
ಬೆಳ್ತಂಗಡಿ (ಸೆ.08): ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ ಎಲ್ಲೆಡೆ ಮನೆ ಮಾಡಿದ್ದು, ಮೊಸರು ಕುಡಿಕೆ ಉತ್ಸವದ ಸಡಗರವೂ ಕಳೆಗಟ್ಟಿದೆ. ಉತ್ಸವದ ಪ್ರಮುಖ ಆಕರ್ಷಣೆಯಾಗಿರುವ ಜಾರುಕಂಬ ಏರುವ ಸ್ಪರ್ಧೆ. ಯುವಕರು ಜಾರುಕಂಬ ಏರಲು ಪಡುವ ಹರಸಾಹಸ ನೋಡುಗರನ್ನು ರೋಮಾಂಚನಗೊಳಿಸುತ್ತದೆ. ಆದರೆ, ಯುವಕರಿಗಾಗಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ 7ನೇ ತರಗತಿಯ ಬಾಲಕನೊಬ್ಬ 40 ಅಡಿ ಎತ್ತರದ ಜಾರುಕಂಬ ಸರಸರನೆ ಏರಿ ಅಚ್ಚರಿ ಮೂಡಿಸಿದ್ದಾನೆ.
ಕಡಿರುದ್ಯಾವರ ಗ್ರಾಮದ ಕುಕ್ಕಾವು ನಿವಾಸಿ ಮಹಮ್ಮದ್ ಬಾತೀಶ್ ಈ ಸಾಹಸ ಮೆರೆದ ಬಾಲಕ. ಕುಕ್ಕಾವು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಊರವರ ಸಹಯೋಗದಲ್ಲಿ ಆಯೋಜಿಸಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮೊಸರು ಕುಡಿಕೆ ಉತ್ಸವದಲ್ಲಿ ಈ ಘಟನೆ ನಡೆದಿದೆ.
ಮೊಸರು ಕುಡಿಕೆ ಉತ್ಸವದಲ್ಲಿ ಸುಮಾರು 40 ಅಡಿ ಎತ್ತರದ ಜಾರುಕಂಬ ಏರುವ ಸ್ಪರ್ಧೆ ವಿಶೇಷ ಆಕರ್ಷಣೆಯಾಗಿತ್ತು. ಅಡಿಕೆ ಮರದ ಸಿಪ್ಪೆ ತೆಗೆದು, ಅದಕ್ಕೆ ಬಾಳೆಹಣ್ಣು ಹಾಗೂ ಗ್ರೀಸ್ ಹಚ್ಚಿ ಮತ್ತಷ್ಟು ಜಾರುವಂತೆ ಮಾಡಲಾಗಿತ್ತು. ಮರದ ತುದಿಯಲ್ಲಿ ಆಯಿಲ್ ಬಾಟಲಿ ಇಟ್ಟು ಮರಕ್ಕೆ ಬೀಳುವಂತೆ ಮಾಡಲಾಗಿತ್ತು. ಜೊತೆಗೆ ಮರದ ಮೇಲ್ಭಾಗದಲ್ಲಿ ಹಾಲಿನ ಬಾಟಲಿಯನ್ನು ನೇತುಹಾಕಲಾಗಿದ್ದು, ಅದನ್ನು ಏರಿ ಬಹುಮಾನ ಪಡೆಯುವ ಸಾಹಸ ಕ್ರೀಡೆ ಇದಾಗಿತ್ತು.
ಜಾರುಕಂಬ ಸ್ಪರ್ಧೆಯಲ್ಲಿ ಒಟ್ಟು 15 ಮಂದಿ ಹೆಸರು ನೋಂದಾಯಿಸಿದ್ದರು. ಇದು ಯುವಕರಿಗಾಗಿ ಆಯೋಜಿಸಿದ್ದ ಸ್ಪರ್ಧೆಯಾಗಿದ್ದರಿಂದ ಮಹಮ್ಮದ್ ಬಾತೀಶ್‌ಗೆ ಆರಂಭದಲ್ಲಿ ಅವಕಾಶ ನಿರಾಕರಿಸಲಾಗಿತ್ತು. ಆದರೆ, ತಾನೂ ಕಂಬ ಏರುತ್ತೇನೆ ಎಂದು ಬಾಲಕ ಹಠ ಹಿಡಿದಿದ್ದಾನೆ. ಆತನ ಉತ್ಸಾಹ ಕಂಡ ಸಂಘಟಕರು ಮನೆಯವರ ಒಪ್ಪಿಗೆ ಪಡೆದು, ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ನೀಡಿದರು. ಒಬ್ಬೊಬ್ಬರು 10ರಿಂದ 15 ಬಾರಿ ಪ್ರಯತ್ನಿಸಿದರೂ ಕಂಬದ ಮೇಲೇರಲು ಸಾಧ್ಯವಾಗಲಿಲ್ಲ. ಕೊನೆಗೆ ಸಂಘಟಕರು ಶಾಲು ( ಬೈರಾಸು) ನೀಡಿದ್ದು, ಅದರ ನೆರವಿನಿಂದ ಕಂಬ ಏರಲು ಅವಕಾಶ ಕಲ್ಪಿಸಿದರು.
ಈ ಸಂದರ್ಭ ಮಹಮ್ಮದ್ ಬಾತೀಶ್ ಶಾಲಿನ ನೆರವು ಪಡೆದು ಜಾರುಕಂಬ ಏರಲು ಆರಂಭಿಸಿದ. ಕೆಲವೇ ಕ್ಷಣಗಳಲ್ಲಿ ಆತ ಸರಸರನೆ 40 ಅಡಿ ಎತ್ತರದ ಕಂಬವನ್ನು ಏರಿ ಮೇಲ್ಭಾಗ ತಲುಪಿದಾಗ ನೆರೆದಿದ್ದವರಿಂದ ಚಪ್ಪಾಳೆಯ ಸುರಿಮಳೆಯಾಯಿತು. ಬಳಿಕ ಮೇಲ್ಭಾಗದಲ್ಲಿ ನೇತುಹಾಕಿದ್ದ ಹಾಲಿನ ಬಾಟಲಿಯನ್ನು ಪಡೆದುಕೊಂಡ ಬಾಲಕನ ಸಾಹಸಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದರು. ಸಾಹಸ ಪೂರ್ಣಗೊಳಿಸಿ ಬಹುಮಾನ ಸ್ವೀಕರಿಸಿದ ಬಾತೀಶ್‌ನ ಮುಖದಲ್ಲಿದ್ದ ಸಂತಸಕ್ಕೆ ಪಾರವೇ ಇರಲಿಲ್ಲ.
ಮಹಮ್ಮದ್ ಬಾತೀಶ್ ಮನೆಯಲ್ಲೇ ಅಡಿಕೆ ಮರ ಏರುತ್ತಿದ್ದ. ಹೀಗಾಗಿ ಮರ ಏರುವ ಕೌಶಲ ಆತನಿಗೆ ತಕ್ಕಮಟ್ಟಿಗೆ ತಿಳಿದಿತ್ತು. ಆದರೆ, ಇಷ್ಟೊಂದು ಎತ್ತರದ ಹಾಗೂ ಜಾರುವ ಕಂಬವನ್ನು ಏರಿದ್ದು ನಮಗೂ ಅಚ್ಚರಿ ತಂದಿದೆ. ಸಂಘಟಕರು ನಮ್ಮ ಅನುಮತಿ ಪಡೆದು, ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅವಕಾಶ ನೀಡಿದ್ದರು ಎನ್ನುತ್ತಾರೆ ಬಾಲಕನ ತಂದೆ ಬಶೀರ್ ಅವರು.