ಮನ್‌ಮುಲ್‌ ಹಾಲಿನ ಪುಡಿ ಕಲಬೆರಕೆ ಹಗರಣ ತೀವ್ರ: ಪೊಲೀಸ್ ಠಾಣೆಗೆ ಹಾಜರಾದ ಮಾಜಿ ಅಧ್ಯಕ್ಷ ಉಮ್ಮಡಹಳ್ಳಿ ಶಿವಪ್ಪ

Published : Sep 29, 2026, 05:27 PM IST
Mandya KMF Dairy

ಸಾರಾಂಶ

ಮಂಡ್ಯದ ಮನ್‌ಮುಲ್ ಒಕ್ಕೂಟದಲ್ಲಿ ನಡೆದ 57 ಟನ್ ಹಾಲಿನ ಪುಡಿ ಕಲಬೆರಕೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾರ್ ವಿಚಾರಣೆಗಾಗಿ ಮದ್ದೂರು ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ.

ಮಂಡ್ಯ (ಸೆ.29): ಮಂಡ್ಯ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ (ಮನ್‌ಮುಲ್‌) ಕೋಟ್ಯಾಂತರ ರೂಪಾಯಿ ಮೌಲ್ಯದ ಹಾಲಿನ ಪುಡಿ ಕಲಬೆರಕೆ ಪ್ರಕರಣದ ತನಿಖೆ ತೀವ್ರಗೊಂಡಿದ್ದು, ಮನ್‌ಮುಲ್‌ ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾರ್ (ಉಮ್ಮಡಹಳ್ಳಿ ಶಿವಪ್ಪ) ಸೋಮವಾರ ರಾತ್ರಿ ಮದ್ದೂರು ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ. ಮದ್ದೂರು ತಾಲೂಕಿನ ಗೆಜ್ಜಲಗೆರೆಯಲ್ಲಿರುವ ಮನ್‌ಮುಲ್ ಒಕ್ಕೂಟದಲ್ಲಿ ನಡೆದ ಈ ಭಾರಿ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೇ ಮದ್ದೂರು ಪೊಲೀಸ್ ಠಾಣೆ ಹಾಗೂ ಲೋಕಾಯುಕ್ತದಲ್ಲಿ ಪ್ರಕರಣಗಳು ದಾಖಲಾಗಿದ್ದು, ಹಲವು ಹಿರಿಯ ಅಧಿಕಾರಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಮಾಜಿ ಅಧ್ಯಕ್ಷರ ಹೆಸರು ಬಾಯಿಬಿಟ್ಟಿದ್ದ ಬಂಧಿತ ನೌಕರರು

ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಮನ್‌ಮುಲ್‌ನ ಪ್ರಮುಖ ನೌಕರರು, ಪೊಲೀಸರ ತೀವ್ರ ವಿಚಾರಣೆ ವೇಳೆ "ಹಾಲಿನ ಪುಡಿ ಕಲಬೆರಕೆ ಜಾಲದಲ್ಲಿ ಮಾಜಿ ಅಧ್ಯಕ್ಷ ಯು.ಸಿ. ಶಿವಕುಮಾ‌ರ್ ಅವರ ಪಾತ್ರವೂ ಇದೆ" ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ಆಧಾರದ ಮೇಲೆ ಮದ್ದೂರು ಪೊಲೀಸರು ಶಿವಕುಮಾರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಅಧಿಕೃತ ನೋಟಿಸ್ ನೀಡಿದ್ದರು.

ನೋಟಿಸ್ ಜಾರಿಯಾಗುತ್ತಿದ್ದಂತೆ ಕೆಲ ದಿನಗಳಿಂದ ತಲೆಮರೆಸಿಕೊಂಡಿದ್ದ ಶಿವಕುಮಾರ್ ಅವರು ವಿದೇಶಕ್ಕೆ (ಶ್ರೀಲಂಕಾ) ತೆರಳಿದ್ದರು ಎನ್ನಲಾಗಿದೆ. ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದ ಪೊಲೀಸರು, ಶಿವಕುಮಾ‌ರ್ ಅವರ ಸಹೋದರನನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸುತ್ತಿದ್ದರು. ಇದರಿಂದ ತೀವ್ರ ಒತ್ತಡಕ್ಕೆ ಒಳಗಾದ ಶಿವಕುಮಾ‌ರ್, ವಿದೇಶದಿಂದ ವಾಪಸಾಗಿ ನೇರವಾಗಿ ಮದ್ದೂರು ಪೊಲೀಸ್ ಠಾಣೆಗೆ ದೌಡಾಯಿಸಿ ಬಂದು ತನಿಖೆಗೆ ಹಾಜರಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

'ಬಂಧಿಸಿಲ್ಲ, ಕೇವಲ ವಿಚಾರಣೆ ನಡೆಸಲಾಗುತ್ತಿದೆ' - ಜಿಲ್ಲಾ ಎಸ್‌ಪಿ ಸ್ಪಷ್ಟನೆ

ಉಮ್ಮಡಹಳ್ಳಿ ಶಿವಪ್ಪ ಅವರ ಬಂಧನದ ವದಂತಿಗಳು ಹಬ್ಬುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ವಿ.ಜೆ. ಶೋಭಾರಾಣಿ ಅವರು, "ಮಾಜಿ ಅಧ್ಯಕ್ಷ ಶಿವಕುಮಾ‌ರ್ ಅವರನ್ನು ಸದ್ಯಕ್ಕೆ ಬಂಧಿಸಿಲ್ಲ. ವಿಚಾರಣೆಗೆ ಹಾಜರಾಗುವಂತೆ ನೀಡಿದ್ದ ನೋಟಿಸ್‌ಗೆ ಸ್ಪಂದಿಸಿ ಅವರು ಠಾಣೆಗೆ ಬಂದಿದ್ದಾರೆ. ಪ್ರಕರಣದ ತನಿಖೆ ಹಾಗೂ ವಿಚಾರಣೆ ಮುಂದುವರಿದಿದೆ," ಎಂದು ತಿಳಿಸಿದ್ದಾರೆ.

ಶಿವಕುಮಾರ್ ರಾಜಕೀಯ ಹಿನ್ನೆಲೆ

ಯು.ಸಿ. ಶಿವಕುಮಾರ್ ಅವರು ಮೂರು ಬಾರಿ ಮನ್‌ಮುಲ್ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಒಳ ಒಪ್ಪಂದದ ಪ್ರಕಾರ ಜೂನ್ 9, 2025 ರಂದು ಮನ್‌ಮುಲ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಅವರು, ಆಗಸ್ಟ್ 2026 ರಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತದನಂತರ ಆಗಸ್ಟ್ 5, 2026 ರಂದು ಹರೀಶ್ ಬಾಬು ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

57 ಟನ್ ಹಾಲಿನ ಪುಡಿ ಅಕ್ರಮ: ಐವರ ಬಂಧನ, ಇಬ್ಬರು ಅಧಿಕಾರಿಗಳ ಅಮಾನತು

ಮನ್‌ಮುಲ್ ಒಕ್ಕೂಟದ 57 ಟನ್ ಕೆನೆರಹಿತ ಹಾಲಿನ ಪುಡಿ (Skimmed Milk Powder) ಕಲಬೆರೆಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮದ್ದೂರು ಪೊಲೀಸರು ಈಗಾಗಲೇ ಐವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ. ಪ್ರದೀಪ್‌ಕುಮಾರ್ ಜಾಧವ್ (ಮನ್‌ಮುಲ್ ಖರೀದಿ ಅಧಿಕಾರಿ), ಶ್ರುತಿ ಎಂ. (ಸಿಸ್ಟಂ ಆಪರೇಟರ್), ರವಿ (ಮಾಸ್ಟ‌ರ್ ಇನ್ಸುಲೇಷನ್ ಗೋದಾಮಿನ ನೌಕರ), ಶ್ರೀನಿವಾಸ (ಹಾಲಿನ ಪುಡಿ ಲೋಡಿಂಗ್-ಅನ್‌ಲೋಡಿಂಗ್ ಕಾರ್ಮಿಕ) ಹಾಗೂ ಶ್ರೀನಿವಾಸಮೂರ್ತಿ ಕೆ.ಎನ್ ರನ್ನು ಬಂಧಿಸಲಾಗಿದೆ.

ಅಕ್ರಮ ಬಯಲಿಗೆ ಬಂದ ಹಿನ್ನೆಲೆಯಲ್ಲಿ ಖರೀದಿ ಅಧಿಕಾರಿ ಪ್ರದೀಪ್‌ಕುಮಾರ್ ಜಾಧವ್ ಹಾಗೂ ಉಪ ವ್ಯವಸ್ಥಾಪಕ ರಾಮಕೃಷ್ಣ ಟಿ. ಅವರನ್ನು ಸೇವೆ ಯಿಂದ ಅಮಾನತುಗೊಳಿಸಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ರಘು ಹೆಚ್.ಆರ್. ಅವರು ಆಗಸ್ಟ್ 27 ರಂದು ಆದೇಶ ಹೊರಡಿಸಿದ್ದರು.

ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ

ಪ್ರಕರಣದ ಗಂಭೀರತೆಯನ್ನು ಪರಿಗಣಿಸಿ, ಉಪಲೋಕಾಯುಕ್ತ-2 ನ್ಯಾಯಮೂರ್ತಿ ಬಿ.ವೀರಪ್ಪ ಅವರು ಆಗಸ್ಟ್ 28 ರಂದು ಗೆಜ್ಜಲಗೆರೆ ಮನ್‌ಮುಲ್ ಘಟಕಕ್ಕೆ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಪರಿಶೀಲನೆ ಬಳಿಕ ಘಟನೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ಆರು ಅಧಿಕಾರಿ ಹಾಗೂ ನೌಕರರ ವಿರುದ್ಧ ಲೋಕಾಯುಕ್ತ ಸಂಸ್ಥೆಯು ಸ್ವಯಂಪ್ರೇರಿತ ಪ್ರಕರಣ (Suo Motu) ದಾಖಲಿಸಿಕೊಂಡು ಪ್ರತ್ಯೇಕ ತನಿಖೆ ನಡೆಸುತ್ತಿದೆ.

PREV
Read more Articles on
click me!

Recommended Stories

ಬೆಂಗಳೂರು: ಏಷ್ಯಾದ ಅತಿದೊಡ್ಡ ಕೈಗಾರಿಕಾ ಪ್ರದೇಶಕ್ಕೆ ಸಚಿವ ಕಾಶ್ಯಪ್ಪನವರ್ ಭೇಟಿ, ಮೂಲಸೌಕರ್ಯ ಕೊರತೆ ಒಪ್ಪಿಕೊಂಡ ಸಚಿವರು
ಸೇವ್‌ ನಂದಿನಿ ಅಂದವರೆಲ್ಲಾ ನಾಪತ್ತೆ, ಬೀದರ್‌ ಕೆಎಂಎಫ್‌ನಲ್ಲಿ ‘ಮಹಾ’ ಹಾಲಿನ ಪುಡಿ ಪತ್ತೆ