ಪುನೀತ್‌ ಸ್ಪೂರ್ತಿ: ನೇತ್ರ, ಅಂಗದಾನದಲ್ಲಿ ಭಾರೀ ಹೆಚ್ಚಳ

By Kannadaprabha NewsFirst Published Oct 29, 2022, 7:30 AM IST
Highlights

ಡಾ. ರಾಜಕುಮಾರ್‌ ನೇತ್ರದಾನ ಕೇಂದ್ರದಲ್ಲಿ 2050 ಕಣ್ಣು ಸಂಗ್ರಹ, 1650 ಅಂಧರಿಗೆ ಅಳವಡಿಕೆ, ಒಂದೇ ವರ್ಷದಲ್ಲಿ ಜೀವಸಾರ್ಥಕತೆ, ಅಂಗಾಂಗ ದಾನ ನೋಂದಣಿ 33 ಸಾವಿರಕ್ಕೆ ಹೆಚ್ಚಳ

ಬೆಂಗಳೂರು(ಅ.29):  ಇಂದಿಗೆ ಒಂದು ವರ್ಷದ ಹಿಂದೆ ಸಾವಿಗೀಡಾದ ನಟ ಪುನೀತ್‌ ರಾಜಕುಮಾರ್‌ ನೇತ್ರದಾನ ಮಾಡಿ ನಾಲ್ಕು ಜನರ ಬಾಳಿಗೆ ಬೆಳಕಾಗಿದ್ದರು. ಅವರಿಂದ ಸ್ಫೂರ್ತಿ ಪಡೆದು ಕಳೆದ ಒಂದು ವರ್ಷದಲ್ಲಿ ಒಂದು ಸಾವಿರಕ್ಕೂ ಅಧಿಕ ಮಂದಿ ಡಾ.ರಾಜಕುಮಾರ್‌ ನೇತ್ರದಾನ ಕೇಂದ್ರದಲ್ಲಿ ನೇತ್ರದಾನ ಮಾಡಿದ್ದು, ಇದರಿಂದ 1650 ಅಂಧರ ಬಾಳಿಗೆ ಬೆಳಕು ಸಿಕ್ಕಿದೆ. ಇನ್ನೊಂದೆಡೆ ನೇತ್ರದಾನದಿಂದ ಪ್ರೇರೇಪಣೆಗೊಂಡ ಪುನೀತ್‌ ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಅಂಗಾಂಗ ದಾನ ಕೂಡ ಮಾಡಿದ್ದಾರೆ. ರಾಜ್ಯ ಸರ್ಕಾರದ ಅಧಿಕೃತ ಅಂಗಾಂಗ ಕಸಿ ನಿರ್ವಹಣಾ ಸಂಸ್ಥೆಯಾದ ಜೀವಸಾರ್ಥಕತೆಯಲ್ಲಿ 2021ರ ನವೆಂಬರ್‌ಗೂ ಮುನ್ನ ಮೂರು ಸಾವಿರದ ಆಸುಪಾಸಿನಲ್ಲಿದ್ದ ನೋಂದಣಿದಾರರ ಸಂಖ್ಯೆ ಸದ್ಯ ಬರೋಬ್ಬರಿ 33 ಸಾವಿರಕ್ಕೆ ಹೆಚ್ಚಿದೆ. ಒಂದು ವರ್ಷದಲ್ಲಿ 10 ಪಟ್ಟು ಅಧಿಕ ಮಂದಿ ನೋಂದಣಿಯಾಗಿದ್ದಾರೆ.

ಪುನೀತ್‌ ಅವರ ಕಣ್ಣುಗಳನ್ನು ದಾನ ಮಾಡಿದ ನಂತರ ರಾಜ್ಯದ ವಿವಿಧೆಡೆ ಮೃತಪಟ್ಟಜನರ ಕುಟುಂಬಗಳಿಂದ ಡಾ.ರಾಜಕುಮಾರ್‌ ನೇತ್ರದಾನ ಕೇಂದ್ರಕ್ಕೆ ಕರೆಗಳು ಹೆಚ್ಚಿದ್ದವು. ನ.1ರಿಂದ ಈವರೆಗೂ ಈ ಕೇಂದ್ರದಲ್ಲಿ 1025 ಮಂದಿ ಮೃತರ ನೇತ್ರದಾನ ಸ್ವೀಕರಿಸಿ, 2050 ಕಣ್ಣುಗಳನ್ನು ಸಂಗ್ರಹಿಸಲಾಗಿದೆ. ಈ ಪೈಕಿ ಶೇ.20ರಷ್ಟುಸಂಶೋಧನೆ, ಅಧ್ಯಯನ, ತರಬೇತಿಗೆ ಬಳಕೆಯಾಗಿದ್ದು, ಶೇ.80ರಷ್ಟುಕಣ್ಣುಗಳನ್ನು ಅಂಧರಿಗೆ ಅಳವಡಿಸಲಾಗಿದೆ. ನಿಯಮಗಳಂತೆ ತಲಾ ಒಂದರಂತೆ 1650 ಮಂದಿ ಅಂಧರಿಗೆ ಕಣ್ಣನ್ನು ಅಳವಡಿಸಲಾಗಿದೆ ಎಂದು ನಾರಾಯಣ ನೇತ್ರಾಲಯದ ಸಿಬ್ಬಂದಿ ಮಾಹಿತಿ ನೀಡಿದರು.

ಮೆದುಳು ನಿಷ್ಕ್ರಿಯಗೊಂಡ ರಾಯಚೂರು ಯುವಕನ ಅಂಗಾಂಗ ದಾನ

ಲಕ್ಷದತ್ತ ನೋಂದಣಿ ದಾಪುಗಾಲು:

ಡಾ.ರಾಜಕುಮಾರ್‌ ನೇತ್ರದಾನ ಕೇಂದ್ರ ಆರಂಭವಾಗಿ 28 ವರ್ಷಗಳಲ್ಲಿ 68 ಸಾವಿರ ಮಂದಿ ನೇತ್ರದಾನಕ್ಕೆ ನೋಂದಣಿ ಮಾಡಿಕೊಂಡಿದ್ದರು. ಆದರೆ, ಕಳೆದ ಒಂದು ವರ್ಷದಲ್ಲಿ ಹೊಸದಾಗಿ 90 ಸಾವಿರ ಮಂದಿ ನೋಂದಣಿಯಾಗಿದ್ದಾರೆ. ಆನ್‌ಲೈನ್‌ನಲ್ಲೂ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ನೋಂದಣಿಯಾದವರಿಗೆ ರಾಜಕುಮಾರ್‌, ಪಾರ್ವತಮ್ಮ ಹಾಗೂ ಪುನೀತ್‌ ರಾಜಕುಮಾರ್‌ ಫೋಟೋ ಒಳಗೊಂಡ ನೋಂದಣಿ ಪ್ರಮಾಣ ಪತ್ರ ನೀಡಲಾಗುತ್ತಿದೆ.

30 ಸಾವಿರ ಅಂಗಾಂಗ ದಾನ:

ಜೀವಸಾರ್ಥಕತೆಯಲ್ಲಿ 2017ರಿಂದ 2021 ಅಕ್ಟೋಬರ್‌ವರೆಗೂ (ಐದು ವರ್ಷದಲ್ಲಿ) 2,775 ಮಂದಿ ಅಂಗಾಂಗ ದಾನ ಮಾಡುವುದಾಗಿ ನೋಂದಣಿ ಮಾಡಿಕೊಂಡಿದ್ದರು. ಆದರೆ, ಪುನೀತ್‌ ನಿಧನದ ಬಳಿಕ ನವೆಂಬರ್‌ನಿಂದ ಸಂಸ್ಥೆಯ ಸಹಾಯವಾಣಿಗೆ ನೇತ್ರದಾನದ ನೋಂದಣಿ ಮಾಹಿತಿ ಕೋರಿ ಬರುವ ಕರೆಗಳು ಹೆಚ್ಚಾದವು. ಬಹುತೇಕರು ಪುನೀತ್‌ ನೇತ್ರದಾನದ ಪ್ರೇರೇಪಣೆಯನ್ನು ಉಲ್ಲೇಖಿಸಿದರು. ಅಂತಹವರಿಗೆ ಅಂಗಾಂಗ ದಾನ ಮಹತ್ವವನ್ನು ವಿವರಿಸಲಾಗುತ್ತಿತ್ತು. ಸದ್ಯ ನೋಂದಣಿಯಾಗಿರುವವರ ಸಂಖ್ಯೆ 33,907ಕ್ಕೆ ಹೆಚ್ಚಿದೆ. ನೋಂದಣಿಯಾದವರ ಪೈಕಿ ಶೇ.90ರಷ್ಟುಮಂದಿ ಯುವ ಜನರೇ ಆಗಿದ್ದಾರೆ. ಎಲ್ಲರಿಗೂ ಸಂಸ್ಥೆಯಿಂದ ಪ್ರಮಾಣಪತ್ರ ವಿತರಿಸಲಾಗಿದೆ ಎಂದು ಜೀವಸಾರ್ಥಕತೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾವಿನಲ್ಲೂ ಸಾರ್ಥಕತೆ ಮೆರೆದ ಕೊಡಗಿನ ಶಿಕ್ಷಕಿ, 8 ಜನರ ಜೀವ ಉಳಿಸಿದ ಮಹಾತಾಯಿ

ವರ್ಷದಲ್ಲಿ 130 ಮಂದಿ ಅಂಗಾಂಗ ದಾನ

ವರ್ಷದಿಂದೀಚೆಗೆ 130 ಮಂದಿಯ ಮರಾಣಾನಂತರ ಅವರ ಕುಟುಂಬಸ್ಥರು ಅಂಗಾಂಗ ದಾನ ಮಾಡಿದ್ದಾರೆ. ಮೆದುಳು ನಿಷ್ಕಿ್ರಯರಾದ, ಅಪಘಾತಕ್ಕೀಡಾದ, ಹಠಾತ್‌ ಹೃದಯಾಘಾತವಾದ ಯುವ ಜನತೆಯಲ್ಲಿ ಅಂಗಾಂಗ ದಾನ ಮತ್ತು ನೇತ್ರದಾನ ಹೆಚ್ಚಾಗಿದೆ. ನಟ ಪುನೀತ್‌ ಮತ್ತು ಸಂಚಾರಿ ವಿಜಯ್‌ ಅಂಗಾಂಗ ದಾನದ ಬಳಿಕ ಹಲವು ಕುಟುಂಬಸ್ಥರು ಸ್ವಯಂ ಪ್ರೇರಿತವಾಗಿ ಮುಂದೆ ಬಂದಿದ್ದಾರೆ. ಜತೆಗೆ ಈ ನಟರನ್ನೆ ಮಾದರಿಯಾಗಿಟ್ಟುಕೊಂಡು ಅಂಗಾಂಗದ ದಾನಕ್ಕೆ ಕುಟುಂಬಸ್ಥರ ಮನವೊಲಿಸಲಾಗುತ್ತಿದೆ ಎಂದು ಜೀವಸಾರ್ಥಕತೆಯ ಅಂಗಾಂಗ ಕಸಿ ಸಂಯೋಜಕ ನೌಷದ್‌ ಪಾಷಾ ತಿಳಿಸಿದ್ದಾರೆ.

ಪುನೀತ್‌ ನೇತ್ರದಾನದ ಬಳಿಕ ದಾಖಲೆ ಪ್ರಮಾಣದಲ್ಲಿ ನೋಂದಣಿಯಾಗುತ್ತಿದ್ದು, ದಾನವು ಹೆಚ್ಚಳವಾಗಿದೆ. 90 ಸಾವಿರ ನೋಂದಣಿಯಾಗಿದ್ದು, 2050 ಕಣ್ಣುಗಳ ಸಂಗ್ರಹವಾಗಿವೆ. ಸಂಗ್ರಹವಾದ ಕಣ್ಣುಗಳ ಪೈಕಿ ಶೇ.70ರಷ್ಟುಅಂಧರಿಗೆ ಅಳವಡಿಸಲಾಗುತ್ತಿದೆ ಅಂತ ನಾರಾಯಣ ನೇತ್ರಾಲಯದ ಮುಖ್ಯಸ್ಥ ಡಾ. ಭುಜಂಗಶೆಟ್ಟಿ ತಿಳಿಸಿದ್ದಾರೆ.  

ನೋಂದಣಿಗೆ:

ವೆಬ್‌ಸೈಟ್‌: jeevasarthakathe.karnataka.gov.in 
ನಾರಾಯಣ ನೇತ್ರಾಲಯ- 8884018800 (ಮಿಸ್ಡ್‌ಕಾಲ್‌)
 

click me!