Latest Videos

ಒಂದೇ ಸೂರಿನಡಿ ಬಾಯಲ್ಲಿ ನೀರೂರಿಸೋ ಬಗೆ ಬಗೆಯ ಮಾವು, ಹಲಸುಗಳು: ಮೇಳ ನಡೆಯುತ್ತಿರುವುದು ಎಲ್ಲಿ?

By Govindaraj SFirst Published May 25, 2024, 10:20 PM IST
Highlights

ಘಮ ಘಮಿಸೋ ಮಾವು, ಆ ಘಮವ ಆಗ್ರಾಣಿಸಿ ಕ್ಷಣ ಮಾತ್ರದಲ್ಲೇ ಬಾಯಲ್ಲಿ ನೀರೂರಿಸೋ ಮಾವು. ಕಣ್ಣು ಕೋರೈಸುವಂತೆ ಇರುವ ಬಣ್ಣ ಬಣ್ಣದ ಮಾವು. ಅಬ್ಬಬ್ಬಾ ಈ ಮಾವುಗಳ ವಿಶೇಷ ಒಂದೆರಡಲ್ಲ.

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.25): ಘಮ ಘಮಿಸೋ ಮಾವು, ಆ ಘಮವ ಆಗ್ರಾಣಿಸಿ ಕ್ಷಣ ಮಾತ್ರದಲ್ಲೇ ಬಾಯಲ್ಲಿ ನೀರೂರಿಸೋ ಮಾವು. ಕಣ್ಣು ಕೋರೈಸುವಂತೆ ಇರುವ ಬಣ್ಣ ಬಣ್ಣದ ಮಾವು. ಅಬ್ಬಬ್ಬಾ ಈ ಮಾವುಗಳ ವಿಶೇಷ ಒಂದೆರಡಲ್ಲ ರೀ. ಹೀಗೆ ಹತ್ತಾರು ರೀತಿಯಲ್ಲಿ ಗ್ರಾಹಕರ ಕಣ್ಮನಗಳನ್ನು ಕೋರೆಸುವುದಕ್ಕೆ ಹತ್ತಾರು ಬಗೆಯ ಮಾವುಗಳು ಒಂದೆ ಸೂರಿನಡಿಯಲ್ಲಿ ಸಿಗುತ್ತಿವೆ. ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿ ಹಾಪ್ ಕಾಮ್ಸ್ ವತಿಯಿಂದ ನಡೆಯುತ್ತಿರುವ ಮಾವು ಹಾಗೂ ಹಲಸು ಮೇಳದಲ್ಲಿ ಹೀಗೆ ಹಲವು ಬಗೆಯ ಮಾವು ಮತ್ತು ಹಲಸುಗಳು ಎಲ್ಲರನ್ನು ಕೈಬೀಸಿ ಕರೆಯುತ್ತಿವೆ. 

ಹೌದು! ನುಣ್ಣಗೆ ಚಿನ್ನದ ಬಣ್ಣದಲ್ಲಿ ಹೊಳೆಯುತ್ತಿರುವ ಬಾದಾಮಿ ತಳಿಯ ಮಾವು, ನಾಚಿ ನೀರಾದ ನೀರೆಯಂತೆ ಕೆಂಪಗೆ ಕಣ್ಣು ಕೋರೆಸುತ್ತಿರುವ ಸೆಂಧೂರ ಮಾವು, ಹಸಿರು ಮತ್ತು ಹಳದಿ ಮಿಶ್ರಿತ ಬಣ್ಣಗಳಿಂದ ವಿಶೇಷ ಮೆರಗು ಪಡೆದುಕೊಂಡಿರುವ ಮಲಗೋವಾ ಮಾವಿನಹಣ್ಣು. ಒಂದೆರಡಲ್ಲ ಹೇಳುತ್ತಾ ಹೋದರೆ 15 ಕ್ಕೂ ಹೆಚ್ಚು ಬಗೆಯ ಮಾವುಗಳು ಮೇಳದಲ್ಲಿ ಅಲಂಕರಿಸಿವೆ. ಮಲೆನಾಡು ಜಿಲ್ಲೆಯಾಗಿರುವ ಕೊಡಗಿನಲ್ಲಿ ನಾಲ್ಕೈದು ಮಾವು ಬಿಟ್ಟರೆ ಹೆಚ್ಚಿನ ಬಗೆಯ ಮಾವುಗಳಿಲ್ಲ. ಆದರೆ ಮಡಿಕೇರಿಯಲ್ಲಿ ನಡೆಯುತ್ತಿರುವ ಮಾವು ಮೇಳದಲ್ಲಿ ಬಾದಾಮಿ, ಬಂಗನ್ ಪಲ್ಲಿ, ಕಾಲಾಪಾಡಿ, ತೋತಾಪುರಿ, ಇಮಾಮ್ ಪಸಂದ್, ಮಲ್ಲಿಕ, ರಸಪೂರಿ, ಸಕ್ಕರೆ ಗುತ್ತಿ, ದಶೇರಿ ಮತ್ತು ಸಿರಿ ಸೇರಿದಂತೆ ಹಲವು ಬಗೆಯ ಮಾವುಗಳು ಒಂದೇ ಸೂರಿನಡಿಯಲ್ಲಿ ದೊರೆಯುತ್ತಿವೆ. 

ಮೂರು ದಿನಗಳಿಂದ ನಡೆಯುತ್ತಿರುವ ಮಾವು ಮೇಳದಲ್ಲಿ ನೂರಾರು ಜನರು ಭಾಗವಹಿಸಿ ತಮಗಿಷ್ಟವಾದ ಮಾವುಗಳನ್ನು ಖರೀದಿಸಿ ರುಚಿ ಸವಿಯುತ್ತಿದ್ದಾರೆ. ಕೊಡಗಿನಲ್ಲಿ ಇಲ್ಲದ ಹಲವು ಬಗೆಯ ಮಾವುಗಳನ್ನು ರಾಮನಗರ, ಕನಕಪುರ ಚನ್ನರಾಯಪಟ್ಟಣ ಹೀಗೆ ವಿವಿಧೆಡೆಯಿಂದ ಹಲವು ಬಗೆಯ ಮಾವುಗಳನ್ನು ತಂದು ಭರ್ಜರಿ ಮಾರಾಟ ಮಾಡಲಾಗುತ್ತಿದೆ. ಅದರಲ್ಲೂ ಮಾವನ್ನು ಯಾವುದೇ ರಸಾಯನಿಕ ಇಲ್ಲದೆ ಸಾವಯವ ಮಾದರಿಯಲ್ಲೇ ಹಣ್ಣು ಮಾಡಿ ಮಾರಾಟ ಮಾಡುತ್ತಿರುವುದು ಕೊಡಗಿನ ಮತ್ತಷ್ಟು ಗ್ರಾಹಕರನ್ನು ಸೆಳೆಯಲು ಅನುಕೂಲಕರವಾಗಿದೆ. ಗ್ರಾಹಕರು ಕೂಡ ಒಂದೆರಡು ಕೆ.ಜಿ. ತೆಗೆದುಕೊಳ್ಳುವ ಬದಲು ಐದಾರು ಕೆ.ಜಿ. ಮಾವುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ದು ಮನೆ ಮಂದಿಯೆಲ್ಲಾ ಎಂಜಾಯ್ ಮಾಡುತ್ತಿದ್ದಾರೆ. 

'ಹಸಿದು ಹಲಸು ತಿನ್ನು ಉಂಡುಮಾವು ತಿನ್ನು': ಮಲೆನಾಡಿನಲ್ಲಿ ಈಗ ಹಲಸಿನ ಸುಗ್ಗಿ!

ಬೇರೆ ಜಿಲ್ಲೆಗಳಿಂದ ಮಾವನ್ನು ತಂದು ಮಾರಾಟ ಮಾಡುತ್ತಿರುವ ರೈತರು ಕೂಡ ಉತ್ತಮ ಆದಾಯ ಪಡೆಯುತ್ತಿರುವ ಖುಷಿಯಲ್ಲಿದ್ದಾರೆ. ಮಾವಿನ ಜೊತೆಗೆ ಬಕ್ಕೆ ಹಲಸನ್ನು ಮಾರಾಟ ಮಾಡಲಾಗುತ್ತಿದ್ದು ಹೆಚ್ಚಿನ ಪ್ರಮಾಣದಲ್ಲಿ ಜನರು ಖರೀದಿಸಿ ಎಂಜಾಯ್ ಮಾಡುತ್ತಿದ್ದಾರೆ. ಕೇವಲ ಮಾವು, ಹಲಸಿನ ಹಣ್ಣುಗಳ ಮಾರಾಟ ಅಷ್ಟೇ ಅಲ್ಲ, ಅವುಗಳಿಂದ ಐಸ್ಕ್ರೀಂ ಗಳನ್ನು ಸ್ಥಳದಲ್ಲಿಯೇ ಮಾಡಿ ಮಾರಾಟ ಮಾಡಲಾಗುತ್ತಿದೆ. ಇದರ ಜೊತೆಗೆ ಮಾವು ಹಾಗೂ ಹಲಸಿನ ಹಣ್ಣಿನ ಗಿಡಗಳನ್ನು ಮಾರಾಟ ಮಾಡಲಾಗುತ್ತಿದೆ. ಒಟ್ಟಿನಲ್ಲಿ ವರ್ಷಕ್ಕೊಮ್ಮೆ ಸಿಗುವ ಹಣ್ಣಿನ ರಾಜಾ ಎಂದೇ ಕರೆಯುವ ತರಾವರಿಯ ಮಾವಿನ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತಿದೆ. ಗ್ರಾಹಕರು ಕೂಡ ಹೊರ ಜಿಲ್ಲೆಯಿಂದ ತಂದಿರುವ ರುಚಿ ರುಚಿಯಾದ ಮಾವಿನ ಹಣ್ಣುಗಳನ್ನು ಖರೀದಿಸಿ ಸವಿದು ಫುಲ್ ಎಂಜಾಯ್ ಮಾಡುತ್ತಿದ್ದಾರೆ.

click me!