ಕೊರೋನಾವನ್ನು ತಡೆಗಟ್ಟಲು ಇದೇ ಬೆಸ್ಟ್ ಮೆಥೆಡ್ ... ಇದನ್ನ ಧರಿಸೋದ್ರಿಂದ ನಿಮ್ಮ ಜೀವವನ್ನು ಕೊರೋನಾ ಮಹಾಮಾರಿಯಿಂದ ಕಾಪಾಡಿಕೊಳ್ಳಬಹುದಾಗಿದೆ.
ಹರಿಹರ (ಸೆ.28): ಸಾರ್ವಜನಿಕರು ಮಾಸ್ಕ್ ಧರಿಸದೇ ಎಲ್ಲೆಂದರಲ್ಲಿ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಪೊಲೀಸರು ಮಾಸ್ಕ್ ಇಲ್ಲದವರಿಗೆ ದಂಡ ಹಾಕುತ್ತಾರೆ ಎಂಬ ಭಯಕ್ಕೆ ಒಳಗಾಗದೇ ನಿಮ್ಮ ಜೀವವನ್ನು ಉಳಿಸಿಕೊಳ್ಳಲು ಕೊರೋನಾ ಸೋಂಕು ನಿರ್ಮೂಲನಗೊಳಿಸಲು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ನಿರ್ಲಕ್ಷಿಸಿದರೆ ಕೊರೋನಾ ಸೋಂಕನ್ನು ನೀವೇ ಅಂಟಿಸಿಕೊಳ್ಳುವಿರಿ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.
ನಗರದ ಹರಿಹರೇಶ್ವರ ದೇವಸ್ಥಾನದ ಬಳಿಯ ಬಿರ್ಲಾ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತ್ರೆ, ಹಬ್ಬಗಳಿಗೆ ಬೀಗರನ್ನು ಕರೆಸಿ ಊಟ, ಉಪಚಾರ ಜೊತೆಗೆ ಜಿಲ್ಲೆಯಲ್ಲಿನ ಪ್ರವಾಸಿ ಕೇಂದ್ರಗಳಿಗೆ ಅವರೊಂದಿಗೂ ಸಹ ಭೇಟಿ ನೀಡಿ ಎಂದು ಕರೆಕೊಟ್ಟರು.
'ಕೊರೋನಾ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು, ಮಾಸ್ಕ್ ಧರಿಸಿದ್ದರೆ ಅಂಗಡಿ ಬದುಕಿರುತ್ತಿದ್ದರು' .
ತಹಸೀಲ್ದಾರ್ ಕೆ.ಬಿ. ರಾಮಚಂದ್ರಪ್ಪ ಮಾತನಾಡಿ, ಸೆ.27ರಂದು ದೇಶ- ವಿದೇಶಗಳಲ್ಲಿ ವಿಶ್ವ ಪ್ರವಾಸೋದ್ಯಮ ದಿನ ಆಚರಿಸಬೇಕೆಂದು 1979 ರಲ್ಲಿ ತೀರ್ಮಾನಿಸಿ, 1997ರಿಂದ ಪ್ರತಿವರ್ಷ ಆಚರಿಸುವಂತೆ ವಿಶ್ವ ವಾಣಿಜ್ಯ ಸಂಸ್ಥೆಯು ನಿರ್ಧರಿಸಿತು. ಅನಂತರ ಪ್ರತಿ ವರ್ಷ ಭಾರತದಲ್ಲಿಯೂ ವಿಶ್ವ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತಿದೆ ಎಂದರು.
ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ಬಿ.ಪಾಲಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಐತಿಹಾಸಿಕ ಸ್ಥಳಗಳಿವೆ ಎಂದು ಗುರುತಿಸಲಾಗಿದೆ. ಆದರೆ ವಾಸ್ತವವಾಗಿ 25ಕ್ಕೂ ಹೆಚ್ಚು ಸ್ಥಳಗಳಿವೆ. ತಾಂತ್ರಿಕ ಕಾರಣಗಳಿಂದ ಅವುಗಳನ್ನು ಸೇರ್ಪಡೆ ಮಾಡಿಕೊಂಡಿರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ಪೌರಾಯುಕ್ತೆ ಎಸ್.ಲಕ್ಷ್ಮೀ, ಪಿಎಸ್‌ಐ ಎಸ್.ಶೈಲಶ್ರೀ, ಎಸ್.ಕೆ. ನವೀನ್, ಸುಧೀರ್, ಎಂ.ಉಮ್ಮಣ್ಣ, ಕೆ.ಜಿ. ಸಿದ್ದೇಶ್, ರೇವಣಸಿದ್ದಪ್ಪ ಅಂಗಡಿ ಹಾಗೂ ಪುರಾತತ್ವ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.
ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಸರ್ಕಾರಕ್ಕೆ 34.60 ಕೋಟಿ ಪ್ರಸ್ತಾವನೆಯನ್ನು ಕಳುಹಿಸಲಾಗಿದೆ. ಪ್ರವಾಸೋದ್ಯಮ ಸಚಿವರೊಡನೆ ಇಲ್ಲಿಯ ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿ, ನಮ್ಮ ಪ್ರಸ್ತಾವನೆಯನ್ನು ಅಂಗೀಕರಿಸಿ ಮಂಜೂರಾತಿ ನೀಡಲು ಸಹ ಮನವಿ ಮಾಡಿಕೊಳ್ಳಲಾಗುವುದು
- ಮಹಾಂತೇಶ ಬೀಳಗಿ, ಜಿಲ್ಲಾಧಿಕಾರಿ