ಸಂವಿಧಾನ ಬುಡ ಮೇಲು ಮಾಡುವ ಕೆಲಸ ನಡೆದಿದೆ

By Kannadaprabha NewsFirst Published Dec 24, 2022, 4:45 AM IST
Highlights

  ಶೋಷಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿ ಇಂದು ಇಡಬ್ಲ್ಯುಎಸ್‌ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ದವಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸ ನಡೆದಿದೆ ಎಂದು ಚಿಂತಕ ಪ್ರೊ. ರವಿವರ್ಮಕುಮಾರ್‌ ವಿಷಾದಿಸಿದರು.

 ತುಮಕೂರು  (ಡಿ.24):  ಶೋಷಿತ ಸಮುದಾಯಗಳಿಗೆ ಮೀಸಲಾತಿಯ ಮೂಲಕ ಸಾಮಾಜಿಕ ನ್ಯಾಯ ಒದಗಿಸಿ, ಇಡೀ ವಿಶ್ವಕ್ಕೆ ಮಾದರಿಯಾಗಿದ್ದ ಭಾರತದಲ್ಲಿ ಇಂದು ಇಡಬ್ಲ್ಯುಎಸ್‌ ಹೆಸರಿನಲ್ಲಿ ಸಾಮಾಜಿಕ ನ್ಯಾಯಕ್ಕೆ ತದ್ವಿರುದ್ದವಾದ ಕಾಯ್ದೆಗಳನ್ನು ಜಾರಿಗೆ ತರುವ ಮೂಲಕ ಸಂವಿಧಾನವನ್ನು ಬುಡಮೇಲು ಮಾಡುವ ಕೆಲಸ ನಡೆದಿದೆ ಎಂದು ಚಿಂತಕ ಪ್ರೊ. ರವಿವರ್ಮಕುಮಾರ್‌ ವಿಷಾದಿಸಿದರು.

ನಗರದ ರವೀಂದ್ರ ಕಲಾನಿಕೇತನದಲ್ಲಿ ನೆಲೆಸಿರಿ ಸಾಂಸ್ಕೃತಿಕ ವೇದಿಕೆ, ದರೈಸ್ತ್ರಿ ಕಲಾಟ್ರಸ್ಟ್‌, ಸೇವಾ(ಬಿಎಸ್‌ಎನ್‌ಎಲ್‌) ತುಮಕೂರು ಆಯೋಜಿಸಿದ್ದ ಭಾರತ್‌ ಜೋಡೋ ಪಾದಯಾತ್ರೆ, ಸಂಬಂಧಗಳ ಬೆಸುಗೆ-ಬಹುತ್ವದ ನೆಲೆ ಎಂಬ ವಿಚಾರ ಕುರಿತ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮೈಸೂರು ಸಂಸ್ಥಾನ 1972ರಲ್ಲಿ ಜನಗಣತಿ ನಡೆಸಿ, ಕೆಲವೇ ಮಂದಿ ಜನರ ತೆರಿಗೆ ದ ಪಾಲನ್ನು ಸರಕಾರಿ ನೌಕರಿಯ ನೆಪದಲ್ಲಿ ಪಡೆಯುತ್ತಿರುವುದನ್ನು ಮನಗಂಡು ಮೊಟ್ಟಮೊದಲ ಬಾರಿಗೆ 1874ದಲ್ಲಿ ಸರಕಾರದ ಹುದ್ದೆಗಳಲ್ಲಿ ಮೀಸಲಾತಿಯನ್ನು ಜಾರಿಗೆ ತಂದರು. ಆ ನಂತರದಲ್ಲಿ ಮಿಲ್ಲರ್‌ ಆಯೋಗದ ವರದಿ ಅನ್ವಯ ಆಡಳಿತದಲ್ಲಿ ಜಾತಿವಾರು ಪ್ರಾತಿನಿಧ್ಯ ಕಲ್ಪಿಸಲಾಯಿತು. ಇದನ್ನು ಯಥಾವತ್ತಾಗಿ ಭಾರತದ ಸಂವಿಧಾನದಲ್ಲಿಯೂ ಅಳವಡಿಸಿಕೊಳ್ಳಲಾಯಿತು. ಇದರ ಮಹತ್ವ ಅರಿತ ವಿಶ್ವದ ಅನೇಕ ರಾಷ್ಟ್ರಗಳು ಸಹ ಇದನ್ನು ಅಳವಡಿಸಿಕೊಳ್ಳುವ ಮೂಲಕ ಸಾಮಾಜಿಕ ನ್ಯಾಯದಲ್ಲಿ ಭಾರತವನ್ನು ವಿಶ್ವಗುರುವಾಗಿ ಪರಿಗಣಿಸಿದ್ದವು ಎಂದರು.

ಕೇವಲ 1 ದಿನದಲ್ಲಿ ಅರ್ಥಿಕ ಹಿಂದುಳಿದವರಿಗೆ ಮೀಸಲಾತಿ ಹೆಸರಿನಲ್ಲಿ ಶೇ.4ರಷ್ಟುಜನರಿಗೆ ಶೇ.10ರ ಮೀಸಲಾತಿ ನೀಡಿ, ಸಾಮಾಜಿಕ ನ್ಯಾಯದ ವಿಶ್ವಗುರು ಪಟ್ಟವನ್ನು ಮಣ್ಣುಪಾಲು ಮಾಡುವ ಕೆಲಸವನ್ನು ಸ್ವಯಂಘೋಷಿತ ವಿಶ್ವಗುರುಗಳ ನೇತೃತ್ವದ ಸರಕಾರ ಮಾಡುವ ಮೂಲಕ ಶೂದ್ರ ಸಮುದಾಯಗಳ ಬೆಳವಣಿಗೆಗೆ ಕೊಡಲಿ ಪೆಟ್ಟು ನೀಡಿದವು ಎಂದು ನುಡಿದರು.

ಅಭಿವ್ಯಕ್ತಿ ಸ್ವಾತಂತ್ರವೆಂಬುದು ಭಾರತದ ಪ್ರಜೆಗೆ ಇರುವ ಬಹುದೊಡ್ಡ ಆಸ್ತ್ರ. ಆದರೆ ಕೆಲ ವರ್ಷಗಳಿಂದ ಕಾಶ್ಮೀರ ಜನತೆಗೆ ಅಭಿವ್ಯಕ್ತಿ ಸ್ವಾತಂತ್ರ ಮರೀಚಿಕೆಯಾಗಿದೆ.ಇಂಟರ್‌ನೆಟ್‌, ಮೊಬೈಲ್‌ ನೆಟ್‌ವರ್ಕ್ಗಳನ್ನು ಸ್ಥಗಿತಗೊಳಿಸಿ, ಅಲ್ಲಿನ ಜನರ ಹಕ್ಕುಗಳನ್ನು ಕಸಿಯಲಾಗಿದೆ. ಇದರ ವಿರುದ್ದ ಅನೇಕ ದೂರುಗಳು ಸುಪ್ರಿಂಕೋರ್ಟಿನಲ್ಲಿ ದಾಖಲಾದರೂ ಇದುವರೆಗೂ ವಿಚಾರಣೆಗೆ ಕೈಗೆತ್ತಿಕೊಂಡಿಲ್ಲ. ಸಂವಿಧಾನಿಕ ಸಂಸ್ಥೆಗಳಾದ ಆರ್‌.ಬಿ.ಐ, ಚುನಾವಣಾ ಆಯೋಗವನ್ನು ನಿಷ್ಕಿ›ಯಗೊಳಿಸುವ ವ್ಯವಸ್ಥಿತ ಸಂಚು ನಡೆದಿದೆ. ಹಾಗಾಗಿ ನ್ಯಾಯಾಧೀಶರ ನೇಮಕದಲ್ಲಿಯೂ ಮೀಸಲಾತಿ ಬಳಕೆಯಾಗಬೇಕೆಂಬುದು ನಮ್ಮ ಆಗ್ರಹವಾಗಿದೆ ಎಂದರು.

ಭಾರತ ಜೋಡೋ ಯಾತ್ರೆ ಎಂಬುದು ಒರ್ವ ನಾಯಕ ತನ್ನ ದೇಶ, ಅದರಲ್ಲಿ ಬದುಕಿರುವ ಜನರ ಕಷ್ಟ,ಸುಖಃಗಳನ್ನು ಅರಿಯಲು ಕಂಡುಕೊಂಡ ಮಾರ್ಗ ಎನ್ನಬಹುದು. ಇದು ಕೇವಲ ರಾಹುಲ್‌ಗಾಂಧಿ ಒಬ್ಬರು ಕೈಗೊಂಡ ಯಾತ್ರೆಯಲ್ಲ. ಜನರು ಅನುಭವಿಸುತ್ತಿರುವ ಸಂಕಷ್ಟಗಳಿಗೆ ಪರಿಹಾರ ಕಂಡುಕೊಳ್ಳಲು ಕಂಡು ಬಂದ ಹೊಸ ಮಾರ್ಗ. ಹಾಗಾಗಿ ನಾನು ಈ ಯಾತ್ರೆಯಲ್ಲಿ ಪಾಲ್ಗೊಂಡು, ರಾಹುಲ್‌ಗಾಂಧಿ ಅವರೊಂದಿಗೆ ಸಂವಾದ ನಡೆಸಿ, ಹಲವಾರು ಸಮಸ್ಯೆಗಳನ್ನು ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸಿದ್ದೇ. ಚುನಾವಣೆ ಹೊಸ್ತಿಲಿನಲ್ಲಿ ನಾವು ಇವುಗಳನ್ನು ಮೇಲುಕು ಹಾಕುವ ಮೂಲಕ ನಮಗೆ ಎಂತಹ ನಾಯಕ ಬೇಕು ಎಂಬ ಸ್ಪಷ್ಟತೆಯನ್ನು ಕಂಡುಕೊಳ್ಳುವ ಎಂದು ಸಲಹೆ ನೀಡಿದರು.

ಒಂದೆಡೆ ಸಂಸ್ಥೆಯ ಸಂಸ್ಥಾಪಕರಾದ ಅಕ್ಕೈ ಪದ್ಮಶಾಲಿ ಮಾತನಾಡಿ, ಇಂದು ದೇಶದೆಲ್ಲೆಡೆ ನಡೆಯುತ್ತಿರುವ ರಾಜಕೀಯ, ಆರ್ಥಿಕ ತಾರತಮ್ಯ, ಅನ್ಯಾಯದ ವಿರುದ್ದ ಹಾಗೂ ದೇಶದ ಐಕ್ಯತೆಗಾಗಿ ರಾಹುಲ್‌ ಕಂಡುಕೊಂಡ ಮಾರ್ಗವೇ ಭಾರತ್‌ ಜೋಡೊ ಯಾತ್ರೆಯಾಗಿದೆ. ಸಿಎಎ, ಎನ್‌.ಐ.ಎ ಮೂಲಕ ಒಂದು ಸಮುದಾಯವನ್ನು ಆಳುವ ವರ್ಗ ಗುರಿ ಮಾಡಿಕೊಂಡಿದ್ದರೂ ಧೀರ್ಘಕಾಲದಲ್ಲಿ ಇದರಿಂದ ಸಂಕಷ್ಟಕ್ಕೆ ಒಳಗಾಗುವವರಲ್ಲಿ ಹಿಂದುಳಿದ ವರ್ಗದವರು, ದಲಿತರು ಮತ್ತು ಲೈಂಗಿಕ ಅಲ್ಪಸಂಖ್ಯಾತರು ಆಗಿದ್ದಾರೆ. ಲೈಂಗಿಕ ಅಲ್ಪಸಂಖ್ಯಾತರಿಗೆ ತಂದೆ,ತಾಯಿ ಯಾರು ಎಂಬುದೇ ಗೊತ್ತಿರುವುದಿಲ್ಲ. ಹೀಗಿರುವಾಗಿ ಐದಾರು ತಲೆ ಮಾರುಗಳ ದಾಖಲೆ ಒದಗಿಸಲು ಸಾಧ್ಯವೆ ಎಂದು ಪ್ರಶ್ನಿಸಿದರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಚಿಂತಕ ಕೆ.ದೊರೆರಾಜು ಮಾತನಾಡಿ, ಅಸ್ಪೃಶ್ಯತೆಯಿರುವ ದೇಶದಲ್ಲಿ ರಾಹುಲ್‌ಗಾಂಧಿ ಅಸ್ಪೃಶ್ಯರ ಹೆಗಲ ಮೇಲೆ ಕೈ ಹಾಕಿದ್ದಾರೆ ಎಂಬುದು ಜನರ ಮನಸ್ಸಿನೊಳಗೆ ದೊಡ್ಡ ಸಂಚಲನವನ್ನು ಉಂಟು ಮಾಡಿದೆ. ದುಡಿಯುವ ವರ್ಗ, ಮಹಿಳೆಯರು ಜೀವ ಕೈಯಲ್ಲಿಡು ಬದುಕುತ್ತಿರುವ ಈ ಕಾಲದಲ್ಲಿ ನಿಮ್ಮದೊಂದಿಗೆ ನಾವಿದ್ದೇವೆ ಎಂದು ಹೇಳುವ ಮೂಲಕ ಭಾರತ ಜೋಡೋ ಯಾತ್ರೆ ಮನುಷ್ಯರ ಮನಸ್ಸಗಳನ್ನು ಬೆಸೆಯುವ ಕೆಲಸ ಮಾಡಿದೆ. ಜನರ ಪಾಲ್ಗೊಳ್ಳುವಿಕೆಯ ಮೂಲಕ ಭಾರತ ಸಂವಿಧಾನವನ್ನು ಪುನರ್‌ ಸ್ಥಾಪಿಸಬೇಕಿದೆ ಎಂದರು.

ಕಾರ್ಯಕ್ರಮ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದ ನಟರಾಜಪ್ಪ, ಪಕ್ಷಾತೀತ,ಜಾತ್ಯಾತೀತ, ಎಲ್ಲರನ್ನು ಒಳಗೊಳ್ಳುವ ಭಾರತ ಜೋಡೋ ಯಾತ್ರೆಯ ಕುರಿತು ಸಂವಾದದ ನಡೆಸುವ ಮೂಲಕ ಅದನ್ನು ಯುವಜನತೆಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್‌ಗಾಂಧಿ ಅವರೊಂದಿಗೆ ಹೆಜ್ಜೆ ಹಾಕಿದ ಪ್ರಗತಿಪರ ಕೃಷಿಕ ಅಣೆಕಟ್ಟೆವಿಶ್ವನಾಥ್‌. ದಲಿತ ಮುಖಂಡ ಮುರುಳಿ ಕುಂದೂರು, ತಮ್ಮ ಅನುಭವಗಳ ಜೊತೆಗೆ, ರಾಹುಲ್‌ಗಾಂಧಿ ಅವರೊಂದಿಗೆ ನಡೆಸಿದ ಮಾತುಕತೆಯ ಕುರಿತು ಪ್ರಸ್ತಾಪಿಸಿದರು. ವಕೀಲರಾದ ಕುಮಾರಿ ರಶ್ಮಿ ಕಾರ್ಯಕ್ರಮ ನಿರೂಪಿಸಿದರು.

ಮಲ್ಲಿಕಾ ಬಸವರಾಜು, ಅಕ್ಕಯ್ಯಮ್ಮ, ಬಾ.ಹ.ರಮಾಕುಮಾರಿ, ಡಾ.ಅರುಂಧತಿ, ಕವಿತಾ ಕಮ್ಮನಕೋಟೆ, ಡಾ.ಬಸವರಾಜು, ನರಸೀಯಪ್ಪ, ದಲಿತ ಮುಖಂಡ ನರಸಿಂಹಯ್ಯ, ಉಪನ್ಯಾಸಕರಾದ ಮಧುಸೂಧನ್‌ ಕೆ.ಪಿ.ಸೇರಿದಂತೆ ಹಲವರು ಸಂವಾದದಲ್ಲಿ ಪಾಲ್ಗೊಂಡಿದ್ದರು.

ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿಯ ಪೋಟೋದೊಂದಿಗೆ, ಹಿಂಸೆಯನ್ನು ಪ್ರತಿಪಾದಿಸಿದ, ಗಾಂಧಿಯನ್ನು ಕೊಲೆಗೆ ಸಹಕರಿಸಿದ ವ್ಯಕ್ತಿಯ ಭಾವಚಿತ್ರವನ್ನು ಸದನದಲ್ಲಿ ಹಾಕುವ ಮೂಲಕ ಸಾಮಾಜಿಕ ನ್ಯಾಯವನ್ನು ಬುಡಮೇಲು ಮಾಡುವ ಕೃತ್ಯ ನಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆಯಾಗಿದೆ.

- ಪ್ರೊ. ರವಿವರ್ಮ ಕುಮಾರ್‌, ಚಿಂತಕ

click me!