
ಮಂಗಳೂರು: ಮಂಗಳೂರು ಜಿಲ್ಲಾ ಜೈಲಿನಲ್ಲಿ (Mangalore jail extortion) ನಡೆದ ಹಫ್ತಾ ವಸೂಲಿ ಹಾಗೂ ಹಲ್ಲೆ ಪ್ರಕರಣದ ನಂತರ, ಮಂಗಳೂರು ಪೊಲೀಸರು ಎಚ್ಚರಗೊಂಡಿದ್ದು, ಆರೋಪಿಗಳ ವಿರುದ್ಧ ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (ಕೆ-ಕೋಕಾ) ಅಡಿ ಪ್ರಕರಣ ದಾಖಲಿಸಿದ್ದಾರೆ. ಈ ಹಿಂದೆ ಏಷ್ಯಾನೆಟ್ ಸುವರ್ಣ ನ್ಯೂಸ್ ಪ್ರಕಟಿಸಿದ್ದ ವರದಿಯಲ್ಲಿ, ಜೈಲಿನೊಳಗಿನ ಅನೇಕ ಅಕ್ರಮಗಳ ಬಗ್ಗೆ ಬೆಳಕಿಗೆ ಬಂದಿತ್ತು. ಇದರ ಬೆನ್ನಲ್ಲೇ ಸಹ ಕೈದಿಗೆ ಹಲ್ಲೆ ನಡೆಸಿ ಹಣ ವಸೂಲಿ ಮಾಡುತ್ತಿದ್ದ ಪ್ರಕರಣ ತೀವ್ರಗೊಂಡಿದೆ. ಇದೀಗ ಸಹಕೈದಿಗೆ ಹಲ್ಲೆ ನಡೆಸಿ ಹಫ್ತಾ ವಸೂಲಿ ಮಾಡಿದ್ದ ಆರೋಪಿಗಳ ವಿರುದ್ಧ ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಹಲ್ಲೆ ಪ್ರಕರಣದಲ್ಲಿ ಧನು (ಧನುಷ್ ಭಂಡಾರಿ), ಸಚಿನ್ ತಲಪಾಡಿ, ದಿಲ್ಲು (ದಿಲೇಶ್ ಬಂಗೇರ) ಮತ್ತು ಲಾಯಿ ವೇಗಸ್ ವಿರುದ್ಧ ಕಠಿಣ ಆರೋಪ ಹೊರಡಲಾಗಿದೆ. ಈ ಆರೋಪಿಗಳು ವಿಚಾರಣಾಧೀನ ಕೈದಿ ಮಿಥುನ್ ಮೇಲೆ ಜುಲೈ 12 ರಂದು ಹಲ್ಲೆ ನಡೆಸಿದ್ದು, ನೇರವಾಗಿ ₹50,000 ಹಣ ನೀಡುವಂತೆ ಬೆದರಿಕೆ ಹಾಕಿದ್ದರು.
ಹಲ್ಲೆಗೊಳಗಾದ ಮಿಥುನ್, ಕಾರಾಗೃಹದಲ್ಲಿನ ಫೋನ್ ಬೂತ್ ಮೂಲಕ ತನ್ನ ಪತ್ನಿಗೆ ಕರೆ ಮಾಡಿ ಈ ವಿಷಯವನ್ನು ತಿಳಿಸಿದ್ದರು. ನಂತರ ಪತ್ನಿಯ ಮೂಲಕ ಸಚಿನ್ ನೀಡಿದ್ದ ಎರಡು ಫೋನ್ ಪೇ ನಂಬರಿಗೆ ತಲಾ ₹10,000 ರಂತೆ ಹಣ ಕಳುಹಿಸಲಾಗಿತ್ತು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
ಈ ಎಲ್ಲಾ ಹಿನ್ನೆಲೆಯ ನಡುವೆಯೇ, ಮಂಗಳೂರು ಪೊಲೀಸರು ಆರೋಪಿಗಳ ವಿರುದ್ಧ ಕೆ-ಕೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಕಾಯ್ದೆಯಡಿಯಲ್ಲಿ ಕನಿಷ್ಠ ಐದು ವರ್ಷದಿಂದ ಜೀವಾವಧಿ ಶಿಕ್ಷೆವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ.
ಮಂಗಳೂರು ನಗರ ಪೊಲೀಸ್ ಕಮೀಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ಈ ಕುರಿತು ಹೇಳಿಕೆ ನೀಡಿದ್ದು, “ಇದೇ ರೀತಿಯಲ್ಲಿ ಮತ್ತೊಂದು ಪ್ರಕರಣದಲ್ಲಿ ಭಾಗಿಯಾದರೆ, ಕೋಕಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸುವುದು ಗ್ಯಾರಂಟಿ. ಸಂಘಟಿತ ಗ್ಯಾಂಗ್‌ಗಳ ಸದಸ್ಯರಾದ ವ್ಯಕ್ತಿಗಳು ಮತ್ತು ಅವರ ಜೊತೆ ಸುತ್ತಾಡುವವರು ಕೂಡಾ ಇಂತಹ ಕಠಿಣ ಕಾನೂನುಗಳಲ್ಲಿ ಸಿಲುಕುವ ಸಾಧ್ಯತೆ ಇದೆ. ಎಲ್ಲರೂ ಜಾಗರೂಕರಾಗಿರಬೇಕು” ಎಂದು ಎಚ್ಚರಿಕೆ ನೀಡಿದ್ದಾರೆ.