ಹಾವೇರಿಯಲ್ಲಿ ನಡೆಯುತ್ತಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಶಿಕ್ಷಕನಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಹೃದಯಾಘಾತವಾದ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಅದ್ರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಸಾವನ್ನಪ್ಪಿದ್ದಾನೆ.
ಹಾವೇರಿ (ಜ.7): ಹಾವೇರಿಯಲ್ಲಿ ನಡೆಯುತ್ತಿರುವ 86 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬಂದ ಶಿಕ್ಷಕನಿಗೆ ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಮೃತ ಶಿಕ್ಷಕನನ್ನು ಸಂಗನಗೌಡರ (34) ಎಂದು ಗುರುತಿಸಲಾಗಿದೆ. ಜನವರಿ 5 ರಂದು ಸಾಯಂಕಾಲ 7.30ಕ್ಕೆ ಹಾವೇರಿಗೆ ಬಂದಿದ್ದ ಶಿಕ್ಷಕನಿಗೆ ರಾತ್ರಿ 12 ಗಂಟೆಗೆ ಹೃದಯಾಘಾತವಾಗಿದೆ. ಹಾವೇರಿಯ ಅಶ್ವಿನಿ ನಗರದ ಗೆಳಯರ ಬಳಗ ಶಾಲೆಯಲ್ಲಿ ಶಿಕ್ಷಕ ಸಂಗನಗೌಡರ ವಾಸ್ತವ್ಯ ಹೂಡಿದ್ದ. ಹೃದಯಾಘಾತವಾದ ತಕ್ಷಣ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು ಅದ್ರೆ ಚಿಕಿತ್ಸೆ ಫಲಿಸದೆ ಶಿಕ್ಷಕ ಸಾವನ್ನಪ್ಪಿದ್ದಾನೆ. ಶಿಕ್ಷಕ ಸಂಗನಗೌಡರ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆಯ ಮತ್ತಿಕೇರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು.
ಹೃದಯಾಘಾತದಿಂದ ಪ್ರವಾಸಿಗನ ಸಾವು
ಶಿವಮೊಗ್ಗ: ಸಾಗರ ತಾಲೂಕಿನ ಶ್ರೀ ಕ್ಷೇತ್ರ ಸಿಗಂಧೂರಿಗೆ ಹೊರಟಿದ್ದ ಬೆಂಗಳೂರು ಮೂಲದ ಪ್ರವಾಸಿಗರೊಬ್ಬರು ಹೊಸನಗರದ ಲಾಡ್ಜ್‌ವೊಂದರಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರು ಜಿಲ್ಲೆ ಆಡುಗೋಡಿ ಆನೆಪಾಳ್ಯದ ನಿವಾಸಿ ಹಾಗೂ ರಿಯಲ… ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಮುನಿರಾಜು(48) ಮೃತಪಟ್ಟವರು. ಜ. 4ರಂದು ಪುಣ್ಯಕ್ಷೇತ್ರಗಳ ಭೇಟಿಗೆಂದು ಪತ್ನಿ ಭಾರತಿ, ಪುತ್ರಿ ಯಶಸ್ವಿನಿ ಹಾಗೂ ಪುತ್ರ ವಿಭಾಶರಾಜ… ಅವರೊಂದಿಗೆ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದರು. ಹೊರನಾಡು, ಶೃಂಗೇರಿ ಕ್ಷೇತ್ರ ದರ್ಶನದ ನಂತರ ಸಿಗಂಧೂರು ಶ್ರೀ ಚೌಡೇಶ್ವರಿ ದೇವಿ ದರ್ಶನಕ್ಕಾಗಿ ತೆರಳಲು ರಾತ್ರಿ ಹೊಸನಗರದ ಲಾಡ್ಜ್‌ನಲ್ಲಿ ತಂಗಿದ್ದರು. ಗುರುವಾರ ಬೆಳಗ್ಗೆ ಹೃದಯಘಾತಕ್ಕೊಳಗಾದ ಅವರನ್ನು ಆಸ್ಪತ್ರೆಗೆ ದಾಖಲಿಸುವ ವೇಳೆ ಮೃತಪಟ್ಟಿದ್ದಾರೆ. ಹೊಸನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
undefined
ಹೃದಯಾಘತದಿಂದ ಹೆಡ್ ಕಾನ್‌ಸ್ಟೇಬಲ್ ಸಾವು
ಬೆಂಗಳೂರು: ಕರ್ತವ್ಯ ನಿರತದಲ್ಲಿದ್ದಾಗಲೇ ಹೃದಯಾಘಾತದಿಂದ ಹೆಬ್ಬಾಳ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೇಬಲ್ ವಿರೂಪಾಕ್ಷಪ್ಪ ಗೌಡರ್ (36) ಸಾವನ್ನಪ್ಪಿರುವ ದಾರುಣ ಘಟನೆ ಬುಧವಾರ ನಡೆದಿದೆ.
ಕರ್ತವ್ಯಕ್ಕೆ ಬೆಳಗ್ಗೆ 7ಕ್ಕೆ ಹಾಜರಾದ ಅವರಿಗೆ ಠಾಣೆಯಲ್ಲಿದ್ದಾಗಲೇ ಎದೆ ನೋವು ಕಾಣಿಸಿಕೊಂಡಿದೆ. ಆಗ ಠಾಣೆ ಸಮೀಪ ಔಷಧಿ ಅಂಗಡಿಗೆ ಮಾತ್ರೆ ತೆಗೆದುಕೊಳ್ಳಲು ಹೋಗುತ್ತಿದ್ದ ವಿರೂಪಾಕ್ಷಪ್ಪ ದಿಢೀರ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರನ್ನು ಸಹೋದ್ಯೋಗಿಗಳು ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ತಪಾಸಣೆ ನಡೆಸಿದ ವೈದ್ಯರು ವಿರೂಪಾಕ್ಷಪ್ಪ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ. ಮೃತರು ಪತ್ನಿ ಶಾರದಾ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಬಾಗಲಕೋಟೆ ಜಿಲ್ಲೆ ಶಾಂಪುರ ಗ್ರಾಮದ ವಿರೂಪಾಕ್ಷಪ್ಪಗೌಡರ್ ಅವರು, 2009ರಲ್ಲಿ ಪೊಲೀಸ್ ಕಾನ್‌ಸ್ಟೇಬಲ್ ಹುದ್ದೆಗೆ ಆಯ್ಕೆಯಾಗಿದ್ದರು. ಬೆಂಗಳೂರಿನ ವಿವಿಧ ಠಾಣೆಗಳಲ್ಲಿ ಸೇವೆ ಸಲ್ಲಿಸಿದ್ದ ಅವರು, ಸೇವಾ ಹಿರಿತನ ಆಧಾರದಡಿ ಹೆಡ್ ಕಾನ್‌ಸ್ಟೇಬಲ್ ಆಗಿ ಮುಂಬಡ್ತಿ ಪಡೆದಿದ್ದರು. ಪ್ರಸುತ್ತ ಹೆಬ್ಬಾಳ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿರೂಪಾಕ್ಷಪ್ಪ ಅವರು, ದೇವನಹಳ್ಳಿಯಲ್ಲಿ ತಮ್ಮ ಕುಟುಂಬದ ಜತೆ ನೆಲೆಸಿದ್ದರು. ಬಾಗಲಕೋಟೆ ಜಿಲ್ಲೆಯ ಸ್ವಗ್ರಾಮಕ್ಕೆ ಮೃತದೇಹವನ್ನು ಕುಟುಂಬ ಸದಸ್ಯರು ತೆಗೆದುಕೊಂಡು ಹೋದರು. ಮೃತರಿಗೆ ನಗರ ಪೊಲೀಸ್ ಆಯುಕ್ತ ಸಿ.ಎಚ್.ಪ್ರತಾಪ್ ರೆಡ್ಡಿ ಹಾಗೂ ಹೆಚ್ಚುವರಿ ಆಯುಕ್ತ ಸಂದೀಪ್ ಪಾಟೀಲ್ ಸಂತಾಪ ಸೂಚಿಸಿದ್ದಾರೆ.