ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಕರ್ನಾಟಕ ಸರ್ಕಾರದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ ಎಚ್.ಕೆ. ಜಗದೀಶ್ ತಿಳಿಸಿದರು.
ಮೈಸೂರು : ಅಂತಾರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರತಿಭಾವಂತ ಕಾನೂನು ವಿದ್ಯಾರ್ಥಿಗಳಿಗೆ ಈಗ ಎಲ್ಲಿಲ್ಲದ ಬೇಡಿಕೆಯಿದೆ ಎಂದು ಕರ್ನಾಟಕ ಸರ್ಕಾರದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ ಎಚ್.ಕೆ. ಜಗದೀಶ್ ತಿಳಿಸಿದರು.
ನಗರದ ವಿದ್ಯಾವರ್ಧಕ ಕಾನೂನು ಕಾಲೇಜಿನಚಟುವಟಿಕೆಗಳನ್ನು ಶನಿವಾರ ಉದ್ಘಾಟಿಸಿ ಮಾತನಾಡಿದ ಅವರು, ಕ್ಯಾಂಪಸ್ ಆಯ್ಕೆ ಎನ್ನುವುದು ಇಷ್ಟು ದಿನ ಎಂಜಿನಿಯರಿಂಗ್ ಕೋರ್ಸಿಗೆ ಮಾತ್ರ ಅನ್ವಯಿಸುತ್ತಿತ್ತು. ಈಗ ಕ್ಯಾಂಪಸ್ ಆಯ್ಕೆ ಅನ್ನುವುದು ಕಾನೂನು ಕಾಲೇಜು, ವಿವಿ ಅಂಗಳಕ್ಕೂ ಕಾಲಿಟ್ಟಿದೆ. ಕಾನೂನು ವ್ಯಾಸಂಗದೆಡೆಗೆ ನಿರ್ಲಕ್ಷ್ಯತೆ ತೋರುತ್ತಿದ್ದವರೆ ಈಗ ಇದರೆಡೆಗೆ ತಮ್ಮ ಬೆರಗುಗಣ್ಣುಗಳಿಂದ ನೋಡುತ್ತಿದ್ದಾರೆ. ಇದು ಈ ದೇಶದಲ್ಲಿ ಕಾನೂನು ಶಿಕ್ಷಣ ಸಾಧಿಸಿದ ಜಯ ಎಂದು ಹೇಳಿದರು.
70, 80ರ ದಶಕಗಳಲ್ಲಿ ಅತ್ಯಂತ ನಿಕೃಷ್ಟವಾಗಿ ಕಾಣುತ್ತಿದ್ದ ಕಾನೂನು ವೃತ್ತಿ ಮತ್ತು ಕಾನೂನು ವ್ಯಾಸಂಗಕ್ಕೆ ಈಗ ಎಲ್ಲಾ ವೃತ್ತಿಪರ ಶಿಕ್ಷಣಗಳಿಗಿಂತಲೂ ಮಹತ್ವದ ಸ್ಥಾನವನ್ನು ನೀಡಲಾಗಿದೆ. 3- 4 ದಶಕಗಳ ಹಿಂದೆ ಕನ್ನಡದಲ್ಲಿ ಕಾನೂನು ವ್ಯಾಸಂಗ ಅಸಾಧ್ಯ ಎನ್ನುವ ಪರಿಸ್ಥಿತಿಗಳು ಇದ್ದವು. ಆದರೆ, ಈಗ ಕಾನೂನಿನ ಅತ್ಯಂತ ಕಠಿಣ ವಿಷಯಗಳನ್ನು ಕನ್ನಡದಲ್ಲಿಯೇ ಓದುವ ಸವಲತ್ತುಗಳು ನಿರ್ಮಾಣಗೊಂಡಿವೆ ಎಂದರು.
ಕನ್ನಡದಲ್ಲಿ ಕಾನೂನು ಓದುವ ವಿದ್ಯಾರ್ಥಿಗಳು ಕೀಳರಿಮೆಯಿಂದ ನರಳಬೇಕಿಲ್ಲ. ಇವತ್ತು ನ್ಯಾಯವಾದಿಗಳ ವೃತ್ತಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವುದು ಕನ್ನಡ ಮಾಧ್ಯಮ ವಿದ್ಯಾರ್ಥಿಗಳೇ, ಅದರಲ್ಲೂ ಗ್ರಾಮಾಂತರ ಭಾಗದ ವಿದ್ಯಾರ್ಥಿಗಳ ಅನ್ನುವುದು ನಾವೆಲ್ಲ ಹೆಮ್ಮೆಪಡಲೇಬೇಕಾದ ಸಂಗತಿ ಎಂದು ಅವರು ತಿಳಿಸಿದರು.
ಇವತ್ತು ಕರ್ನಾಟಕದ ಯಾವ ಕಾನೂನು ಕಾಲೇಜುಗಳು ಮೂಲಭೂತ ಸೌಕರ್ಯಗಳಿಲ್ಲದೆ ಪರಿತಪಿಸುತ್ತಿಲ್ಲ. ದೇಶದ ಅತ್ಯುನ್ನತ ಕಾನೂನು ಕಾಲೇಜುಗಳು ಹಾಗೂ ದೇಶದ ಏಕೈಕ ಕಾನೂನು ವಿಶ್ವವಿದ್ಯಾಲಯ ಇರುವುದು ಕರ್ನಾಟಕದಲ್ಲಿಯೇ. ಎಲ್ಲಾ ಸೌಕರ್ಯಗಳನ್ನು ಪಡೆದು ಓದುತ್ತಿರುವ ನೀವು ಇನ್ನೂ ಹೆಚ್ಚಿನದನ್ನು ಸಾಧಿಸಬೇಕಿದೆ ಎಂದು ಅವರು ಕರೆ ನೀಡಿದರು.
ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗುಂಡಪ್ಪ ಗೌಡ, ಖಜಾಂಚಿ ಶ್ರೀಶೈಲ ರಾಮಣ್ಣವರ್, ಆಡಳಿತ ಮಂಡಳಿ ಸದಸ್ಯ ಶಿವಲಿಂಗಯ್ಯ, ವಿದ್ಯಾವರ್ಧಕ ಕಾನೂನು ಕಾಲೇಜು ಪ್ರಾಂಶುಪಾಲೆ ಡಾ.ಪಿ. ದೀಪು, ಕಾನೂನು ಅಧ್ಯಯನದ ನಿರ್ದೇಶಕ ಪ್ರೊ.ಕೆ.ಬಿ. ವಾಸುದೇವ, ಕಾರ್ಯಕ್ರಮ ಆಯೋಜಕ ಡಾ.ಕೆ.ಎಲ್. ಚಂದ್ರಶೇಖರ್ ಐಜೂರ್ ಇದ್ದರು. ಎಂ.ಜೆ. ಇಂದುಮತಿ ನಿರೂಪಿಸಿದರು. ಡಾ.ಎ.ಆರ್. ಪ್ರಕೃತಿ ವಂದಿಸಿದರು.
ಭಾರತದಲ್ಲಿ ಸಂವಿಧಾನವೇ ಪವಿತ್ರ, ಸಂವಿಧಾನವೇ ಅಂತಿಮ. ಯಾವ ಕಾರಣಕ್ಕೂ ನಮ್ಮ ದೇಶದ ಕಾಯ್ದೆ, ಕಾನೂನುಗಳು ಅಸಂವಿಧಾನಿಕ, ಅಮಾನವೀಯವಾಗಿಯೂ ಇರಲು ಸಾಧ್ಯವಿಲ್ಲ. ನಮ್ಮ ದೇಶ ನಿಂತಿರುವುದೇ ಭಾರತ ಸಂವಿಧಾನದ ಮನೋಧರ್ಮದ ಮೇಲೆ. ಭಾರತ ಸಂವಿಧಾನದ ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಯಾವುದೇ ಬಿಕ್ಕಟ್ಟು ತಗಾದೆಗಳಿಲ್ಲದೆ ಸಾಮರಸ್ಯದಿಂದಿರಲು ಬಹುಮುಖ್ಯ ಕಾರಣವೇ ನಮ್ಮ ಸಂವಿಧಾನ.
- ಎಚ್.ಕೆ. ಜಗದೀಶ್, ಕರ್ನಾಟಕ ಸರ್ಕಾರದ ಕಾನೂನು ವಿಭಾಗದ ವಿಶೇಷ ಕಾರ್ಯದರ್ಶಿ