್ದಾರೆ. ಈ ಸಂಖ್ಯೆ ಇಳಿಮುಖವಾಗಲು ಕಾರಣ, ದೇಶದೆಲ್ಲೆಡೆ ಹಬ್ಬಿದ್ದ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಹಾಗೂ ವಿರೋಧದ ಹೋರಾಟದ ಕಿಚ್ಚು.
ಕೇರಳ ಪ್ರವಾಸಿಗರು:
ಹಿಂದಿನ ವರ್ಷಗಳಲ್ಲಿ ನೆರೆಯ ಕೊಡಗು ಜಿಲ್ಲೆಗೆ ಅಪಾರ ಸಂಖ್ಯೆಯಲ್ಲಿ ತೆರಳುತ್ತಿದ್ದ ಕೇರಳ ಪ್ರವಾಸಿಗರು ಕಳೆದ ವರ್ಷದಿಂದ ಕಾಫಿಯ ನಾಡಿನತ್ತ ಮುಖ ಮಾಡಿದ್ದಾರೆ. ವಾರದ ಕೊನೆ ಸೇರಿದಂತೆ ಇತರೆ ದಿನಗಳಲ್ಲೂ ನೂರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲು ಇವರು ಸಹ ಕಾರಣವಾಗಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಜಿಲ್ಲಾ ಕೇಂದ್ರದಲ್ಲಿ ಹೊಸ ಹೊಸ ಲಾಡ್ಜ್‌ಗಳು ನಿರ್ಮಾಣವಾಗುತ್ತಿವೆ. ಹೋಂ ಸ್ಟೇಗಳ ಸಂಖ್ಯೆ 300ರ ಗಡಿ ದಾಟಿದೆ. ಜಿಲ್ಲೆಯಲ್ಲಿ ಪ್ರಮುಖ ರಸ್ತೆಗಳ ಅಗಲೀಕರಣ ಕಾಮಗಾರಿ ಭರದಿಂದ ನಡೆಯುತ್ತಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಮತ್ತಷ್ಟುಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ ಎಂಬ ಆಶಾಭಾವನೆ ಜನರಲ್ಲಿದೆ.
2019ರಲ್ಲಿ ಎಲ್ಲಿ, ಎಷ್ಟುಪ್ರವಾಸಿಗರು?
ಶೃಂಗೇರಿ- 39,30,000
ಕಳಸ- 2,80,000
ಹೊರನಾಡು- 22,17,000
ದತ್ತಪೀಠ- 3,51,982
ಕೆಮ್ಮಣ್ಣಗುಂಡಿ- 1,50,735
ಚಿಕ್ಕಮಗಳೂರು- 98,947