ಮಾರಿಕಾಂಬಾ ಜಾತ್ರೆಗೆ ವಿಶೇಷ ರೈಲು: ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ತಾಳಗುಪ್ಪವರೆಗೆ ವಿಸ್ತರಣೆ

Published : Jan 30, 2026, 10:43 PM IST
Yeshwanthpur Shivamogga Express

ಸಾರಾಂಶ

ಸಾಗರದ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 3 ರಿಂದ 11 ರವರೆಗೆ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸಲು ರೈಲ್ವೆ ಇಲಾಖೆ ನಿರ್ಧರಿಸಿದೆ.  

ಶಿವಮೊಗ್ಗ: ಸಾಗರ ತಾಲೂಕಿನ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತಾದಿಗಳ ಅನುಕೂಲಕ್ಕಾಗಿ ವಿಶೇಷ ರೈಲು ಸೌಲಭ್ಯ ಕಲ್ಪಿಸುವಂತೆ ಸಲ್ಲಿಸಲಾಗಿದ್ದ ಮನವಿಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇದರ ಪರಿಣಾಮವಾಗಿ, ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್ ರೈಲನ್ನು ಫೆಬ್ರವರಿ 3ರಿಂದ 11ರವರೆಗೆ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಕೃತ ಆದೇಶ ಹೊರಡಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಮೂರು ವರ್ಷಕ್ಕೊಮ್ಮೆ ನಡೆಯುವ ಈ ಐತಿಹಾಸಿಕ ಜಾತ್ರೆ “ಮಲೆನಾಡಿನ ಮಹಾಕುಂಭ” ಎಂದೇ ಪ್ರಸಿದ್ಧಿಯಾಗಿದ್ದು, ಫೆಬ್ರವರಿ 3ರಿಂದ 11ರವರೆಗೆ ಸಾಗರ ತಾಲೂಕಿನ ಶ್ರೀ ಮಾರಿಕಾಂಬಾ ದೇವಾಲಯದಲ್ಲಿ ಭವ್ಯವಾಗಿ ನಡೆಯಲಿದೆ. ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳ ಜೊತೆಗೆ ಹೊರರಾಜ್ಯಗಳಿಂದಲೂ ಅಂದಾಜು 25ರಿಂದ 30 ಲಕ್ಷಕ್ಕೂ ಹೆಚ್ಚು ಭಕ್ತಾದಿಗಳು ಆಗಮಿಸುವ ನಿರೀಕ್ಷೆಯಿದೆ.

ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ – ರೈಲ್ವೆ ಇಲಾಖೆಯ ಸ್ಪಂದನೆ

ಜಾತ್ರೆಗೆ ಆಗಮಿಸುವ ಅಪಾರ ಸಂಖ್ಯೆಯ ಭಕ್ತಾದಿಗಳ ಪ್ರಯಾಣ ಸುಗಮವಾಗಿಸಲು ವಿಶೇಷ ರೈಲು ಸೌಲಭ್ಯ ಅಗತ್ಯವಿದೆ ಎಂಬುದನ್ನು ಮನಗಂಡು, ಸಂಸದ ಬಿ.ವೈ. ರಾಘವೇಂದ್ರ ಅವರು ರಾಜ್ಯ ರೈಲ್ವೆ ಖಾತೆ ಸಚಿವ ವಿ. ಸೋಮಣ್ಣ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಸಾರ್ವಜನಿಕರ ದಟ್ಟಣೆಯನ್ನು ನಿಯಂತ್ರಿಸುವುದು, ಭಕ್ತರಿಗೆ ಸುರಕ್ಷಿತ ಮತ್ತು ಸುಲಭ ಪ್ರಯಾಣದ ವ್ಯವಸ್ಥೆ ಒದಗಿಸುವುದು ಈ ಪ್ರಸ್ತಾವನೆಯ ಮುಖ್ಯ ಉದ್ದೇಶವಾಗಿತ್ತು. ಈ ಮನವಿಗೆ ರೈಲ್ವೆ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಧಿಕೃತ ಆದೇಶವನ್ನು ಒಂದೆರಡು ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆ ಇದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ರೈಲು ಸಂಚಾರ – ತಾಳಗುಪ್ಪವರೆಗೆ ವಿಸ್ತರಣೆ

ಪ್ರಸ್ತುತ ವಾರಕ್ಕೆ ಮೂರು ದಿನ ಮಾತ್ರ ಸಂಚರಿಸುತ್ತಿರುವ ರೈಲು ಸಂಖ್ಯೆ 16581/16582 (ಯಶವಂತಪುರ–ಶಿವಮೊಗ್ಗ ಟೌನ್ ಎಕ್ಸ್‌ಪ್ರೆಸ್) ಅನ್ನು ಜಾತ್ರೆಯ ಅವಧಿಯಲ್ಲಿ, ಅಂದರೆ ಫೆಬ್ರವರಿ 3ರಿಂದ 11ರವರೆಗೆ ಪ್ರತಿದಿನ ಸಂಚರಿಸುವಂತೆ ಮಾಡಲಾಗುತ್ತದೆ. ಜೊತೆಗೆ, ಈ ರೈಲನ್ನು ಶಿವಮೊಗ್ಗದಿಂದ ಸಾಗರದ ಸಮೀಪದ ತಾಳಗುಪ್ಪ ನಿಲ್ದಾಣದವರೆಗೆ ವಿಸ್ತರಿಸುವ ನಿರ್ಧಾರವನ್ನು ರೈಲ್ವೆ ಇಲಾಖೆ ಕೈಗೊಂಡಿದೆ.

ಭಕ್ತಾದಿಗಳಿಗೆ ಮಹತ್ತರ ಅನುಕೂಲ

ಈ ವಿಶೇಷ ರೈಲು ಸೇವೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಸಾಗರಕ್ಕೆ ಆಗಮಿಸುವ ಭಕ್ತಾದಿಗಳಿಗೆ ನೇರವಾಗಿ ತಾಳಗುಪ್ಪವರೆಗೆ ಪ್ರಯಾಣಿಸುವ ಅವಕಾಶ ಲಭಿಸಲಿದ್ದು, ರಸ್ತೆ ಸಂಚಾರದ ಒತ್ತಡವೂ ಗಣನೀಯವಾಗಿ ಕಡಿಮೆಯಾಗಲಿದೆ. ಜನದಟ್ಟಣೆ ನಿಯಂತ್ರಣಕ್ಕೆ ಸಹ ಈ ಕ್ರಮ ಮಹತ್ವದ ಸಹಕಾರ ನೀಡಲಿದೆ.

ಕೇಂದ್ರಕ್ಕೆ ಸಂಸದರ ಕೃತಜ್ಞತೆ

“ಶ್ರೀ ಮಾರಿಕಾಂಬಾ ದೇವಿಯ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗಬಾರದು ಎನ್ನುವುದು ನನ್ನ ಆಶಯ. ಈ ತಾತ್ಕಾಲಿಕ ರೈಲು ವ್ಯವಸ್ಥೆಯಿಂದ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ನನ್ನ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರಕ್ಕೆ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ” ಎಂದು ಸಂಸದ ಬಿ.ವೈ. ರಾಘವೇಂದ್ರ ತಿಳಿಸಿದ್ದಾರೆ.

ಮಲೆನಾಡಿನ ರೈಲ್ವೆ ಅಭಿವೃದ್ಧಿಗೆ ಸದಾ ಸ್ಪಂದಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ಕೇಂದ್ರ ಸಚಿವ ವಿ. ಸೋಮಣ್ಣ ಅವರಿಗೆ ಸಂಸದರು ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

PREV
Read more Articles on
click me!

Recommended Stories

ಶಿವರಾತ್ರಿ ಪ್ರಯುಕ್ತ, ಬೆಂಗಳೂರಿನಿಂದ ವಿಜಯಪುರಕ್ಕೆ ವಿಶೇಷ ರೈಲು ಯಾವೆಲ್ಲ ಸ್ಟೇಷನ್‌ನಲ್ಲಿ ನಿಲುಗಡೆ ಇರಲಿದೆ
ಬೆಂಗಳೂರು: ವೈಟ್‌ಫೀಲ್ಡ್‌ನಿಂದ ಬಂಗಾರಪೇಟೆ ಮೂಲಕ ಮಾರಿಕುಪ್ಪಂಗೆ ಸಂಚರಿಸೋ ಮೆಮೋ ರೈಲು ಸಮಯ ಪರಿಷ್ಕರಣೆ