ಡ್ರಗ್ಸ್ ಮಾಫಿಯಾ ಜಾಲ ಇದೀಗ ಸಾಕಷ್ಟು ಸದ್ದು ಮಾಡುತ್ತಿದ್ದು, ಬೆಂಗಳೂರು ಸಮೀಪವಿರುವ ಚಿಕ್ಕಬಳ್ಳಾಪುರದಲ್ಲಿಯೂ ಸುದ್ದಿಯಾಗುತ್ತಿದೆ.
ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.06): ಡ್ರಗ್ಸ್ ಮಾಫಿಯಾದ ಕರಾಳ ಛಾಯೆ ನೆರೆಯ ಆಂಧ್ರಪ್ರದೇಶಕ್ಕೆ ಕೂಗಳತೆಯ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿಯೂ ಆವರಿಸಿದ್ದು ಕಳೆದ 10 ವರ್ಷದಲ್ಲಿ ಜಿಲ್ಲೆಯಲ್ಲಿ ಡ್ರಗ್ಸ್ ಸೇವನೆಯ ಮುಂಚೂಣಿಯಲ್ಲಿರುವ ಗಾಂಜಾ ಮಾರಾಟ ಹಾಗೂ ಸಾಗಾಟದ 49 ಪ್ರಕರಣಗಳು ವರದಿಯಾಗಿ 66 ಮಂದಿಯನ್ನು ಬಂಧಿಸಿ ಬರೋಬ್ಬರಿ 51 ಲಕ್ಷ ರು. ಮೌಲ್ಯದ ಗಾಂಜಾವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.
ಚಿಕ್ಕಬಳ್ಳಾಪುರ ರಾಜಧಾನಿ ಬೆಂಗಳೂರಿಗೆ ಸನಿಹದಲ್ಲಿದ್ದು ಜಿಲ್ಲೆಯಲ್ಲಿ ಬೆಂಗಳೂರು-ಹೈದ್ರಾಬಾದ್ ನಡುವೆ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ-7 ಡ್ರಗ್ಸ್ ರವಾನೆಗೆ ಸುಲಭ ರಹದಾರಿಯಾಗಿದೆ. ಕಳೆದ ಹತ್ತು ವರ್ಷಗಳ ಅಂಕಿ, ಅಂಶ ಗಮನಿಸಿದರೆ ಜಿಲ್ಲೆಯಲ್ಲಿ 2011ರಿಂದ 2020 ಆಗಸ್ಟ್ ಅಂತ್ಯದವರೆಗೂ ಜಿಲ್ಲೆಯಲ್ಲಿ ಒಟ್ಟು 49 ಅಕ್ರಮ ಸಾಗಾಟ ಹಾಗೂ ಮಾರಾಟದ ಗಾಂಜಾ ಪ್ರಕರಣಗಳು ವರದಿಯಾಗಿರುವುದು ಜಿಲ್ಲೆಯಲ್ಲಿ ಕಾನೂನು ಬಾಹಿರವಾಗಿ ಹಬ್ಬಿರುವ ಗಾಂಜಾ ಘಮಲುನ್ನು ಎತ್ತಿ ತೋರಿಸುತ್ತದೆ.
ಯುವ ಸಮೂಹವನ್ನೇ ಟಾರ್ಗೆಟ್ ಮಾಡಿಕೊಂಡು ಜಿಲ್ಲೆಯಲ್ಲಿ ಕೆಲವರು ಗಾಂಜಾ ಮಾರಾಟ ಜಾಲದಲ್ಲಿ ತೊಡಗಿರುವುದು ಕಂಡು ಬಂದಿದೆ. ವಿಶೇಷವಾಗಿ ಗ್ರಾಮೀಣ ಪ್ರದೇಶದಲ್ಲಿಯೆ ಮಹಿಳೆಯರೇ ಹಣದಾಸೆಗೆ ಬಿದ್ದು ಗಾಂಜಾ ಮಾರಾಟದಲ್ಲಿ ತೊಡಗಿದ್ದು, ರೈತರು ಕೊಳವೆ ಬಾವಿಗಳ ಸಮೀಪ ಬೆಳೆಯುವ ಟೊಮೆಟೋ, ತೊಗರಿ, ಮೆಕ್ಕೆಜೋಳ ಮತ್ತಿತರ ಬೆಳೆಗಳು ಮಧ್ಯೆ ಗಾಂಜಾ ಬೆಳೆಗೆ ಅಶ್ರಯವಾಗಿವೆ.
ಚಿಕ್ಕಬಳ್ಳಾಪುರ, ಚಿಂತಾಮಣಿ ಹೆಚ್ಚು:
ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ, ವಾಣಿಜ್ಯ ನಗರಿಯಾಗಿ ಗುರುತಿಸಿಕೊಂಡಿರುವ ಚಿಂತಾಮಣಿ ನಗರಗಳಲ್ಲಿ ಹಾಗೂ ತಾಲೂಕಿನಾದ್ಯಂತ ಗಾಂಜಾ ಮಾರಾಟ ಹಾಗೂ ಸಾಗಾಟ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ವರದಿಯಾಗಿವೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಡ್ರಗ್ಸ್ ಮಾಫಿಯಾದಲ್ಲಿ ಸಿಕ್ಕಿಬಿದ್ದಿರುವ ಆರೋಪಿಯೊಬ್ಬ ಜಿಲ್ಲೆಯ ಗೌರಿಬಿದನೂರು ತಾಲೂಕಿನವಾಗಿದ್ದು ಆಂಧ್ರದ ಹಿಂದೂಪುರ ಹಾಗೂ ಅನಂತಪುರಕ್ಕೆ ಸಮೀಪದಲ್ಲಿರುವ ಗೌರಿಬಿದನೂರಿಗೂ ಅಲ್ಲಿಂದ ಅಕ್ರಮವಾಗಿ ಡ್ರಗ್ಸ್, ಗಾಂಜಾ ಸಾಗಾಟ ಇದೆ.
ರಾಗಿಣಿ ಅರೆಸ್ಟ್: ನಮ್ಮ ಪಕ್ಷಕ್ಕೂ, ಅವರಿಗೂ ಯಾವುದೇ ಸಂಬಂಧವಿಲ್ಲ ಎಂದ ಸಚಿವ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದುವ ಶ್ರೀಮಂತರ ಮಕ್ಕಳು ಅಧಿಕ ಪ್ರಮಾಣದಲ್ಲಿ ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿದ್ದಾರೆಂಬ ಅಘಾತಕಾರಿ ಮಾಹಿತಿ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟುತಲ್ಲಣ ಮೂಡಿಸಿದೆ. ವಿಶೇಷವಾಗಿ ನಂದಿ ಗಿರಿಧಾಮದ ಸುತ್ತಮುತ್ತ ತಲೆ ಎತ್ತಿರುವ ಹಲವು ಹೈಟೆಕ್ ರೆಸಾರ್ಟ್‌ಗಳಲ್ಲಿ ಮಾದಕ ವಸ್ತಗಳ ಸೇವನೆ ಹಾಗೂ ಮಾರಾಟ ನಡೆಯುತ್ತಿದೆಯೆಂಬ ಆರೋಪಗಳು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ವರ್ಷ ಪ್ರಕರಣಗಳು ಗಾಂಜಾ ಜಪ್ತಿ ಬಂಧಿತರು ಮೌಲ್ಯ
2011 06 42 ಕೆಜಿ 6 7,08,000
2012 00 00 00 00
2013 02 1.05 ಕೆಜಿ 04 2,000
2014 01 92.5 ಕೆಜಿ 01 15,000
2015 01 1.5 ಕೆಜಿ 01 11,000
2016 03 40.800 ಕೆಜಿ 03 7,05,000
2017 08 74.220 ಕೆಜಿ 16 15,30,000
2018 07 253 ಕೆಜಿ 7 13,05,000
2019 15 71 ಕೆಜಿ 18 7,53,600
2020 06 8.800 ಕೆಜಿ 6 1,17,000
ಜಿಲ್ಲೆಯಲ್ಲಿ 2020ನೇ ಸಾಲಿನಲ್ಲಿ ಇದುವರೆಗೂ ಒಟ್ಟು 6 ಗಾಂಜಾ ಪ್ರಕರಣಗಳು ವರದಿಯಾಗಿದ್ದು, 6 ಮಂದಿ ಆರೋಪಿಗಳನ್ನು ಬಂಧಿಸಿ ಒಟ್ಟು 1,17 ಲಕ್ಷ ಮೌಲ್ಯದ ಗಾಂಜಾ ಜಪ್ತಿ ಮಾಡಲಾಗಿದೆ. ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಮಾಹಿತಿ ಕಲೆ ಹಾಕಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ಹಾಗೂ ಸಾಗಾಟ ಮಾಡುವವರ ವಿರುದ್ಧ ಪೊಲೀಸ್ ಇಲಾಖೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲು ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಿದೆ.
ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ.