'ಅಡುಗೆ ಮನೆ ಮಹಾರಾಣಿ' ಈರುಳ್ಳಿ ಬೆಲೆ 20 ದಿನದಲ್ಲಿ ಇಳಿಕೆ; ಹೊಸ ಉಳ್ಳಾಗಡ್ಡಿ ಮಾರುಕಟ್ಟೆಗೆ ಆವಕ!

Published : Sep 14, 2026, 07:50 AM IST
Karnataka Onion Market

ಸಾರಾಂಶ

'ಅಡುಗೆ ಮನೆಯ ಮಹಾರಾಣಿ' ಎಂದು ಕರೆಯಲ್ಪಡುವ ಈರುಳ್ಳಿಯ ಬೆಲೆ ಕೆ.ಜಿ.ಗೆ 60-70 ರೂಪಾಯಿಗಳಿಗೆ ತೀವ್ರವಾಗಿ ಏರಿಕೆಯಾಗಿದ್ದು, ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಅಕಾಲಿಕ ಮಳೆ, ಬೆಳೆ ನಾಶ, ಮತ್ತು ಬೇಡಿಕೆ ಹೆಚ್ಚಳದಿಂದಾಗಿ ಈ ದರ ಏರಿಕೆಯಾಗಿದ್ದು, ಮುಂದಿನ 20 ದಿನಗಳಲ್ಲಿ ಹೊಸ ಈರುಳ್ಳಿ ಮಾರುಕಟ್ಟೆಗೆ ಬರಲಿದೆ.

ವರದಿ-ಬಸವರಾಜ ಸರೂರ

ಹಾವೇರಿ (ಸೆ.14): ‘ಅಡುಗೆ ಮನೆಯ ಮಹಾರಾಣಿ’ ಎಂದೇ ಕರೆಯಲ್ಪಡುವ ಈರುಳ್ಳಿ ಈಗ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಕಳೆದ ಕೆಲವು ವಾರಗಳಿಂದ ಮಾರುಕಟ್ಟೆಯಲ್ಲಿ ಈರುಳ್ಳಿ ದರ ತೀವ್ರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಮಾಸಿಕ ಬಜೆಟ್‌ ಅನ್ನು ಸಂಪೂರ್ಣವಾಗಿ ಏರುಪೇರು ಮಾಡಿದೆ.

ಕೆಲವೇ ತಿಂಗಳುಗಳ ಹಿಂದೆ ಸ್ಥಳೀಯ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ.ಗೆ 20 ರಿಂದ 30 ರುಪಾಯಿ ಇದ್ದ ಈರುಳ್ಳಿ ಬೆಲೆ ಈಗ 60 ರಿಂದ 70 ರುಪಾಯಿ ತಲುಪಿದೆ. ಹೋಟೆಲ್ ಉದ್ಯಮ, ಬೀದಿ ಬದಿಯ ವ್ಯಾಪಾರಿಗಳು ಹಾಗೂ ಗೃಹಿಣಿಯರು ಈ ಹಠಾತ್ ದರ ಏರಿಕೆಯಿಂದ ಕಂಗಾಲಾಗಿದ್ದಾರೆ. ಅಡುಗೆಗೆ ಈರುಳ್ಳಿ ಬಳಸಬೇಕೋ, ಬೇಡವೋ ಎಂಬ ಗೊಂದಲದಲ್ಲಿ ಜನರಿದ್ದಾರೆ.

ಬೆಲೆ ಏರಿಕೆಗೆ ಪ್ರಮುಖ ಕಾರಣಗಳು: 

ಈರುಳ್ಳಿ ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕದ ಕೆಲವು ಭಾಗಗಳು ಮತ್ತು ಮಧ್ಯಪ್ರದೇಶದಲ್ಲಿ ಬಿದ್ದ ಅಕಾಲಿಕ ಮಳೆ ಹಾಗೂ ಪ್ರವಾಹದಿಂದಾಗಿ ಅಪಾರ ಪ್ರಮಾಣದ ಈರುಳ್ಳಿ ಬೆಳೆ ನಾಶವಾಗಿದೆ. ತೇವಾಂಶದ ಕಾರಣದಿಂದಾಗಿ ಸಂಗ್ರಹಿಸಿಟ್ಟಿದ್ದ ಈರುಳ್ಳಿ ಕೊಳೆತು ಹೋಗಿದೆ. ಇದಲ್ಲದೆ ಶ್ರಾವಣ ಮಾಸದಿಂದ ಸಾಲು, ಸಾಲು ಹಬ್ಬಗಳು ಶುರುವಾಗುತ್ತವೆ. ಇದು ಕೂಡ ಈರುಳ್ಳಿ ಬೇಡಿಕೆ ಹೆಚ್ಚಾಗಿ ಬೆಲೆ ಏರಿಕೆಗೆ ಒಂದು ಕಾರಣವಾಗಿದೆ.

ಕಡಿಮೆಯಾದ ಈರುಳ್ಳಿ ಕ್ಷೇತ್ರ: ಪೂರೈಕೆಯಲ್ಲಿ ಭಾರಿ ಕುಸಿತ

ತಾಲೂಕಿನಲ್ಲಿ ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಈರುಳ್ಳಿ ಬೆಳೆಯುವ ಕ್ಷೇತ್ರದಲ್ಲಿ ಭಾರಿ ಇಳಿಕೆಯಾಗಿದೆ. ಕಳೆದ ವರ್ಷ 900-1,200 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಆದರೆ, ಈ ವರ್ಷ ಅದು 490-700 ಹೆಕ್ಟೇರ್‌ಗೆ ಇಳಿದಿದೆ. ಮಾರುಕಟ್ಟೆಗೆ ಬರಬೇಕಾಗಿದ್ದ ಹೊಸ ಈರುಳ್ಳಿ ಫಸಲು ತಡವಾಗಿದ್ದು, ಎಪಿಎಂಸಿ ಮಾರುಕಟ್ಟೆಗಳಿಗೆ ಸರಬರಾಜು ಆಗುವ ಈರುಳ್ಳಿ ಪ್ರಮಾಣ ಅರ್ಧಕ್ಕರ್ಧ ಕಡಿಮೆಯಾಗಿದೆ. ಬೇಡಿಕೆ ಹೆಚ್ಚಾಗಿದ್ದು ಪೂರೈಕೆ ಕಡಿಮೆಯಿರುವುದು ದರ ಏರಿಕೆಗೆ ಮುಖ್ಯ ಕಾರಣ.

ಜನತೆ, ಹೋಟೆಲ್ ಉದ್ಯಮ ಕಂಗಾಲು:

ಈರುಳ್ಳಿ ಇಲ್ಲದೆ ಭಾರತೀಯ ಅಡುಗೆ ಪೂರ್ಣಗೊಳ್ಳುವುದೇ ಇಲ್ಲ. ಸಾಂಬಾರ್, ಪಲ್ಯದಿಂದ ಹಿಡಿದು ಉಪ್ಪಿಟ್ಟು, ಬಿರಿಯಾನಿವರೆಗೆ ಎಲ್ಲದಕ್ಕೂ ಈರುಳ್ಳಿ ಬೇಕೇ ಬೇಕು. ಮಧ್ಯಮ ವರ್ಗದ ಕುಟುಂಬಗಳು ಈಗ ಈರುಳ್ಳಿ ಖರೀದಿಯನ್ನು ಅರ್ಧದಷ್ಟು ಕಡಿತಗೊಳಿಸಿವೆ. ವಾರಕ್ಕೆ 2 ಕೆ.ಜಿ. ಕೊಳ್ಳುತ್ತಿದ್ದವರು ಈಗ ಕೇವಲ ಅರ್ಧ ಕೆ.ಜಿ. ಖರೀದಿಸಿ ದಿನ ದೂಡುತ್ತಿದ್ದಾರೆ.

ಹೋಟೆಲ್‌ಗಳಲ್ಲಿ ದೋಸೆ, ಉತ್ತಪ್ಪ, ಬೇಲ್ ಪುರಿ, ಮತ್ತು ಚಾಟ್ಸ್ ವ್ಯಾಪಾರಿಗಳಿಗೆ ಈರುಳ್ಳಿ ಅನಿವಾರ್ಯ. ಆದರೆ, ಬೆಲೆ ಹೆಚ್ಚಾದ ಕಾರಣ ಗ್ರಾಹಕರಿಗೆ ನೀಡುವ ಈರುಳ್ಳಿ ಪ್ರಮಾಣವನ್ನು ಕಡಿತಗೊಳಿಸಿದ್ದಾರೆ. ಹೋಟೆಲ್‌ಗಳಲ್ಲಿ ಉಚಿತವಾಗಿ ನೀಡುತ್ತಿದ್ದ ಈರುಳ್ಳಿ ಸಲಾಡ್‌ಗಳು ಈಗ ಮಾಯವಾಗಿವೆ. ಬೆಲೆ ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ಬೆಲೆ ಹೆಚ್ಚಿಸದಿದ್ದರೆ ತಮಗೆ ಲಾಭವಿಲ್ಲ ಎಂಬ ಇಕ್ಕಟ್ಟಿನಲ್ಲಿ ವ್ಯಾಪಾರಿಗಳಿದ್ದಾರೆ.

20 ದಿನದಲ್ಲಿ ಹೊಸ ಈರುಳ್ಳಿ ಬಂದ ನಂತರ ಬೆಲೆ ಇಳಿಕೆ

ರಾಣಿಬೆನ್ನೂರು ತಾಲೂಕಿನಲ್ಲಿ ಈ ವರ್ಷ ರೈತರು ಕಡಿಮೆ ಪ್ರಮಾಣದಲ್ಲಿ ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಮಳೆ ಆಶ್ರಿತದಲ್ಲಿ ಈರುಳ್ಳಿ ಬೆಳೆದವರು ಮಾರುಕಟ್ಟೆಗೆ ಫಸಲು ತಂದಿಲ್ಲ. ನೀರಾವರಿ ಪ್ರದೇಶದ ರೈತರು ಇದುವರೆಗೂ ಕೊಯ್ಲು ಮಾಡಿಲ್ಲ. ಬಹುಶಃ 15-20 ದಿನಗಳ ನಂತರ ಸ್ಥಳೀಯ ಈರುಳ್ಳಿ ಪೇಟೆಗೆ ಬರಲಿದೆ. ಆಗ ಬೆಲೆ ಏರಿಕೆ ನಿಯಂತ್ರಣಕ್ಕೆ ಬರಲಿದೆ. ಅಲ್ಲಿವರೆಗೂ ಈರುಳ್ಳಿ ದರ ಯಥಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಮಂಜು ನಾಯ್ಕ್‌ ಹೇಳಿದರು.

ರೈತರು ಈರುಳ್ಳಿ ಬಿಟ್ಟು ಬೇರೆ ಬೆಳೆ

ರಾಣಿಬೆನ್ನೂರು ತಾಲೂಕಿನಲ್ಲಿ ಎರಡು ವರ್ಷಗಳ ಹಿಂದೆ ಈರುಳ್ಳಿ ಬೆಳೆದ ರೈತರು ಸರಿಯಾದ ಬೆಲೆ ಸಿಗದ ಕಾರಣ ಪರ್ಯಾಯ ಬೆಳೆಯತ್ತ ಮುಖ ಮಾಡಿದ್ದಾರೆ. ಹೀಗಾಗಿ, ತಾಲೂಕಿನಲ್ಲಿ ಈರುಳ್ಳಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿದ್ದು, ದರ ಹೆಚ್ಚಳಕ್ಕೆ ಇದೂ ಒಂದು ಕಾರಣವಾಗಿದೆ.

- ಸುರೇಶ ಜ್ಯೋತಿಬಣ್ಣದ, ಹೋಲ್‌ಸೆಲ್ ಈರುಳ್ಳಿ ವರ್ತಕರು, ರಾಣಿಬೆನ್ನೂರು.

PREV
Read more Articles on
click me!

Recommended Stories

IAS Officer : ವರ್ಗಾವಣೆಯಾದ ಒಂದೇ ದಿನಕ್ಕೆ ವಾಪಸ್ ಆದ ಸೆಸ್ಕ್ ಎಂಡಿ MS ಅರ್ಚನಾ!
ಕೇಳಿದ್ದು 40, ಸಿಕ್ಕಿದ್ದು 100: ಮಂಡ್ಯ ಜಿಲ್ಲೆಗೆ ಬಂಪರ್ ಕೊಡುಗೆ ನೀಡಿದ ಭೈರತಿ ಸುರೇಶ್