Mandya Police: ಮಂಡ್ಯದಲ್ಲಿ ಕೊಲೆ ಆರೋಪಿ ಸೀಜರ್ ಸಿದ್ದನ ಕಾಲಿಗೆ ಗುಂಡೇಟು ಹೊಡೆದ ಪೊಲೀಸರು!

Published : Jun 18, 2026, 07:48 PM IST
mandya malavalli police firing

ಸಾರಾಂಶ

ಮಳವಳ್ಳಿಯ ಮಹೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿದ್ದರಾಜು ಅಲಿಯಾಸ್ 'ಸೀಜರ್ ಸಿದ್ದು' ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಮಂಡ್ಯ (ಜೂ.18): ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಭೀಮನಹಳ್ಳಿಯ ಮಹೇಶ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸಿದ್ದರಾಜು ಅಲಿಯಾಸ್ 'ಸೀಜರ್ ಸಿದ್ದು' ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಇಂದು ಬೆಳಿಗ್ಗೆ ಸ್ಥಳ ಮಹಜರು ನಡೆಸುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ.

ಘಟನೆಯ ವಿವರ:

ಕಳೆದ ಕೆಲವು ದಿನಗಳ ಹಿಂದೆ ಮಳವಳ್ಳಿಯ ಭೀಮನಹಳ್ಳಿಯಲ್ಲಿ ಮೆಸೇಜ್ ಕಳುಹಿಸಿದ ವಿಚಾರಕ್ಕೆ ಸಂಬಂಧಿಸಿದಂತೆ ಮಹೇಶ್ ಎಂಬುವವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ವಾಹನಗಳ ಸೀಜಿಂಗ್ ಕೆಲಸ ಮಾಡುತ್ತಿದ್ದ ಸಿದ್ದರಾಜು ಪ್ರಮುಖ ಆರೋಪಿಯಾಗಿದ್ದನು. ಇಂದು ಬೆಳಿಗ್ಗೆ ಮಳವಳ್ಳಿ ತಾಲ್ಲೂಕಿನ ಹುಲ್ಲೇಗಾಲ ಗ್ರಾಮದ ಬಳಿ ಪೊಲೀಸರು ಆರೋಪಿಯನ್ನು ಸ್ಥಳ ಮಹಜರು ನಡೆಸಲು ಕರೆತಂದಿದ್ದರು.

ಈ ಸಂದರ್ಭದಲ್ಲಿ ಆರೋಪಿ ಸಿದ್ದರಾಜು ಪೊಲೀಸ್ ಸಿಬ್ಬಂದಿಯ ಮೇಲೆ ಹಠಾತ್ ಹಲ್ಲೆ ನಡೆಸಿ ಅಲ್ಲಿಂದ ಎಸ್ಕೇಪ್ ಆಗಲು ಸಿದ್ಧತೆ ನಡೆಸಿದ್ದನು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಆರೋಪಿಯನ್ನು ಹಿಡಿಯಲು ಕಿರುಗಾವಲು ಸಿಪಿಐ ಶ್ರೀಧರ್ ಸಮ್ಮುಖದಲ್ಲಿ ಪಿಎಸ್ಐ ರವಿಕುಮಾರ್ ಅವರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟಿನಿಂದ ಗಾಯಗೊಂಡ ಸಿದ್ದರಾಜುನನ್ನು ತಕ್ಷಣವೇ ಮಂಡ್ಯದ ಮಿಮ್ಸ್ (MIMS) ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಎಸ್ಪಿ ಭೇಟಿ:

ಘಟನಾ ಸ್ಥಳಕ್ಕೆ ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಡಾ. ವಿ.ಜೆ. ಶೋಭಾರಾಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ಅವರು, 'ಆರೋಪಿ ಸ್ಥಳ ಮಹಜರು ವೇಳೆ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಹೀಗಾಗಿ ಅನಿವಾರ್ಯವಾಗಿ ಗುಂಡು ಹಾರಿಸಿ ಬಂಧಿಸಲಾಗಿದೆ. ಗಾಯಗೊಂಡ ಸಿಬ್ಬಂದಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ. ಸದ್ಯ ಮಹೇಶ್ ಕೊಲೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ಈ ಫೈರಿಂಗ್ ಘಟನೆಯಿಂದ ಮಳವಳ್ಳಿ ಭಾಗದಲ್ಲಿ ಸಂಚಲನ ಮೂಡಿದೆ.

PREV
Read more Articles on
click me!

Recommended Stories

ಮಂಡ್ಯ: ಮಳವಳ್ಳಿ ಶಾಲೆ ಬಿಸಿಯೂಟದಲ್ಲಿ ಹಲ್ಲಿ ಬಿದ್ದ ಶಂಕೆ, 67 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು!
ಚಿತ್ರದುರ್ಗ: ಕತ್ತಿಗೆ ಗ್ರ್ಯಾನೈಟ್ ಕಲ್ಲು ಬಿದ್ದು CUDA ಮಾಜಿ ಅಧ್ಯಕ್ಷರ ಪುತ್ರ ಸಾವು, ಕುಟುಂಬದಿಂದ ಮಗನ ಕಣ್ಣುದಾನ