ಹಾವೇರಿಯಲ್ಲಿ ಶುಕ್ರವಾರದಿಂದ ಆರಂಭವಾದ 86ನೇ ಸಾಹಿತ್ಯ ಜಾತ್ರೆಯ ಅಂಗವಾಗಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರ ಮೆರವಣಿಗೆ ಏಲಕ್ಕಿ ಕಂಪಿನ ಹಾವೇರಿ ನಗರದಲ್ಲಿ ಕನ್ನಡದ ರಂಗೇರುವಂತೆ ಮಾಡಿತು.
ನಾರಾಯಣ ಹೆಗಡೆ
ಹಾವೇರಿ (ಜ.7) : ಹಾವೇರಿಯಲ್ಲಿ ಶುಕ್ರವಾರದಿಂದ ಆರಂಭವಾದ 86ನೇ ಸಾಹಿತ್ಯ ಜಾತ್ರೆಯ ಅಂಗವಾಗಿ ತಾಯಿ ಭುವನೇಶ್ವರಿ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಡಾ.ದೊಡ್ಡರಂಗೇಗೌಡ ಅವರ ಮೆರವಣಿಗೆ ಏಲಕ್ಕಿ ಕಂಪಿನ ಹಾವೇರಿ ನಗರದಲ್ಲಿ ಕನ್ನಡದ ರಂಗೇರುವಂತೆ ಮಾಡಿತು.
undefined
ನಗರದ ಪುರಸಿದ್ಧೇಶ್ವರ ದೇವಾಲಯ(Purasiddeshwar temple)ದ ಬಳಿ ಮೆರವಣಿಗೆ ರಥದಲ್ಲಿನ ತಾಯಿ ಭುವನೇಶ್ವರಿ ದೇವಿಗೆ ಸರ್ವಾಧ್ಯಕ್ಷರಾದ ದೊಡ್ಡರಂಗೇಗೌಡ, ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲಕುಮಾರ, ಕಸಾಪ ರಾಜ್ಯಾಧ್ಯಕ್ಷ ನಾಡೋಜ ಮಹೇಶ ಜೋಶಿ ಸೇರಿದಂತೆ ಗಣ್ಯರು ಪುಷ್ಟಾರ್ಚನೆ ಮಾಡಿದರು. ಬಳಿಕ, ಅಲಂಕೃತಗೊಂಡ ರಥದಲ್ಲಿ ಸರ್ವಾಧ್ಯಕ್ಷರನ್ನು ಕೂರಿಸಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಸಮ್ಮೇಳನದಲ್ಲಿ ಅತಿಥಿಯನ್ನೇ ಒಳಬಿಡದ ಪೊಲೀಸರು, ಪೊಲೀಸರ ಮೇಲೆ ಮಹೇಶ್ ಜೋಶಿ ಗರಂ
ತಾಯಿ ಭುವನೇಶ್ವರಿಯ(Bhuvaneshwari devi) ಭಾವಚಿತ್ರ ಹೊತ್ತ ರಥ, ಮೆರವಣಿಗೆಯ ವಿಶೇಷ ಆಕರ್ಷಣೆಯಾಗಿತ್ತು. ಡಾ.ದೊಡ್ಡರಂಗೇಗೌಡ ಅವರು ರಥದಲ್ಲಿ ವಿರಾಜಮಾನರಾಗಿ, ಮೆರವಣಿಗೆಯುದ್ದಕ್ಕೂ ಜನಸಮೂಹದತ್ತ ಕೈಬೀಸಿ, ನುಡಿ ಅಭಿಮಾನಿಗಳಿಗೆ ಹಣೆಮಣಿದು ಗೌರವ ಸಲ್ಲಿಸಿದರು. ಎಲ್ಲರತ್ತ ಮಂದಹಾಸ ಬೀರುತ್ತ, ಕೈಮುಗಿಯುತ್ತ ಸಾಗಿದರು.
ಎಲ್ಲ ಜಿಲ್ಲೆಗಳ ಕಸಾಪ ಜಿಲ್ಲಾಧ್ಯಕ್ಷರನ್ನು ಹೊತ್ತ 12 ಸಾರೋಟುಗಳು ಮೆರವಣಿಗೆಗೆ ಕಳೆ ತಂದಿತ್ತು. ಎಂಜಿ ರಸ್ತೆ, ಗಾಂ ವೃತ್ತ, ಮೈಲಾರ ಮಹದೇವಪ್ಪ ಸರ್ಕಲ್,ಹೊಸಮನಿ ಸಿದ್ದಪ್ಪ ವೃತ್ತದಿಂದ ಹಾದು ವಾಲ್ಮೀಕಿ ಸರ್ಕಲ್ ಮಾರ್ಗವಾಗಿ ಸಮ್ಮೇಳನದ ವೇದಿಕೆವರೆಗೆ ಸುಮಾರು 7 ಕಿಲೋ ಮೀಟರ್‌ವರೆಗೆ ಅದ್ದೂರಿ ಮೆರವಣಿಗೆ ನಡೆಯಿತು. ನಿಗದಿತ ವೇಳೆಗೆ ಮೆರವಣಿಗೆ ವೇದಿಕೆ ತಲುಪಿತು. ಮೆರವಣಿಗೆ ಸಾಗುವ ಮಾರ್ಗವು ಚಿತ್ತಾಕರ್ಷಕ ರಂಗೋಲಿ, ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ದಾರಿಯುದ್ದಕ್ಕೂ ಕನ್ನಡಪರ ಘೋಷಣೆ ಹಾಕಿ, ಜೈಕಾರ ಹಾಕುತ್ತ ಜನರು ಅಭಿಮಾನ ಮೆರೆದರು.
ಮೆರಗು ತಂದ ಕಲಾತಂಡಗಳು:
ಚಿಲಿಪಿಲಿ ಗೊಂಬೆ, ಕಂಸಾಳೆ, ಕೀಲು ಕುದುರೆ, ಜಾಂಜ್, ಬೇಡರ ಕುಣಿತ, ಮಹಿಳಾ ಚಂಡೆ ಕುಣಿತ ಸೇರಿದಂತೆ ನೂರಾರು ಪ್ರಕಾರದ ವೈವಿಧ್ಯಮಯ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗಿಯಾಗಿ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಪ್ರದರ್ಶಿಸಿ ಕಣ್ಮನ ಸೆಳೆದವು. ಸಾವಿರಾರು ಕಲಾವಿದರು ಉತ್ಸಾಹದಿಂದಲೇ ಪ್ರದರ್ಶನ ನೀಡುತ್ತ ಸಾಗಿದರು. ಕೊಂಬು ಕಹಳೆ, ತಮಟೆ, ಡೊಳ್ಳು, ಖಣಿ ಹಲಿಗೆಯ ಸದ್ದು ದಾರಿಯುದ್ದಕ್ಕೂ ನುಡಿ ಜಾತ್ರೆಯ ಕಳೆ ಹೆಚ್ಚಿಸಿದವು.
ನಗರದ ಪ್ರಮುಖ ವೃತ್ತಗಳಲ್ಲಿ ಕಲಾ ತಂಡಗಳು ಸಮಾಗಮಗೊಂಡು ಆಕರ್ಷಕ ಪ್ರದರ್ಶನ ನೀಡಿದವು. ಮಹಿಳಾ ಶಕ್ತಿ ತಂಡದ ಸದಸ್ಯರು ಕೆಂಪು ಹಳದಿ ಬಣ್ಣದ ಸೀರೆಯುಟ್ಟು, ಕುಂಭ ಹೊತ್ತು ಮೆರವಣಿಗೆಯಲ್ಲಿ ಸಾಗಿದರು. ರಾಜ್ಯದ ನಾನಾ ಜಿಲ್ಲೆಗಳಿಂದ ಆಗಮಿಸಿದ ಸಾವಿರಾರು ಜನರು ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದರು. ನೂರಾರು ಮೀಟರ್ ಉದ್ದದ ಕನ್ನಡ ಬಾವುಟ ಹೊತ್ತು ಸಾಗಿದರು. ಇಡೀ ಹಾವೇರಿ ನಗರ ಪೂರ್ತಿ ಕನ್ನಡಮಯವಾಗಿತ್ತು.
ಆಕರ್ಷಕ ಕಲಾ ಪ್ರದರ್ಶನ:
ಪುರಸಿದ್ಧೇಶ್ವರ ದೇವಾಲಯದ ಎದುರಿನಿಂದ ಆರಂಭವಾಗಿ ವೇದಿಕೆವರೆಗೂ ಸಾವಿರಾರು ಕಲಾವಿದರು ಮೆರವಣಿಗೆಯಲ್ಲಿ ಕನ್ನಡದ ಜಾನಪದ ಪರಂಪರೆಯನ್ನು ಪ್ರದರ್ಶಿಸಿದರು. ತಮಟೆ ನೃತ್ಯ, ಪಟ ಕುಣಿತ, ಕಂಸಾಳೆ ನೃತ್ಯ, ಲಂಬಾಣಿ ನೃತ್ಯ, ಚಂಡಿ ತಯಂ, ಕೀಲು ಕುದುರೆ, ದೇವಿ ನೃತ್ಯ, ಮಹಿಳಾ ವೀರಗಾಸೆ, ಕರಡಿ ಮಜಲು, ಖಣಿ ವಾದನ, ಬೇಡರ ಕುಣಿತ, ಸೋಮಗ ಕುಣಿತ, ಗಾರುಡಿ ಗೊಂಬೆ, ಮಹಿಳಾ ಚಂಡೆ ಕುಣಿತ, ಸೋಮನ ಕುಣಿತ, ಹಾಲಕ್ಕಿ ಸುಗ್ಗಿ, ಕೋಲಾಟ, ಮೊಜುಗೊಂಬೆ ಮೊದಲಾದ ವೈವಿಧ್ಯಮಯ ಕಲಾ ಪ್ರಕಾರಗಳ ಪ್ರದರ್ಶನ ಚಿತ್ತಾಕರ್ಷಕವಾಗಿತ್ತು. ಕಂಸಾಳೆ ನೃತ್ಯ, ದುರ್ಗಾದೇವಿ, ಭದ್ರಕಾಳಿ ನೃತ್ಯ, ಖಾಸಾ ಬೇಡರಪಡೆ ಕುಣಿತ, ಬುಡಕಟ್ಟು ಮಹಿಳಾ ಜಾನಪದ ತಂಡದಿಂದ ನಡೆದ ಹಕ್ಕಿಪಕ್ಕಿ ನೃತ್ಯ ಪ್ರದರ್ಶನ ನೋಡುಗರ ಗಮನ ಸೆಳೆದವು. ವಾಸುದೇವ ಬನ್ನಂಜೆ ಲಕ್ಷ್ಮೀನಾರಾಯಣ ಚಂಡೆವಾದನ ಬಳಗ ತಂಡದಿಂದ ನಡೆದ ಗಂಡು ಮಕ್ಕಳ ಚಂಡೆ ವಾದ್ಯ ಆಕರ್ಷಕವಾಗಿತ್ತು.
Kannada sahitya sammelana: ಊಟೋಪಚಾರಕ್ಕೆ ಸಾಹಿತ್ಯಾಭಿಮಾನಿಗಳು ಖುಷ್; Mobile Network ಇಲ್ಲದೆ ಪರದಾಟ!
ಜನರಿಂದ ಬಿಸ್ಕತ್, ಚಹ ವಿತರಣೆ:
ಮೆರವಣಿಗೆ ಸಾಗುವ ಮಾರ್ಗದುದ್ದಕ್ಕೂ ಕುಡಿಯುವ ನೀರು, ಬಿಸ್ಕತ್, ಚಹ, ಚಾಕಲೇಟ್ ನೀಡಿ ಹಾವೇರಿ ನಗರದ ಜನತೆ ಔದಾರ್ಯ ಮೆರೆದರು. ಜಿಲ್ಲಾಡಳಿತದಿಂದಲೂ ಅಲ್ಲಲ್ಲಿ ನೀರಿನ ವ್ಯವಸ್ಥೆ, ಮೊಬೈಲ್ ಶೌಚೌಲಯ ವ್ಯವಸ್ಥೆ ಮಾಡಲಾಗಿತ್ತು. ಮಾರ್ಗದ ಇಕ್ಕೆಲಗಳಲ್ಲಿ ಕನ್ನಡಾಭಿಮಾನಿಗಳು ಗಂಟೆಗಟ್ಟಲೆ ನಿಂತು, ಕನ್ನಡದ ಬಾವುಟ ರಾರಾಜಿಸುತ್ತ, ಮೆರವಣಿಗೆಗೆ ಶುಭ ಕೋರುತ್ತಿದ್ದ ದೃಶ್ಯ ಎಲ್ಲೆಡೆ ಕಂಡು ಬಂತು.