ಗುಮ್ಮಟನಗರಿ ವಿಜಯಪುರದಲ್ಲಿ ಜೆಎಸ್‌ಎಸ್ ಆಸ್ಪತ್ರೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಉಚಿತ ಹೆರಿಗೆಗೆ ಘೋಷಣೆ ಮಾಡಿದ್ದೆ ತಡ, ಹೆರಿಗೆಗೆ ಅಂತಾ ತುಂಬು ಗರ್ಭಿಣಿಯರು ಮುಗಿಬಿದ್ದಿದ್ದಾರೆ.
ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ (ಜ.20): ಭವ್ಯ ರಾಮ ಮಂದಿರ ಉದ್ಘಾಟನೆಗೆ ಕ್ಷಣಗಣನೇ ಶುರುವಾಗಿದೆ. ಈ ನಡುವೆ ಜನೇವರಿ 22 ರಂದು ಹೆರಿಗೆಯಾಗಲಿ ಎಂದು ತುಂಬು ಗರ್ಭಿಣಿಯರು ಕಾಯ್ತಿದ್ದಾರೆ. ಅದ್ರಲ್ಲು ಗುಮ್ಮಟನಗರಿ ವಿಜಯಪುರದಲ್ಲಿ ಜೆಎಸ್‌ಎಸ್ ಆಸ್ಪತ್ರೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಉಚಿತ ಹೆರಿಗೆಗೆ ಘೋಷಣೆ ಮಾಡಿದ್ದೆ ತಡ, ಹೆರಿಗೆಗೆ ಅಂತಾ ತುಂಬು ಗರ್ಭಿಣಿಯರು ಮುಗಿಬಿದ್ದಿದ್ದಾರೆ. ಈಗಾಗಲೇ 30ಕ್ಕು ಅಧಿಕ ಉಚಿತ ಡೆಲಿವರಿಯನ್ನು ಜೆಎಸ್‌ಎಸ್ ಆಸ್ಪತ್ರೆ ಮಾಡಿದೆ.
ಜ.22ರಂದು ಹೆರಿಗೆಗೆ ಕಾಯ್ತಿರೋ ತುಂಬು ಗರ್ಭಿಣಿಯರು: ಹೌದು, ರಾಮ ಮಂದಿರ ಉದ್ಘಾಟನೆಯಾಗ್ತಿದೆ. ಹಿಂದೂಗಳ ಅದೇಷ್ಟೋ ದಶಕಗಳ ಕನಸು ನನಸಾಗುತ್ತಿದೆ. ಈ ನಡುವೆ ತುಂಬು ಗರ್ಭಿಣಿಯರು ತಮ್ಮ ಹೆರಿಗೆ ರಾಮ ಮಂದಿರ ಉದ್ಘಾಟನೆಯ ದಿನವೇ ಆಗಬೇಕು ಅಂತಾ ಕಾಯ್ತಿದ್ದಾರೆ. ಈಗಾಗಲೇ ಹೆರಿಗೆ ಆಸ್ಪತ್ರೆಗಳಿಗೆ ದಾಖಲಾಗಿರುವ ತುಂಬು ಗರ್ಭಿಣಿಯರು ದಿನಾಂಕ 22 ರಂದು ಹೆರಿಗೆ ಮಾಡಿ ಎಂದು ವೈದ್ಯರಿಗೆ ದುಂಬಾಲು ಬಿದ್ದಿದ್ದಾರೆ. ಅಲ್ಲದೆ ಹೆರಿಗೆಗಾಗಿ ರೆಜಿಸ್ಟ್ರೇಶನ್ ಸಹ ಮಾಡಿದ್ದಾರೆ. ಕೆಲ ಹೆರಿಗೆ ಆಸ್ಪತ್ರೆಗಳಲ್ಲಿ ರೆಜಿಸ್ಟ್ರೇಶನ್ ಸಂಖ್ಯೆಯೇ ಅರ್ಧ ಶತಕದಾಟಿದೆ ಎನ್ನುವ ಮಾಹಿತಿಗಳಿವೆ.
ಗಣರಾಜ್ಯೋತ್ಸವ ಪರೇಡ್‌ಗೆ ಕರ್ನಾಟಕದ ಸೈನಿಕ ದಂಪತಿ: ಮೈಸೂರಿನ ಸುಪ್ರೀತಾ - ಜೆರ್ರಿ ಪಥಸಂಚಲನ
ಹೆರಿಗೆಗೆ ಆಸ್ಪತ್ರೆಗಳಲ್ಲಿ ಅಡ್ವಾನ್ಸ್ ರೆಜಿಸ್ಟ್ರೇಶನ್: ರಾಮ ಮಂದಿರ ಉದ್ಘಾಟನೆಯ ದಿನವೇ ತಮಗೆ ಮಗು ಜನಿಸಬೇಕು ಎಂದು ತುಂಬು ಗರ್ಭೀಣೀಯರು, ಕುಟುಂಬಸ್ಥರು ಹೆರಿಗೆ ಆಸ್ಪತ್ರೆಗಳ ಮೊರೆ ಹೋಗಿದ್ದಾರೆ. ವೈದ್ಯರಿಗೆ ಖುದ್ದು ಭೇಟಿಯಾಗಿ ಜ.22 ರಂದೆ ತಮ್ಮ ಹೆರಿಗೆಯಾಗಬೇಕು ಎಂದು ಬೇಡಿಕೆ ಇಡ್ತಿದ್ದಾರೆ. ಅದ್ರಲ್ಲು ಡೆಲಿವರಿ ಡೇಟ್ ಜ 24, 25, 26 ಸಿಕ್ಕಿರುವ ತುಂಬು ಗರ್ಭಿಣಿಯರಂತು ಪುಲ್ ಖುಷ್ ಆಗಿದ್ದಾರೆ. 22ರಂದೆ ಸಿಜೆರಿಯನ್ ಮಾಡುವಂತೆ ವೈದ್ಯರಿಗೆ ಗಂಟು ಬಿದ್ದಿದ್ದಾರೆ. ಕೆಲವರು ಹೆರಿಗೆಗೆ ತಮ್ಮ ನಂಬರ್ ಸಿಗುತ್ತೋ ಇಲ್ಲೋ ಎಂದು ಅಡ್ವಾನ್ಸ್ ರೆಜಿಸ್ಟ್ರೇಶನ್ ಸಹ ಮಾಡಿಸಿದ್ದಾರೆ.
ಜೆ.ಎಸ್.ಎಸ್‌ನಲ್ಲಿ 20ಕ್ಕು ಅಧಿಕ ರೆಜಿಸ್ಟ್ರೇಶನ್: ಎಲ್ಲರಿಗೂ ಗೊತ್ತಿರುವ ಹಾಗೇ ವಿಜಯಪುರ ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಉಚಿತ ಹೆರಿಗೆ ಮಾಡಲಾಗ್ತಿದೆ. ಜೆಎಸ್‌ಎಸ್ ಆಸ್ಪತ್ರೆಯ ಒಡೆತನ ಹೊಂದಿರುವ ಶಾಸಕ ಬಸನಗೌಡ ಯತ್ನಾಳ್ ಒಂದೆ ಒಂದು ರೂಪಾಯಿಯನ್ನು ಪಡೆಯದೇ ಹೆರಿಗೆ ಮಾಡಲಾಗುವುದು ಎಂದು ಈಗಾಗಲೇ ಅನೌನ್ಸ್ ಮಾಡಿದ್ದಾರೆ. ಈಗಾಗಲೆ 30ಕ್ಕು ಅಧಿಕ ಉಚಿತ ಹೆರಿಗೆಗಳನ್ನ ಮಾಡಿ ಜೆಎಸ್ ಎಸ್ ಆಸ್ಪತ್ರೆ ಜನರ ಮೆಚ್ಚುಗೆಗೆ ಕಾರಣವಾಗಿದೆ. ಹೊರಗೆ ಆಸ್ಪತ್ರೆಗಳಲ್ಲಿ 50 ರಿಂದ 70 ಸಾವಿರ ಖರ್ಚು ಮಾಡ್ತಿದ್ದವರಿಗೆ ರಾಮನ ಆಶೀರ್ವಾದದಿಂದ ಉಚಿತ ಹೆರಿಗೆ ಭಾಗ್ಯ ಸಿಗ್ತಿದೆ ಎಂದು ಜನರು ಕೊಂಡಾಡುತ್ತಿದ್ದಾರೆ. ಈ ನಡುವೆ 20ಕ್ಕು ಅಧಿಕ ತುಂಬು ಗರ್ಭಿಣಿಯರು ತಮ್ಮ ಹೆರಿಗೆಯನ್ನ ರಾಮ ಮಂದಿರ ಉದ್ಘಾಟನೆಯ ದಿನವೇ ಮಾಡಬೇಕು ಎಂದು ರೆಜಿಸ್ಟ್ರೇಶನ್ ಸಹ ಮಾಡಿಸಿದ್ದಾರೆ. ಜೆ.ಎಸ್‌ಎಸ್ ಆಸ್ಪತ್ರೆ ಒಂದರಲ್ಲೆ ದಿನಾಂಕ 22 ರಂದು 50ಕ್ಕು ಅಧಿಕ ಹೆರಿಗೆಯಾಗುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ರಾಮ-ಸೀತೆ ಹೆಸರಿಡಲು ತುದಿಗಾಲ ಮೇಲೆ ನಿಂತ ಗರ್ಭಿಣಿಯರು: ಇನ್ನು ಜ.22 ರಂದು ಮಗು ಜನಿಸಿದ್ರೆ ರಾಮ ಅಥವಾ ಸೀತೆ ಎಂದು ಹೆಸರಿಡಲು ಈಗಾಗಲೇ ಕೆಲ ಕುಟುಂಬಗಳು ನಿರ್ಧರಿಸಿಕೊಂಡಿವೆ. ಮಂದಿರ ಉದ್ಘಾಟನೆ ದಿನ ಗಂಡು ಮಗು ಹುಟ್ಟಿದ್ರೆ ರಾಮ ಹಾಗೂ ಹೆಣ್ಣು ಮಗು ಹುಟ್ಟಿದ್ರೆ ಸೀತೆ ಎಂದು ಹೆಸರಿಲು ನಿರ್ಧಾರ ಮಾಡಿದ್ದಾರೆ.. ಮನೆಯಲ್ಲಿ ಈಗಾಗಲೇ ರಾಮ ಅಥವಾ ಸೀತೆ ಎಂದು ಹೆಸರಿನ ಮಕ್ಕಳಿದ್ದಲ್ಲಿ, ರಾಮಧೂತ ಆಂಜನೇಯ ಸ್ವಾಮಿ, ಸೀತೆಯ ಪರ್ಯಾಯ ಹೆಸರುಗಳನ್ನ ಆಯ್ಕೆ ಮಾಡಿ ಇಟ್ಟಿದ್ದಾರೆ ಅನ್ನೋದು ವಿಶೇಷ.
ಅನಂತಕುಮಾರ ಹೆಗಡೆಗೆ ಟಿಕೆಟ್ ಕೊಡಲಿ...ನಾವೂ ಉಪಚಾರಕ್ಕೆ ಬರ್ತೀವಿ: ಸಚಿವ ಮಧು ಬಂಗಾರಪ್ಪ
ರಿಸ್ಕೀ ಡೆಲಿವರಿಗೆ ನೋ ಎಂದಿರೋ ಡಾಕ್ಟರ್ಸ್: ರಾಮ ಮಂದಿರ ಉದ್ಘಾಟನೆ ದಿನವೇ ಡೆಲಿವರಿಯಾಗಬೇಕು ಎಂದು ಬಹುತೇಕ ಕುಟುಂಬಗಳು ಆಸ್ಪತ್ರೆಗಳ ವೈದ್ಯರನ್ನ ಸಂಪರ್ಕಿಸುತ್ತಿದ್ದಾರೆ. ಆದ್ರೆ ಅವಧಿ ಪೂರ್ವ ಡೆಲಿವರಿ ಮಾಡೋದಿಲ್ಲ ಎಂದು ವೈದ್ಯರು ಹೇಳಿ ಕಳಿಸ್ತಿದ್ದಾರೆ. ಡೆಲಿವರಿ ದಿನಾಂಕ ಜ.22 ರ ಆಸುಪಾಸಲ್ಲಿದ್ರೆ ಮಾತ್ರ ಡೆಲಿವರಿ ಮಾಡೋದಾಗಿ ಹೇಳಿ ವೈದ್ಯರು ಕಳುಹಿಸ್ತಿದ್ದಾರೆ. ಅವಧಿ ಪೂರ್ವ ಡೆಲಿವರಿ ಮಾಡಿದ್ರೆ ಏನೆಲ್ಲ ಸಮಸ್ಯೆಗಳು ಉಂಟಾಗಬಹುದು ಎನ್ನುವ ಮಾಹಿತಿಗಳನ್ನು ಗರ್ಭೀಣಿಯರು, ಪೋಷಕರಿಗೆ ಕೊಡ್ತಿದ್ದಾರೆ.