ನೂತನ ಕಮಿಷನರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮಂಗಳೂರು ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಹಂಪನಕಟ್ಟೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ.
ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು (ಮಾ.4): ನೂತನ ಕಮಿಷನರ್ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಮಂಗಳೂರು ನಗರದ ಸಂಚಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಮುಂದಾಗಿದ್ದು, ಅದರ ಮೊದಲ ಹಂತವಾಗಿ ನಗರದ ಅತೀ ವಾಹನ ದಟ್ಟಣೆ ಇರುವ ಹಂಪನಕಟ್ಟೆ ವೃತ್ತದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ. ಸದ್ಯ ಈ ಪ್ರಾಯೋಗಿಕ ಬದಲಾವಣೆ ಜಾರಿಗೆ ಬರಲಿದ್ದು, ಸಾರ್ವಜನಿಕರು ನಿಯಮ ಪಾಲಿಸಲು ಮಂಗಳೂರು ಕಮಿಷನರ್ ಕುಲದೀಪ್ ಜೈನ್ ಮನವಿ ಮಾಡಿದ್ದಾರೆ. ಮಂಗಳೂರು ನಗರದ ಹಂಪನಕಟ್ಟ ಜಂಕ್ಷನ್ ನಗರದ ಪ್ರಮುಖ ಜಂಕ್ಷನ್ ಆಗಿದ್ದು, ಈ ಜಂಕ್ಷನ್ ಅತೀ ವಾಹನ ದಟ್ಟಣೆ ಹಾಗೂ ಹೆಚ್ಚು ಪಾದಚಾರಿಗಳ ಚಲನೆಯಿಂದ ಕೂಡಿದೆ. ಈ ಜಂಕ್ಷನ್ ನಲ್ಲಿ ವಾಹನ ದಟ್ಟಣೆಯನ್ನು ಕಡಿಮೆ ಮಾಡಿ ವಾಹನಗಳ ಸುಗಮ ಸಂಚಾರ ಮತ್ತು ಪಾದಚಾರಿಗಳ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗುವಂತೆ ಹಂಪನಕಟ್ಟೆ ಜಂಕ್ಷನ್‌ನ ಮಧ್ಯದಲ್ಲಿ ಬ್ಯಾರಿಕೇಡ್ ಅಳವಡಿಸಿ ಈ ಕೆಳಗಿನಂತೆ ಸಂಚಾರ ಮಾರ್ಗದಲ್ಲಿ ಪ್ರಾಯೋಗಿಕವಾಗಿ ಬದಲಾವಣೆ ಮಾಡಲಾಗಿದೆ.
1) ಕ್ಲಾಕ್ ಟವರ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ಎಲ್ಲಾ ವಾಹನಗಳು ಇನ್ನು ಮುಂದೆ ಹಂಪನಕಟ್ಟ ಸರ್ಕಲ್ ನಲ್ಲಿ ನೇರವಾಗಿ ಮುಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಸಿ, ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ವಾಪಾಸು ಹಂಪನಕಟ್ಟ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನಿರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಸಂಚರಿಸಬಹುದಾಗಿದೆ.
2) ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಯಿಂದ ನವಭಾರತ್ ಸರ್ಕಲ್ ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಸರ್ಕಲ್‌ನಲ್ಲಿ ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಕ್ಲಾಕ್ ಟವರ್ ಕಡೆಗೆ ಚಲಿಸಿ, ಕ್ಲಾಕ್ ಟವರ್, ಜಂಕ್ಷನ್‌ನಲ್ಲಿ U ಟರ್ನ್ ತೆಗೆದು ಹಂಪನಕಟ್ಟೆ ಜಂಕ್ಷನ್‌ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ನವಭಾರತ್ ಸರ್ಕಲ್ ಕಡೆಗೆ ಸಂಚರಿಸಬಹುದಾಗಿದೆ.
3) ನವಭಾರತ್ ಸರ್ಕಲ್ ಕಡೆಯಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸುವ ಎಲ್ಲಾ ವಾಹನಗಳು ಪಂಜೆ ಮಂಗೇಶ್ವರ ರಾವ್ ರಸ್ತೆಯ (ಪಿ.ಎಂ.ರಾವ್) ಮೂಲಕ ಸಂಚರಿಸಿ, ಗಣಪತಿ ಹೈಸ್ಕೂಲ್ ರಸ್ತೆ (ಜಿಹೆಚ್‌ಎಸ್) ಮೂಲಕ ಕೃಷ್ಣಭವನಕಟ್ಟೆ ಜಂಕ್ಷನ್(ಕೆ.ಬಿ.ಕಟ್ಟೆ) ತಲುಪಿ, ಅಲ್ಲಿಂದ ಕ್ಲಾಕ್ ಟವರ್ ಕಡೆಗೆ ಸಂಚರಿಸಬಹುದಾಗಿದೆ. ಹಾಗೆಯೇ ನವಭಾರತ್ ಸರ್ಕಲ್ ಕಡೆಯಿಂದ ಫಳ್ನೀರ್ ರಸ್ತೆ (ಮದರ್ ಥೆರೇಸಾ ರಸ್ತೆ) ಕಡೆಗೆ ಹೋಗುವ ವಾಹನಗಳು ಹಂಪನಕಟ್ಟ ಜಂಕ್ಷನ್‌ನಲ್ಲಿ ಎಡ ತಿರುವು (ಫ್ರೀ ಲೆಫ್ಟ್) ಪಡೆದು ಮೂಲ್ಕಿ ಸುಂದರ್‌ರಾಮ್ ಶೆಟ್ಟಿ ರಸ್ತೆಯಲ್ಲಿ ಚಲಿಸಿ ಜೋಸ್ ಅಲುಕಾಸ್ ಎದುರು U ಟರ್ನ್ ಪಡೆದು ಹಂಪನಕಟ್ಟ ಜಂಕ್ಷನ್ ಗೆ ಬಂದು ಎಡಕ್ಕೆ ತಿರುಗಿ (ಫ್ರೀ ಲೆಫ್ಟ್) ಫಳ್ನೀರ್ (ಮದರ್ ಥೆರೇಸಾ ರಸ್ತೆ) ಕಡೆಗೆ ಹಾಗೂ ನೇರವಾಗಿ ಕ್ಲಾಕ್‌ಟವ ಕಡೆಗೆ ಸಂಚರಿಸಬಹುದಾಗಿದೆ.
Mangaluru: ಲಂಚ ಸ್ವೀಕರಿಸುವಾಗ ಟ್ರ್ಯಾಪ್: ಗ್ರಾಮ ಕರಣಿಕನಿಗೆ ಜೈಲು ಶಿಕ್ಷೆ!
4) ಹಂಪನಕಟ್ಟೆ ಜಂಕ್ಷನ್‌ನಲ್ಲಿ ಪಾದಚಾರಿಗಳ ಸುರಕ್ಷಿತಾ ಸಂಚಾರಕ್ಕೆ ಪಾದಚಾರಿಗಳ ಮಾರ್ಗ (Zebra Cross)ಅನ್ನು ಗುರುತಿಸಿದ್ದು, ಪಾದಚಾರಿಗಳು ಕಡ್ಡಾಯವಾಗಿ ಪಾದಚಾರಿಗಳ ಮಾರ್ಗಗಳನ್ನು ಉಪಯೋಗಿಸುವುದು.
ಮಂಗಳೂರು: ಉಳ್ಳಾಲದಲ್ಲಿ ಯುವಕನಿಗೆ ಚೂರಿ ಇರಿದು ಕೊಲೆಗೆ ಯತ್ನ
ಸಾರ್ವಜನಿಕರಿಗೆ ವಿಶೇಷ ಸೂಚನೆ:
ಸ್ಟೇಟ್‌ಬ್ಯಾಂಕ್ ಬಸ್ ನಿಲ್ದಾಣ ಹಾಗೂ ನಗರ ಸರ್ವಿಸ್ ಬಸ್ ನಿಲ್ದಾಣದಿಂದ ಹೊರಡುವ ಬಸ್ಸುಗಳಿಗೆ ಕೆ.ಜಿ ಕಟ್ಟೆ ಬಸ್ಸು ನಿಲ್ದಾಣದ ನಂತರ ಜೋಸ್ ಅಲುಕಾಸ್ ಎದುರಿನ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸುಗಳನ್ನು ಹತ್ತಲು ಅನುವು ಮಾಡಲಾಗಿದ್ದು, ಸಾರ್ವಜನಿಕರು ಯಾವುದೇ ಕಾರಣಕ್ಕೂ ಈ ಬಸ್ಸು ನಿಲ್ದಾಣಗಳನ್ನು ಹೊರತುಪಡಿಸಿ ಹಂಪನಕಟ್ಟೆಯ ಬಳಿ ಬಸ್ಸನ್ನು ಹತ್ತಲು ನಿಲ್ಲದೇ ಕೆ.ಜಿ ಕಟ್ಟೆ ಅಥವಾ ಜೋಸ್ ಅಲುಕಾಸ್ ಬಸ್ ನಿಲ್ದಾಣಗಳನ್ನೇ ಉಪಯೋಗಿಸುವುದು.