21 ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ: ಅಪರಾಧಿಗೆ 10 ವರ್ಷ ಜೈಲು

By Kannadaprabha NewsFirst Published Mar 9, 2021, 2:43 PM IST
Highlights

ಸುಮಾರು 21 ಬಾಲಕರ ಮೇಲೆ ಅನೈಸರ್ಗಿಕವಾಗಿ  ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಗೆ 10 ವರ್ಷಗಳ ಕಾಲ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. 

 ಉಡುಪಿ (ಮಾ.09):  ಸುಮಾರು 21 ಮಂದಿ ಬಾಲಕರ ಮೇಲೆ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯ ಎಸಗಿರುವ ಫೋಕ್ಸೊ ಪ್ರಕರಣಗಳಲ್ಲಿ ಬಂಧಿತನಾಗಿರುವ ನಕಲಿ ಪತ್ರಕರ್ತ ಕೆ. ಚಂದ್ರ ಹೆಮ್ಮಾಡಿ ಎಂಬಾತನಿಗೆ, ಒಂದು ಪ್ರಕರಣದಲ್ಲಿ ಉಡುಪಿ ಜಿಲ್ಲಾ ನ್ಯಾಯಾಲಯ 10 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 10 ಸಾವಿರ ರು. ದಂಡ ವಿಧಿಸಿದೆ.

ಈತ ತಾನು ವರದಿಗಾರನೆಂದು ಹೇಳಿಕೊಂಡು ಬೈಂದೂರು ತಾಲೂಕಿನ ಗ್ರಾಮೀಣ ಪ್ರದೇಶಕ್ಕೆ ತೆರಳಿ ಅಲ್ಲಿನ ಬಾಲಕರಿಗೆ ಪ್ರಾಣಿ, ಪಕ್ಷಿ, ಶಾಲಾ ಕಟ್ಟಡದ ಛಾಯಾಚಿತ್ರ ತೆಗೆಯಲು ತನ್ನ ಜೊತೆ ಬರುವಂತೆ ಪುಸಲಾಯಿಸಿ ಕರೆದೊಯ್ದು ಅವರ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ.

2018ರ ನವೆಂಬರ್‌ನಲ್ಲಿ ಇಂತಹ ಒಂದು ಘಟನೆಯಲ್ಲಿ ದೌರ್ಜನ್ಯಕ್ಕೊಳಗಾದ 11 ವರ್ಷದ ಬಾಲಕ ಮಾನಸಿಕ ತೊಂದರೆಗೀಡಾಗಿದ್ದು, ಆತನನ್ನು ಮಾನಸಿಕ ತಜ್ಞರ ಬಳಿ ಕರೆದೊಯ್ದು ಕೌನ್ಸೆಲಿಂಗ್‌ ಮಾಡಿಸಿದಾಗ ತನ್ನ ಮೇಲೆ ಚಂದ್ರ ಹೆಮ್ಮಾಡಿ ದೌರ್ಜನ್ಯ ನಡೆದಿರುವುದು ಹೇಳಿಕೊಂಡಿದ್ದ. ಈ ಬಗ್ಗೆ ಪೋಷಕರು ಬೈಂದೂರು ಠಾಣೆಗೆ ದೂರು ನೀಡಿದ್ದು, ಪೋಕ್ಸೊ ಕಾಯ್ದೆಯಡಿ ಆರೋಪಿಯನ್ನು ಬಂಧಿಸಲಾಗಿತ್ತು. ಈ ಘಟನೆ ಬೆಳಕಿಗೆ ಬರುತ್ತಲೇ, ಬೈಂದೂರು, ಕೊಲ್ಲೂರು ಸಹಿತ ವಿವಿಧ ಠಾಣೆಗಳಲ್ಲಿ ಸುಮಾರು 21 ಫೋಕ್ಸೊ ಪ್ರಕರಣಗಳು ದಾಖಲಾಗಿದ್ದವು.

ಭಟ್ಕಳ: ಬಾಲಕಿ ಮೇಲೆ ಅತ್ಯಾಚಾರ, ಇಬ್ಬರು ಕಾಮುಕರ ಬಂಧನ

ಈ ಪೈಕಿ ಮೊದಲ ಪ್ರಕರಣವನ್ನು ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಯಾದವ್‌ ವನಮಾಲಾ ಆನಂದರಾವ್‌ ಆರೋಪಿಯು ದೋಷಿ ಎಂದು ತೀರ್ಪು ಪ್ರಕಟಿಸಿ, ಶಿಕ್ಷೆ ವಿಧಿಸಿದ್ದಾರೆ.

ಈ ಪ್ರಕರಣದಲ್ಲಿ ಅಂದಿನ ಬೈಂದೂರು ಸಿಪಿಐ ಪರಮೇಶ್ವರ್‌ ಆರ್‌. ಗುನಗ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಸಲ್ಲಿಸಿದ್ದು, 36 ಸಾಕ್ಷಿಗಳಲ್ಲಿ ಸಂತ್ರಸ್ತ ಬಾಲಕನ ಸಹಿತ 15 ಮಂದಿ ಸಾಕ್ಷಿ ನುಡಿದಿದ್ದರು.

ಉಡುಪಿಯ ಪೋಕ್ಸೊ ನ್ಯಾಯಾಲಯದ ವಿಶೇಷ ಸರ್ಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ಅವರು ಪ್ರಾಸಿಕ್ಯೂಶನ್‌ ಪರ ವಾದ ಮಂಡಿಸಿದ್ದರು.

click me!