ಕರ್ಫ್ಯೂ ಸಡಿಲಿಕೆಯಿಂದ ಸಹಜ ಸ್ಥಿತಿಗೆ ಜನಜೀವನ, ಸೆಕ್ಷನ್‌ 144 ಮುಂದುವರಿಕೆ

By Kannadaprabha NewsFirst Published Dec 23, 2019, 9:41 AM IST
Highlights

ಮಂಗಳೂರು 3 ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಿದೆ. ಭಾನುವಾರ ಹಗಲು ಹೊತ್ತಿನಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ಎಂದಿನಂತೆ ಜನಜೀವನ ಸುಗಮವಾಗಿ ಸಾಗಿತ್ತು. ಯಾವುದೇ ಅಹಿತಕರ ಘಟನೆಗೆ ತುಳುನಾಡಿನ ಜನತೆ ಆಸ್ಪದ ನೀಡದೆ ಶಾಂತಿ ಕಾಪಾಡಿದ್ದಾರೆ.

ಮಂಗಳೂರು(ಡಿ.23): ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಿಂಸಾಚಾರ ನಡೆದು ಕರ್ಫ್ಯೂ ಜಾರಿಯಾಗಿದ್ದ ಮಂಗಳೂರು 3 ದಿನಗಳ ಬಳಿಕ ಸಹಜ ಸ್ಥಿತಿಗೆ ಮರಳಿದೆ. ಭಾನುವಾರ ಹಗಲು ಹೊತ್ತಿನಲ್ಲಿ ಕರ್ಫ್ಯೂ ಸಡಿಲಿಕೆ ಮಾಡಿದ್ದರಿಂದ ಎಂದಿನಂತೆ ಜನಜೀವನ ಸುಗಮವಾಗಿ ಸಾಗಿತ್ತು. ಯಾವುದೇ ಅಹಿತಕರ ಘಟನೆಗೆ ತುಳುನಾಡಿನ ಜನತೆ ಆಸ್ಪದ ನೀಡದೆ ಶಾಂತಿ ಕಾಪಾಡಿದ್ದಾರೆ.

ಮುಖ್ಯಮಂತ್ರಿ ಯಡಿಯೂರಪ್ಪ ಆದೇಶದ ಮೇರೆಗೆ ಭಾನುವಾರ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕಫä್ರ್ಯ ಸಡಿಲಿಕೆ ಮಾಡಲಾಗಿತ್ತು. ನಗರದ ಬಹುತೇಕ ಅಂಗಡಿ, ಮುಂಗಟ್ಟು, ಮಾರುಕಟ್ಟೆಗಳಲ್ಲಿ ವ್ಯಾಪಾರ ವಹಿವಾಟು ಎಂದಿನಂತೆ ನಡೆಯಿತು. ಬಸ್ಸು, ರಿಕ್ಷಾ ಸೇರಿದಂತೆ ಸಾರ್ವಜನಿಕ ಸಾರಿಗೆಗಳು ರಸ್ತೆಗಿಳಿದವು. ಭಾನುವಾರವಾಗಿದ್ದರಿಂದ ಸಹಜವಾಗಿ ಜನಸಂದಣಿ, ಸಂಚಾರ ಕೊಂಚ ಕ್ಷೀಣಿಸಿತ್ತು.

ರೋಡಿಗಿಳಿದ ಬಸ್ಸುಗಳು:

ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಭಾನುವಾರ ಬೆಳಗ್ಗಿನಿಂದಲೇ ಸಂಚಾರ ಆರಂಭಿಸಿದ್ದವು. ನಗರದಲ್ಲಿ ಬಹುತೇಕ ಹೊಟೇಲ್‌ಗಳು ತೆರೆದಿದ್ದವು. ಕಳೆದ ಎರಡು ದಿನಗಳಿಂದ ನಿರ್ಜನವಾಗಿದ್ದ ರಸ್ತೆಗಳಲ್ಲಿ ಮತ್ತೆ ಜನರು ನಿರ್ಭೀತಿಯಿಂದ ಓಡಾಡುವಂತಾಗಿತ್ತು. ಅಹಿತಕರ ಘಟನೆ ನಡೆದಿದ್ದ ಬಂದರು ಪ್ರದೇಶದಲ್ಲೂ ಜನಜೀವನ ಸಹಜವಾಗಿತ್ತು. ಅಲ್ಲಿನ ಸಗಟು ವಹಿವಾಟು ಮತ್ತೆ ಆರಂಭವಾಗಿದೆ. ಕಫä್ರ್ಯ ಸಮಯದಲ್ಲಿ ಮುಚ್ಚಲ್ಪಟ್ಟಿದ್ದ ಪೆಟ್ರೋಲ್‌ ಬಂಕ್‌ಗಳಿಗೆ ಭಾನುವಾರ ಉತ್ತಮ ವ್ಯಾಪಾರವಾಗಿತ್ತು.

ತೆರೆದ ಕೇಂದ್ರ ಮಾರುಕಟ್ಟೆ:

ಗುರುವಾರ ಮಧ್ಯಾಹ್ನ ಮುಚ್ಚಲ್ಪಟ್ಟಿದ್ದ ನಗರದ ಕೇಂದ್ರ ಮಾರುಕಟ್ಟೆಮತ್ತೆ ಕಾರ್ಯಾರಂಭ ಮಾಡಿದ್ದು ಭಾನುವಾರ ಬೆಳಗ್ಗೆಯೇ. ಅಲ್ಲಿನ ವ್ಯಾಪಾರಿಗಳು ಮೂರು ದಿನಗಳ ಹಿಂದೆ ತರಕಾರಿ, ಹಣ್ಣುಗಳನ್ನು ಇದ್ದ ಸ್ಥಿತಿಯಲ್ಲೇ ಇಟ್ಟು ಅಂಗಡಿ ಮುಚ್ಚುವಂತಾಗಿತ್ತು. ಭಾನುವಾರ ಬೆಳಗ್ಗೆ ಹೋಗಿ ನೋಡಿದರೆ ಬಹುತೇಕ ತರಕಾರಿ ಹಣ್ಣುಗಳು ಕೊಳೆತು ಹೋಗಿದ್ದವು. ಅವುಗಳನ್ನು ವಿಲೇವಾರಿ ಮಾಡಲು ಕಷ್ಟಪಡುತ್ತಿದ್ದುದು ಕಂಡುಬಂತು. ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಕೇಂದ್ರ ಮಾರುಕಟ್ಟೆಯಲ್ಲಿ ಖರೀದಿ ನಿರತರಾಗಿದ್ದರು.

ಸಂಜೆ 6ರಿಂದ ಕಫ್ರ್ಯೂ:

ಭಾನುವಾರ ಸಂಜೆ 6 ಗಂಟೆಯಿಂದ ಮತ್ತೆ ಕಫ್ರ್ಯೂ ಮುಂದುವರಿದಿದ್ದರಿಂದ ನಗರದಲ್ಲಿ ಜನರ ಓಡಾಟ ನಿಧಾನವಾಗಿ ಕಡಿಮೆಯಾಗಲಾರಂಭಿಸಿತ್ತು. ಒಂದೊಂದಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಲ್ಪಟ್ಟಿದ್ದವು. ರಾತ್ರಿ 8 ಗಂಟೆಯ ಬಳಿಕ ನಗರ ಬಹುತೇಕ ಸ್ತಬ್ಧವಾಗಿತ್ತು. ವಾಹನಗಳ ಓಡಾಟವೂ ವಿರಳವಾಗಲಾರಂಭಿಸಿತ್ತು. ಹಗಲಿಡೀ ಓಡಾಡಿದ ಬಸ್‌ಗಳ ಪೈಕಿ ಬಹುತೇಕ ಬಸ್‌ಗಳ ಓಡಾಟ ಸಂಜೆ ವೇಳೆಗೆ ಸ್ಥಗಿತಗೊಂಡಿತ್ತು. ದೂರದೂರುಗಳಿಗೆ ತೆರಳುವ ಬಸ್ಸುಗಳು ಮಾತ್ರ ಓಡಾಟ ಮುಂದುವರಿಸಿದ್ದವು.

ಕೋಮು ಗಲಭೆಗಳಲ್ಲಿ ಒಬ್ಬ ಕಾಂಗ್ರೆಸ್‌ ಆರೋಪಿಯನ್ನಾದರೂ ತೋರಿಸಿ: ರೈ ಸವಾಲು

ಡಿ.19ರಂದು ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಪೊಲೀಸ್‌ ಗೋಲಿಬಾರ್‌ನಲ್ಲಿ ಇಬ್ಬರು ಸಾವನ್ನಪ್ಪಿದ್ದರಿಂದ ನಗರದಲ್ಲಿ ಕಫ್ರ್ಯೂ ಹೇರಲಾಗಿತ್ತು. ದಿಢೀರ್‌ ಕಫ್ರ್ಯೂ ಹೇರಿಕೆಯಾದ್ದರಿಂದ ನಗರದ ಜನತೆ ಕಂಗಾಲಾಗಿ ಹೋಗಿದ್ದರು. ದಿನನಿತ್ಯದ ವಸ್ತುಗಳು ಕೂಡ ಸಿಗದೆ ತತ್ತರಿಸಿ ಹೋಗಿದ್ದರು. ದೂರದ ಊರುಗಳಿಂದ ಮಂಗಳೂರಿಗೆ ಆಗಮಿಸಿದ್ದ ಮಂದಿ ಕಫ್ರ್ಯೂ ಬಿಸಿಗೆ ಸಿಲುಕಿದ್ದರು. ಈಗ ಎಲ್ಲವೂ ನಿರಾಳವಾದಂತಾಗಿದೆ.

144 ಸೆಕ್ಷನ್‌ ಮುಂದುವರಿಕೆ

ಮಂಗಳೂರಿನಲ್ಲಿ ಕಫä್ರ್ಯ ಅವಧಿ ಮುಗಿದರೂ ಸೆಕ್ಷನ್‌ 144 ಮುಂದುವರಿಯಲಿದೆ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಶನಿವಾರ ಮಂಗಳೂರಿಗೆ ಆಗಮಿಸಿದ್ದ ವೇಳೆ ಕಫ್ರ್ಯೂ ಸಡಿಲಿಕೆ ಹಾಗೂ ಸೋಮವಾರದಿಂದ 144 ಸೆಕ್ಷನ್‌ ಮುಂದುವರಿಸುವಂತೆ ಪೊಲೀಸ್‌ ಆಯುಕ್ತರಿಗೆ ಸೂಚನೆ ನೀಡಿದ್ದರು. ಅದರಂತೆ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ ಸೋಮವಾರದಿಂದ 144 ಸೆಕ್ಷನ್‌ ಮಾತ್ರ ಮುಂದುವರಿಯಲಿದೆ. ಅಂಗಡಿ ಮುಂಗಟ್ಟುಗಳು ಎಂದಿನಂತೆ ಕಾರ್ಯಾಚರಿಸಲಿವೆ.

ಶಾಲೆ, ಕಾಲೇಜಿಗೆ ರಜೆ ಇಲ್ಲ

ಅಹಿತಕರ ಘಟನೆಗಳಿಂದಾಗಿ ಶುಕ್ರವಾರ, ಶನಿವಾರ ಜಿಲ್ಲೆಯ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಜಿಲ್ಲೆಯಲ್ಲಿ ಮತ್ತೆ ಶಾಂತಿ ನೆಲೆಸಿದ್ದರಿಂದ ಸೋಮವಾರದಿಂದ ಎಂದಿನಂತೆ ಶಾಲೆ, ಕಾಲೇಜುಗಳು ಕಾರ್ಯಾರಂಭಿಸಲಿವೆ. ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು ಕೂಡ ತೆರೆಯಲಿವೆ. ಬಸ್‌ಗಳು ಎಂದಿನಂತೆ ಓಡಾಡಲಿವೆ.

click me!