
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2015ರಿಂದ 2025ರ ನಡುವೆ ದಾಖಲಾದ ಒಟ್ಟು 295 ದಲಿತ ದೌರ್ಜನ್ಯ ಪ್ರಕರಣಗಳ ಪೈಕಿ ಶಿಕ್ಷೆಯಾಗಿರೋದು ಕೇವಲ 14 ಪ್ರಕರಣಗಳಲ್ಲಿ ಮಾತ್ರ! ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಮಿಥುನ್ ಎಚ್. ಎನ್. ಅಧ್ಯಕ್ಷತೆಯಲ್ಲಿ ಭಾನುವಾರ ನಡೆದ ಎಸ್‌ಸಿ ಎಸ್‌ಟಿ ಕುಂದು ಕೊರತೆ ಪರಿಹಾರ ಸಭೆಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಎಂ. ದೇವದಾಸ್ ಅವರು ದಾಖಲೆಗಳ ಸಮೇತ ವಿಚಾರ ಪ್ರಸ್ತಾಪ ಮಾಡಿ ಕಳವಳ ವ್ಯಕ್ತಪಡಿಸಿದರು.
ಆರ್‌ಟಿಐ ಕಾಯ್ದೆಯಡಿ ಪಡೆದ ಮಾಹಿತಿ ಪ್ರಕಾರ, 2015 ಮತ್ತು 2025ರ ನಡುವೆ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 151 ಪ್ರಕರಣಗಳು ಈ ಕಾಯ್ದೆಯಡಿ ದಾಖಲಾಗಿದ್ದವು. ಈ ಪೈಕಿ ಕೇವಲ ಏಳು ಪ್ರಕರಣಗಳಲ್ಲಿ ಶಿಕ್ಷೆಯಾಗಿದ್ದರೆ, 144 ಪ್ರಕರಣಗಳು ಖುಲಾಸೆಯಲ್ಲಿ ಕೊನೆಗೊಂಡಿವೆ. ಆದೇ ರೀತಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಇದೇ ಅವಧಿಯಲ್ಲಿ 149 ಪ್ರಕರಣಗಳು ದಾಖಲಾಗಿವೆ. ಇಲ್ಲೂ ಕೇವಲ ಏಳು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆಯಾಗಿದೆ ಎಂದು ದೇವದಾಸ್ ತಿಳಿಸಿದರು.
ಈ ಸಂದರ್ಭ ಮಾತನಾಡಿದ ದಲಿತ ಮುಖಂಡ ಎಸ್ .ಪಿ. ಆನಂದ್, ಸಂತ್ರಸ್ತರಿಗೆ ಆಗಾಗ ಬೆದರಿಕೆ ಹಾಕಿ ನ್ಯಾಯಾಲಯದಲ್ಲಿ ಖುಲಾಸೆಗೆ ಕಾರಣವಾಗುತ್ತಿದೆ. ಆದ್ದರಿಂದ ಇಂಥ ಪ್ರಕರಣಗಳ ಸಂತ್ರಸ್ತರಿಗೆ ವಿಶ್ವಾಸ ಮೂಡಿಸುವಂತೆ ಅವರು ಪೊಲೀಸರನ್ನು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಡಿಸಿಪಿ (ಅಪರಾಧ ಮತ್ತು ಸಂಚಾರ) ರವಿಶಂಕರ್, ಹಲವಾರು ಪ್ರಕರಣಗಳಲ್ಲಿ ಪ್ರತ್ಯಕ್ಷದರ್ಶಿಗಳು ನ್ಯಾಯಾಲಯದಲ್ಲಿ ಪ್ರತಿಕೂಲವಾಗಿ ವರ್ತಿಸುವುದರಿಂದ ಆರೋಪಿಗಳು ಖುಲಾಸೆಗೊಳ್ಳುವಂತಾಗುತ್ತದೆ ಎಂದು ತಿಳಿಸಿದರು.
ಎಸ್‌ಸಿ ಎಸ್‌ಟಿ ಸಮುದಾಯಗಳಿಗೆ ದೌರ್ಜನ್ಯ ತಡೆ ಕಾಯ್ದೆ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ದೇವದಾಸ್ ಮನವಿ ಮಾಡಿದರು. ಪ್ರತಿಕ್ರಿಯಿಸಿದ ಡಿಸಿಪಿ ಮಿಥುನ್, ಸಮಾಜ ಕಲ್ಯಾಣ ಇಲಾಖೆಯ ಸಮನ್ವಯದೊಂದಿಗೆ ಶೀಘ್ರದಲ್ಲೇ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ಹೇಳಿದರು. ದೌರ್ಜನ್ಯಕ್ಕೊಳಗಾದವರು ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಬಹುದು. ನಂತರ ಅದನ್ನು ತನಿಖೆ ಮತ್ತು ಚಾರ್ಜ್‌ಶೀಟ್ ಸಲ್ಲಿಸಲು ಡಿಸಿಆರ್‌ಇ ಠಾಣೆಗೆ ವರ್ಗಾಯಿಸಲಾಗುತ್ತದೆ ಎಂದು ಡಿಸಿಪಿ ಮಾಹಿತಿ ನೀಡಿದರು.
ಕೆಂಪು ಕಲ್ಲು ಮತ್ತು ಮರಳಿನ ಕೊರತೆಯಿಂದಾಗಿ ಬಡ ಕಾರ್ಮಿಕರು ತೊಂದರೆ ಎದುರಿಸುತ್ತಿದ್ದಾರೆ ಎಂದು ಗಿರೀಶ್ ಕುಮಾರ್‌ಗಮನ ಸೆಳೆದರು. ಕೆಂಪು ಕಲ್ಲು ಬೆಲೆ ತೀವ್ರವಾಗಿ ಏರಿದ್ದು, ಇದಕ್ಕೆ ಮಿತಿ ಹಾಕಬೇಕು ಎಂದು ಒತ್ತಾಯಿಸಿದರು. ಪ್ರತಿಕ್ರಿಯಿಸಿದ ಡಿಸಿಪಿ ಮಿಥುನ್, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದರು.
ಕಾರ್ಕಳದ ಅಭಿಷೇಕ್ ಆಚಾರ್ಯ ಆತ್ಮ8ಹತ್ಯೆಗೆ ಸಂಬಂಧಿಸಿದಂತೆ ಎಸ್‌ಸಿ ಸಮುದಾಯದ ಮಹಿಳೆಯನ್ನು ಗುರಿಯಾಗಿಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ಅವಹೇಳನಕಾರಿ ಪೋಸ್ಟ್‌ಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಾಯಕರು ಒತ್ತಾಯಿಸಿದರು. ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶವು ಅಂತಹ ಪೋಸ್ಟ್‌ಗಳ ಮೇಲೆ ನಿಗಾ ಇಡುತ್ತಿದೆ ಮತ್ತು ಪೊಲೀಸರು ಅಗತ್ಯ ಕ್ರಮ ಕೈಗೊಳ್ಳುತ್ತಿದ್ದಾರೆ ಎಂದು ಡಿಸಿಪಿ ಭರವಸೆ ನೀಡಿದರು.
ಸುರತ್ನಲ್‌ನಲ್ಲಿ ದಂಪತಿ ಮನೆ ಕುಸಿದುಬಿದ್ದು, ಅವರು ಪ್ರಸ್ತುತ ಅಂಬೇಡ್ಕರ್‌ಭವನದಲ್ಲಿ ವಾಸಿಸುತ್ತಿದ್ದಾರೆ ಎಂದು ಮುಖಂಡರು ಉಲ್ಲೇಖಿಸಿದರು. ಅವರಿಗೆ ಹೊಸ ಮನೆ ನಿರ್ಮಿಸಲು ಸಹಾಯ ನೀಡುವಂತೆ ಡಿಸಿಆರ್‌ಇ ಮತ್ತು ಸಮಾಜ ಕಲ್ಯಾಣ ಇಲಾಖೆಗೆ ಪತ್ರ ಬರೆಯುವಂತೆ ಪೊಲೀಸರಿಗೆ ಮನವಿ ಮಾಡಿದರು.