
ಮಂಡ್ಯ (ಜು.02): ಸಕ್ಕರೆನಾಡು ಮಂಡ್ಯದಲ್ಲಿ ದಾರುಣ ಘಟನೆಯೊಂದು ನಡೆದಿದೆ. ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ ಎಂದು ಡೆತ್ ನೋಟ್ ಬರೆದಿಟ್ಟ ಮಹಿಳೆಯೊಬ್ಬರು ತನ್ನ 9 ವರ್ಷದ ಮಗಳನ್ನು ಸೀರೆಗೆ ನೇಣು ಬಿಗಿದು, ಕೊನೆಗೆ ತಾನೂ ಅದೇ ಸೀರೆಗೆ ಕೊರಳೊಡ್ಡಿ ಸಾವಿಗೆ ಶರಣಾಗಿದ್ದಾಳೆ. ತಾಯಿ-ಮಗಳ ಸಾವಿನಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಮಂಡ್ಯದ ನೆಹರು ನಗರದಲ್ಲಿ ಘಟನೆ ನಡೆದಿದೆ. ತಾಯಿ ರಶ್ಮಿ(28) ಹಾಗೂ ಮಗಳು ದಿಶಾ (9)ಮೃತ ದುರ್ದೈವಿಗಳು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರ ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ. ಮೃತ ಮಹಿಳೆ ರಶ್ಮಿ ಮತ್ತು ದಿಶಾ ಚನ್ನಪಟ್ಟಣದ ಮೂಲದವರು. ಕಳೆದ 5 ವರ್ಷದಿಂದ ಗಂಡನಿಂದ ದೂರವಾಗಿದ್ದ ರಶ್ಮಿ, ಮಂಡ್ಯ ನಗರಕ್ಕೆ ಬಂದು ಕೆಲಸ ಮಾಡುತ್ತಾ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಜೀವನದಲ್ಲಿ ಆದ ತೊಂದರೆಗಳಿಂದ ಮನನೊಂದಿದ್ದ ರಶ್ಮಿ, ಇದೀಗ ಮಗಳೊಂದಿಗೆ ನೇಣಿಗೆ ಶರಣಾಗಿದ್ದಾಳೆ.
ಮೃತಳ ಮನೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ. ಅದರಲ್ಲಿ, 'ನನಗೆ ಈ ಜೀವನ ಇಷ್ಟ ಇಲ್ಲ. ಮದುವೆಯಾಗಿಯೂ ಏನು ಸುಖವಿಲ್ಲ. ಒಂಟಿಯಾಗಿ 5 ವರ್ಷದಿಂದ ಜೀವನ ಮಾಡ್ತಿದ್ದೇನೆ. ಆದರೂ ಗಂಡ ಬೇರೆ ಮದುವೆ ಆಗುತ್ತೇನೆ, ನನ್ನ ನಿನ್ನ ಸಂಬಂಧ ಇಲ್ಲವೆಂದು ಬರೆದುಕೊಡುವಂತೆ ಒತ್ತಾಯಿಸುತ್ತಿದ್ದಾನೆ. ನನಗೆ ಈ ಜೀವನ ಸಾಕಾಗಿದೆ. ಅಮ್ಮನನ್ನ ಚೆನ್ನಾಗಿ ನೋಡಿಕೊ ಅಣ್ಣ...' ಎಂದು ಬರೆದಿದ್ದಾರೆ. ಇನ್ನು ಘಟನಾ ಸ್ಥಳಕ್ಕೆ ಮಂಡ್ಯ ಪೂರ್ವ ಠಾಣೆ ಪೊಲೀಸರರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.