
ಮಂಗಳೂರು: ಮಾಂಡ್ ಸೊಭಾಣ್ ಸಂಸ್ಥೆಯ ರೂಬಿ ಜುಬಿಲಿ (40ನೇ ವರ್ಷದ ಸಂಭ್ರಮ) ಹಾಗೂ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನದ ಅಂಗವಾಗಿ ಆಯೋಜಿಸಲಾಗಿರುವ ‘ಸುದೀರ್ಘ ಬಹು-ಗಾಯಕರ ಗಾಯನ ಮಾರಾಥಾನ್’ ಗಿನ್ನೆಸ್ ವಿಶ್ವ ದಾಖಲೆಯ ಪ್ರಯತ್ನ ಯಶಸ್ವಿಯಾಗಿ 35 ಗಂಟೆಗಳ ನಿರಂತರ ಗಾಯನವನ್ನು ಪೂರ್ಣಗೊಳಿಸಿದೆ.
ನವೆಂಬರ್ 15 ರವರೆಗೆ ಒಟ್ಟು 12 ದಿನ, 12 ಗಂಟೆ ಹಾಗೂ 12 ನಿಮಿಷಗಳ ಕಾಲ ನಿರಂತರವಾಗಿ ಕೊಂಕಣಿ ಹಾಡುಗಳನ್ನು ಪ್ರಸ್ತುತಪಡಿಸುವ ಗುರಿಯನ್ನು ಈ ಬೃಹತ್ ಕಾರ್ಯಕ್ರಮ ಹೊಂದಿದೆ. ಸಾಧನೆಯ ಎರಡನೇ ದಿನದ ವೇಳೆಗೆ ಕರಾವಳಿ ಕರ್ನಾಟಕ, ಉತ್ತರ ಕನ್ನಡ ಮತ್ತು ಗೋವಾ ಸೇರಿದಂತೆ ವಿವಿಧ ಪ್ರದೇಶಗಳ 35 ಸಂಗೀತ ತಂಡಗಳು ವೇದಿಕೆಯಲ್ಲಿ ತಮ್ಮ ಗಾಯನ ಪ್ರಸ್ತುತಿ ನೀಡಿವೆ.
ಗಿನ್ನೆಸ್ ಸಂಸ್ಥೆಯ ಕಟ್ಟುನಿಟ್ಟಿನ ನಿಯಮಾವಳಿಗಳಂತೆ 300 ಗಂಟೆಗಳ ಈ ಸುದೀರ್ಘ ಪಯಣದಲ್ಲಿ ಯಾವುದೇ ಹಾಡನ್ನು ಅಥವಾ ಗಾಯಕರನ್ನು ಮರುಕಳಿಸುವಂತಿಲ್ಲ. ಮಂಗಳೂರಿನ ಟೌನ್ ಹಾಲ್‌ನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಕೊಂಕಣ ಪ್ರದೇಶದಾದ್ಯಂತ ಅಪಾರ ಸಂಖ್ಯೆಯ ಸಾರ್ವಜನಿಕರು ಆಗಮಿಸಿ ಕಲಾವಿದರನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸಾಹಿತ್ಯ, ಕಲೆ, ಸಂಸ್ಕೃತಿ ಹಾಗೂ ವಿವಿಧ ರಂಗಗಳ ಪ್ರಮುಖ ಗಣ್ಯರು ಸ್ಥಳಕ್ಕೆ ಭೇಟಿ ನೀಡಿ ಶುಭ ಹಾರೈಸಿದ್ದಾರೆ. ಕೊಂಕಣಿ ಭಾಷಿಕ ಸಮುದಾಯಗಳ ಒಕ್ಕೂಟದ ಈ ಗಾಯನ ಕಾವ್ಯವು ಹೊಸ ವಿಶ್ವ ದಾಖಲೆಯತ್ತ ಯಶಸ್ವಿಯಾಗಿ ಸಾಗುತ್ತಿದೆ.
ಕೊಂಕಣಿ ಸಾಂಸ್ಕೃತಿಕ ಸಂಘಟನೆ ಮಾಂಡ್ ಸೊಭಾಣ್‌ನ 40ನೇ ವರ್ಷದ ಸಂಭ್ರಮದ ಅಂಗವಾಗಿ ಆಯೋಜಿಸಲಾಗಿರುವ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಮಂಗಳವಾರ ನಸುಕಿನ ಜಾವ 5 ಗಂಟೆಗೆ ಮಂಗಳೂರಿನ ಪುರಭವನದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು.ನವೆಂಬರ್ 3ರಿಂದ 15ರವರೆಗೆ ನಡೆಯಲಿರುವ 13 ದಿನಗಳ ಈ ಅಂತಾರಾಷ್ಟ್ರೀಯ ಸಮ್ಮೇಳನ ಜಗತ್ತಿನಾದ್ಯಂತ ಇರುವ ಕೊಂಕಣಿ ಭಾಷಿಕರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಉದ್ದೇಶ ಹೊಂದಿದೆ.
ಗಿನ್ನೆಸ್ ದಾಖಲೆ ಪ್ರಯತ್ನದ ಈ ಮಹಾಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್, ಕೊಂಕಣಿ ಭಾಷೆಯಲ್ಲಿ ಉಪಭಾಷೆಗಳು ಬದಲಾಗಬಹುದು, ಆದರೆ ಕೊಂಕಣಿ ಜನರ ಹೃದಯ ಮತ್ತು ಭಾಷೆಯ ಭಾವನೆ ಒಂದೇ ಆಗಿದೆ ಎಂದರು.
ಮಂಗಳೂರಿನಲ್ಲಿ ನಡೆಯುತ್ತಿರುವ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಆಗಮಿಸಿದ್ದ ಗೋವಾ ಮುಖ್ಯಮಂತ್ರಿ ಡಾ.ಪ್ರಮೋದ್ ಸಾವಂತ್ ಮಂಗಳವಾರ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.
ಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರೊಂತರಿ- ಸೊಂಸಾರ್ ಸೊರಾಸೊರಿ’ (ಜಗತ್ತಿನ ಕೊನೆಯವರೆಗೂ ನಿರಂತರ ಕೊಂಕಣಿ) ಎಂಬ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯಲಿದೆ. ಸತತ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದ್ದು, 300 ಗಾಯನ ತಂಡಗಳು ಸರದಿಯಂತೆ ಭಾಗವಹಿಸಲಿವೆ. ಜಗತ್ತಿನ ವಿವಿಧ ಭಾಗಗಳಿಂದ 6,700ಕ್ಕೂ ಅಧಿಕ ಗಾಯಕರು ಪಾಲ್ಗೊಳ್ಳಲಿದ್ದು, ಗೋವಾದ 53 ತಂಡಗಳು ಇದರಲ್ಲಿ ಸೇರಿವೆ. ವಿವಿಧ ಕೊಂಕಣಿ ಉಪಭಾಷೆಗಳು, ಸಮುದಾಯಗಳು ಮತ್ತು ಸಂಗೀತ ಪರಂಪರೆಗಳನ್ನು ಪ್ರತಿನಿಧಿಸುವ 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ.