
ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ಶಾಶ್ವತವಾಗಿ ತೆರವುಗೊಳಿಸುವಂತೆ ಆಗ್ರಹಿಸಿ, ಸಮಾನ ಮನಸ್ಕ ಸಂಘಟನೆಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳನ್ನೊಳಗೊಂಡ ಕ್ರಿಯಾ ಸಮಿತಿಯು ಮಂಗಳವಾರ ಬೆಳಿಗ್ಗೆ 9.30ರಿಂದ ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲಿ 24 ಗಂಟೆಗಳ ಬೃಹತ್ ಪ್ರತಿಭಟನೆಯನ್ನು ಆರಂಭಿಸಿದೆ. ಶಾಶ್ವತ ಟೋಲ್ ಪ್ಲಾಜಾ ಮೂಲಸೌಕರ್ಯಗಳೇ ಇಲ್ಲದಿದ್ದರೂ, ಕಳೆದ 23 ವರ್ಷಗಳಿಂದ ಇಲ್ಲಿ ವಾಹನ ಸವಾರರಿಂದ ನಿರಂತರವಾಗಿ ಸುಂಕ ವಸೂಲಿ ಮಾಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ, ಬ್ರಹ್ಮರಕೂಟ್ಲು ಟೋಲ್ ಗೇಟ್ ಸಂಪೂರ್ಣ ಅನಗತ್ಯವಾಗಿದೆ ಎಂದು ಕಿಡಿಕಾರಿದರು. ಟೋಲ್ ಸಂಗ್ರಹಕ್ಕೆ ನಿಗದಿಪಡಿಸಲಾಗಿದ್ದ ಅವಧಿ ಮುಗಿದು ಹಲವು ವರ್ಷಗಳೇ ಕಳೆದಿದ್ದರೂ, ಸುಂಕ ವಸೂಲಿ ಮುಂದುವರಿಸಲಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಈ ರೀತಿ ಕಿರುಕುಳ ನೀಡುವ ಅನ್ಯಾಯವನ್ನು ತಕ್ಷಣ ನಿಲ್ಲಿಸಬೇಕು ಎಂದು ಅವರು ಒತ್ತಾಯಿಸಿದರು.
ಈ ಟೋಲ್ ಗೇಟ್ ಕೇವಲ ಬಂಟ್ವಾಳ ತಾಲೂಕಿಗೆ ಮಾತ್ರ ಸೀಮಿತವಾದ ಸಮಸ್ಯೆಯಲ್ಲ ಎಂದ ರಮಾನಾಥ ರೈ, ಸುತ್ತಮುತ್ತಲಿನ ತಾಲೂಕುಗಳ ಪ್ರಯಾಣಿಕರು ಎದುರಿಸುತ್ತಿರುವ ಸಂಕಷ್ಟವನ್ನು ವಿವರಿಸಿದರು. ಬೆಳ್ತಂಗಡಿ ಭಾಗದಿಂದ ಬರುವ ನಾಗರಿಕರು ಪಣಪಿಲ ಮತ್ತು ಬ್ರಹ್ಮರಕೂಟ್ಲು ಹೀಗೆ ಎರಡೆರಡು ಕಡೆಗಳಲ್ಲಿ ಟೋಲ್ ಪಾವತಿಸುವ ಅನಿವಾರ್ಯತೆ ಎದುರಾಗಿದೆ. ಅದೇ ರೀತಿ ಪುತ್ತೂರು, ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಕಡೆಯಿಂದ ಸಂಚರಿಸುವ ವಾಹನ ಸವಾರರು ಸುಂಕ ಕಟ್ಟಬೇಕಾಗಿದೆ. ಟೋಲ್ ಗೇಟ್‌ಗಳು ಕೇವಲ ಹಣ ವಸೂಲಿ ಕೇಂದ್ರಗಳಾಗಬಾರದು. ಈ ಹೆದ್ದಾರಿಯಲ್ಲಿ ಸಂಚರಿಸುವ ಪ್ರತಿಯೊಬ್ಬ ನಾಗರಿಕನಿಗೂ ನೋವು ತಂದಿರುವ ಬ್ರಹ್ಮರಕೂಟ್ಲು ಟೋಲ್ ಗೇಟ್ ಅನ್ನು ತೆರವುಗೊಳಿಸುವುದು ಅತ್ಯಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ಟೋಲ್ ಗೇಟ್ ತೆರವುಗೊಳಿಸುವ ಬೇಡಿಕೆಯ ಕುರಿತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳೊಂದಿಗೆ ಚರ್ಚಿಸಿದಾಗ, ಅವರು ಟೋಲ್ ತೆರವುಗೊಳಿಸಲು ಸಾಧ್ಯವಿಲ್ಲ ಎಂದು ಮೊಂಡುವಾದ ಮಾಡಿದ್ದಾರೆ ಎಂದು ರೈ ಆರೋಪಿಸಿದರು. ನಾವು ಈ ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿರುವಂತೆಯೇ, ಹೋರಾಟಗಾರರಿಗೆ ಕಿರುಕುಳ ನೀಡುವ ಉದ್ದೇಶದಿಂದ ಎನ್‌ಎಚ್‌ಎಐ ಅಧಿಕಾರಿಗಳು ಸೋಮವಾರ ನೋಟಿಸ್ ಜಾರಿ ಮಾಡಿದ್ದಾರೆ. ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. ಈ ಟೋಲ್ ಗೇಟ್ ತೆರವುಗೊಳಿಸುವುದೇ ನಮ್ಮ ಇಂದಿನ ಹೋರಾಟದ ಏಕೈಕ ಗುರಿ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ಸಾರ್ವಜನಿಕರ ನ್ಯಾಯಯುತ ಬೇಡಿಕೆಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದ ಅವರು, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರಿಗೂ ಮನವಿ ಮಾಡಿದರು. ಸಾಧ್ಯವಾದಷ್ಟು ಬೇಗ ಈ ಟೋಲ್ ಗೇಟ್ ತೆರವುಗೊಳಿಸುವುದಾಗಿ ಸಂಸದರು ಈ ಹಿಂದೆ ಭರವಸೆ ನೀಡಿದ್ದರು. ಅವರು ತಮ್ಮ ಪ್ರಯತ್ನವನ್ನು ಮುಂದುವರಿಸಿ ಜನರಿಗೆ ಮುಕ್ತಿ ಕೊಡಿಸಬೇಕು. ಈ ವಿಚಾರದಲ್ಲಿ ನಮಗೆ ಯಾವುದೇ ರಾಜಕೀಯ ಮನ್ನಣೆಯ ಅಪೇಕ್ಷೆಯಿಲ್ಲ. ಸಾರ್ವಜನಿಕರಿಗೆ ಆಗುತ್ತಿರುವ ಅನಾನುಕೂಲ ತಪ್ಪಿ ಟೋಲ್ ಗೇಟ್ ತೆರವಾದರೆ ಅಷ್ಟೇ ಸಾಕು ಎಂದು ರಮಾನಾಥ ರೈ ಹೇಳಿದರು. ಪ್ರತಿಭಟನೆಯಲ್ಲಿ ಕರ್ನಾಟಕ ಗೋಡಂಬಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್. ಗಟ್ಟಿ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು ಹಾಗೂ ನೂರಾರು ಸಾರ್ವಜನಿಕರು ಪಾಲ್ಗೊಂಡಿದ್ದರು.