ಕರಾವಳಿಯ ಕನಸಿನ ರೈಲು ವಂದೇ ಭಾರತ್ ಸಂಚಾರ ಜೂನ್‌ನಿಂದ ಅಧಿಕೃತ ಆರಂಭ: ಸಚಿವ ವಿ ಸೋಮಣ್ಣ

Published : May 24, 2026, 10:05 AM IST
Vande Bharat Express

ಸಾರಾಂಶ

ಮಂಗಳೂರು-ಬೆಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಜೂನ್‌ನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ. ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗದ ವಿದ್ಯುದೀಕರಣ ಪೂರ್ಣಗೊಂಡಿದ್ದು, ಇದು ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೆ, ಕಾರವಾರದವರೆಗೆ ರೈಲು ವಿಸ್ತರಣೆ, ಶಿವಮೊಗ್ಗ-ಮಂಗಳೂರು ಹೊಸ ಮಾರ್ಗದ ಬಗ್ಗೆಯೂ ಪ್ರಸ್ತಾಪಿಸಲಾಗಿದೆ.

ಮಂಗಳೂರು: ಕರಾವಳಿ ಮತ್ತು ರಾಜಧಾನಿ ಬೆಂಗಳೂರು ನಿವಾಸಿಗಳ ಬಹುದಿನಗಳ ಕನಸಾಗಿದ್ದ ಮಂಗಳೂರು-ಬೆಂಗಳೂರು ನಡುವಿನ ಬಹುನಿರೀಕ್ಷಿತ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವು ಮುಂಬರುವ ಜೂನ್‌ ತಿಂಗಳಿನಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಹೊಸ ರೈಲು ಸಂಚಾರಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಹೇಳಿದರು.

ಮಂಗಳೂರು ಜಂಕ್ಷನ್‌ ರೈಲು ನಿಲ್ದಾಣಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಬೆಂಗಳೂರು-ಕಾರವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಬೇಡಿಕೆ ಬಗ್ಗೆ ಮಾತನಾಡಿದ ಸಚಿವರು, ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಸಂಸದರು ಇದ್ದಾರೆ. ಅವರ ಬೇಡಿಕೆಯನ್ನು ಪರಿಶೀಲಿಸಬೇಕಾಗುತ್ತದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಸಕಲೇಶಪುರ-ಕುಕ್ಕೆ ಸುಬ್ರಹ್ಮಣ್ಯ ಮಾರ್ಗವರೆಗೆ 55 ಕಿ.ಮೀ. ದೂರ ವಿದ್ಯುದೀಕರಣ ಕಾಮಗಾರಿ ಮುಕ್ತಾಯಗೊಂಡಿದೆ. ಹೀಗಾಗಿ ಬೆಂಗಳೂರು-ಮಂಗಳೂರು ನಡುವೆ ಪೂರ್ತಿಯಾಗಿ ವಿದ್ಯುದೀಕರಣವಾಗಿದ್ದು, ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶಗಳು ತೆರೆದುಕೊಂಡಿವೆ ಎಂದರು.

ಶಿವಮೊಗ್ಗ-ಶೃಂಗೇರಿ-ಮಂಗಳೂರು ಹೊಸ ರೈಲು ಮಾರ್ಗ ರಚನೆ ಬಗ್ಗೆ ಸಮೀಕ್ಷೆ ಪೂರ್ಣಗೊಂಡಿದ್ದು, ಟೆಂಡರ್‌ ಬಾಕಿ ಇದೆ. ಪ್ರಾಸ್ತಾವಿಕ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ 332 ಕಿ.ಮೀ. ಇರಲಿದ್ದು, 3,300 ಕೋಟಿ ರು. ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದ ಎಫ್‌ಎಲ್‌ಸಿ(ಫೈನಲ್‌ ಲೊಕೇಷನ್‌ ಸರ್ವೆ) ನಡೆದು ಅನುಮೋದನೆಗೊಂಡಿದ್ದು, ಶೀಘ್ರವೇ ಟೆಂಡರ್‌ ಕರೆಯಲಾಗುವುದು ಎಂದರು.

ಕರಾವಳಿ ಸಂಸದರ ಬೇಡಿಕೆಗೆ ಸಕಾರಾತ್ಮಕ ಸ್ಪಂದನೆ

ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಪ್ರಮುಖರಿಂದ ಕೇಳಿಬಂದಿರುವ 'ಬೆಂಗಳೂರು-ಕಾರವಾರ ವಂದೇ ಭಾರತ್‌ ಎಕ್ಸ್‌ಪ್ರೆಸ್‌' ರೈಲಿನ ಬೇಡಿಕೆಯ ಕುರಿತು ಪ್ರತಿಕ್ರಿಯಿಸಿದ ಸಚಿವರು, "ಕರಾವಳಿ ಭಾಗದ ಮೂರೂ ಜಿಲ್ಲೆಗಳಲ್ಲಿ ಭಾರತೀಯ ಜನತಾ ಪಕ್ಷದ (BJP) ಸಂಸದರಿದ್ದಾರೆ. ಈ ಭಾಗದ ಜನಪ್ರತಿನಿಧಿಗಳು ಕರಾವಳಿಯ ರೈಲ್ವೆ ಸಂಪರ್ಕದ ಅಭಿವೃದ್ಧಿಗೆ ಸತತವಾಗಿ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಕಾರವಾರದವರೆಗಿನ ವಂದೇ ಭಾರತ್ ರೈಲು ವಿಸ್ತರಣೆಯ ಬೇಡಿಕೆಯನ್ನು ಸಚಿವಾಲಯವು ಗಂಭೀರವಾಗಿ ಪರಿಶೀಲಿಸಲಿದೆ" ಎಂದು ಭರವಸೆ ನೀಡಿದರು.

ರೈಲ್ವೆ ವಿದ್ಯುದೀಕರಣ ಕಾರ್ಯ ಪೂರ್ಣ: ಹೆಚ್ಚುವರಿ ರೈಲುಗಳಿಗೆ ಹಾದಿ ಸುಗಮ

ಬೆಂಗಳೂರು ಮತ್ತು ಮಂಗಳೂರು ನಡುವಿನ ರೈಲು ಪ್ರಯಾಣದ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಲಾಗಿದೆ. ಈ ಕುರಿತು ವಿವರಣೆ ನೀಡಿದ ಸಚಿವರು ಸಕಲೇಶಪುರದಿಂದ ಕುಕ್ಕೆ ಸುಬ್ರಹ್ಮಣ್ಯ ಮಾರ್ಗದವರೆಗಿನ ಅತ್ಯಂತ ಕಠಿಣವಾದ 55 ಕಿಲೋಮೀಟರ್‌ ವ್ಯಾಪ್ತಿಯ ರೈಲ್ವೆ ಹಳಿಗಳ ಘಾಟ್‌ ಸೆಕ್ಷನ್ ವಿದ್ಯುದೀಕರಣ ಕಾಮಗಾರಿ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಇದರೊಂದಿಗೆ ಬೆಂಗಳೂರು ಮತ್ತು ಮಂಗಳೂರು ನಡುವಿನ ಇಡೀ ರೈಲು ಮಾರ್ಗವು ಈಗ ಸಂಪೂರ್ಣವಾಗಿ ವಿದ್ಯುದೀಕರಣಗೊಂಡಂತಾಗಿದೆ. ಈ ತಾಂತ್ರಿಕ ಸುಧಾರಣೆಯಿಂದಾಗಿ ಈ ಮಾರ್ಗದಲ್ಲಿ ಪರಿಸರಸ್ನೇಹಿ ಹಾಗೂ ವೇಗದ ರೈಲುಗಳ ಸಂಚಾರ ಸಾಧ್ಯವಾಗಲಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಹೆಚ್ಚುವರಿ ರೈಲುಗಳನ್ನು ಓಡಿಸಲು ಹಾದಿ ಸುಗಮವಾಗಿದೆ.

PREV
Read more Articles on
click me!

Recommended Stories

Cockroach Janata Part: ಕಾಕ್ರೋಚ್ ಭಯ ಕಾಂಗ್ರೆಸ್‌ಗೆ ಹೊರತು ಬಿಜೆಪಿಗಲ್ಲ; ಪ್ರಲ್ಹಾದ್ ಜೋಶಿ ಕೊಟ್ಟ ಉತ್ತರ ಕೇಳಿ ಶಾಕ್!
ಮುಳ್ಳಯ್ಯನಗಿರಿಯಲ್ಲಿ ಸೃಷ್ಟಿಯಾಯ್ತು ‘ಮಿನಿ ಹಿಮಾಲಯ’: ಮುಂಗಾರಿಗೂ ಮುನ್ನವೇ ಮಂಜಿನ ನಗರಿಯಾದ ಕಾಫಿನಾಡು!