
ಕೃಷಿ ಎಂದರೆ ಕೇವಲ ಒಂದು ಬೆಳೆ ಬೆಳೆದು ಆದಾಯ ಗಳಿಸುವುದಲ್ಲ. ಭೂಮಿಯ ಫಲವತ್ತತೆಯನ್ನು ಉಳಿಸಿಕೊಂಡು, ಕಡಿಮೆ ಜಾಗದಲ್ಲಿ ಹೆಚ್ಚು ಬೆಳೆಗಳನ್ನು ಬೆಳೆದು, ಮುಂದಿನ ಪೀಳಿಗೆಗೆ ಆರೋಗ್ಯಕರ ಆಹಾರ ನೀಡುವುದೂ ಕೃಷಿಯ ಪ್ರಮುಖ ಉದ್ದೇಶ. ಇಂತಹ ವಿಭಿನ್ನ ಚಿಂತನೆಯೊಂದಿಗೆ ಕೃಷಿಯಲ್ಲಿ ಸಾಧನೆ ಮಾಡಿರುವವರು ಮಂಡ್ಯ ಜಿಲ್ಲೆಯ ರೈತ ವಿರೂಪಾಕ್ಷ ಮೂರ್ತಿ. ಇವರ ಕೃಷಿ ಪದ್ಧತಿಯನ್ನು ಮೆಚ್ಚಿರುವ ಪ್ರಧಾನಿ ನರೇಂದ್ರ ಮೋದಿ ಅವರೂ ವಿಶೇಷವಾಗಿ ಗುರುತಿಸಿದ್ದಾರೆ. ಅಷ್ಟಕ್ಕೂ ಈ ರೈತರ ಸಾಧನೆಯ ಹಿಂದಿರುವ ಕಥೆಯೇನು?
ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನವಿಲೆ ಹೋಬಳಿಯ ತಿಟ್ಟನ ಹೊಸಹಳ್ಳಿ ಗ್ರಾಮದ ನಿವಾಸಿ ವಿರೂಪಾಕ್ಷ ಮೂರ್ತಿ ಅವರು ಸುಮಾರು ಐದು ಎಕರೆ ಜಮೀನಿನಲ್ಲಿ ಕೃಷಿ ಮಾಡುತ್ತಿದ್ದಾರೆ. ಸುಮಾರು 28 ವರ್ಷಗಳ ಹಿಂದೆ ಸಂಪೂರ್ಣ ಕಾಡಿನಂತಿದ್ದ ಜಾಗದಲ್ಲಿ ಕೃಷಿ ಆರಂಭಿಸಿದಾಗ, ಸುತ್ತಮುತ್ತಲಿನ ಜನರು ಇವರ ಪ್ರಯತ್ನವನ್ನು ನೋಡಿ ಅಪಹಾಸ್ಯ ಮಾಡಿದ್ದರಂತೆ. ಆದರೆ ಯಾವುದಕ್ಕೂ ಎದೆಗುಂದದ ಅವರು ತಮ್ಮದೇ ಆದ ಕೃಷಿ ಪದ್ಧತಿಯನ್ನು ರೂಪಿಸಿಕೊಂಡರು.
ಸಾವಯವ ಕೃಷಿ, ಸಾಂದ್ರ ಕೃಷಿ ಮತ್ತು ಸಮಗ್ರ ಕೃಷಿ ಎಂಬ ಮೂರು ವಿಧಾನಗಳನ್ನು ಒಟ್ಟಿಗೆ ಅಳವಡಿಸಿಕೊಂಡು ತೋಟವನ್ನು ಅಭಿವೃದ್ಧಿಪಡಿಸಿದ್ದಾರೆ. ಇವರ ತೋಟದಲ್ಲಿ ಸುಮಾರು 40ರಿಂದ 80 ಬಗೆಯ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಒಂದೇ ಬೆಳೆಯನ್ನು ಅವಲಂಬಿಸದೆ ಹಲವು ಬೆಳೆಗಳನ್ನು ಬೆಳೆಯುವುದರಿಂದ ಆದಾಯದ ಅಪಾಯವನ್ನು ಕಡಿಮೆ ಮಾಡಬಹುದು ಎಂಬುದು ಇವರ ನಂಬಿಕೆ.
ಕೃಷಿಯಲ್ಲಿ ರಾಸಾಯನಿಕ ಗೊಬ್ಬರ ಮತ್ತು ಔಷಧಗಳ ಅತಿಯಾದ ಬಳಕೆಯಿಂದ ಮಣ್ಣಿನ ಗುಣಮಟ್ಟದ ಮೇಲೆ ಪರಿಣಾಮ ಉಂಟಾಗುತ್ತಿದೆ ಎಂಬ ಆತಂಕವನ್ನು ವಿರೂಪಾಕ್ಷ ಮೂರ್ತಿ ವ್ಯಕ್ತಪಡಿಸುತ್ತಾರೆ. ಹಿಂದಿನ ಕಾಲದಲ್ಲಿ ಆಹಾರ ಉತ್ಪಾದನೆ ಹೆಚ್ಚಿಸುವ ಅನಿವಾರ್ಯತೆ ಇದ್ದುದರಿಂದ ರಾಸಾಯನಿಕ ಕೃಷಿಗೆ ಆದ್ಯತೆ ನೀಡಲಾಯಿತು. ಆದರೆ ಈಗಿನ ಪರಿಸ್ಥಿತಿಯಲ್ಲಿ ಮಣ್ಣಿನ ಆರೋಗ್ಯ ಮತ್ತು ಜನರ ಆಹಾರದ ಗುಣಮಟ್ಟದ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎನ್ನುತ್ತಾರೆ.
ಸಾವಯವ ಕೃಷಿಯ ಮೂಲಕ ಭೂಮಿಯ ನೈಸರ್ಗಿಕ ಗುಣವನ್ನು ಉಳಿಸಿಕೊಳ್ಳುವುದರ ಜೊತೆಗೆ ಆರೋಗ್ಯಕರ ಆಹಾರ ಉತ್ಪಾದನೆಗೆ ಒತ್ತು ನೀಡಬೇಕು ಎಂಬುದು ಅವರ ಅಭಿಪ್ರಾಯ.
ರೈತರು ಒಂದೇ ಬೆಳೆಯನ್ನು ಹೆಚ್ಚಾಗಿ ಬೆಳೆದಾಗ ಮಾರುಕಟ್ಟೆಯಲ್ಲಿ ಪೂರೈಕೆ ಹೆಚ್ಚಾಗಿ ಬೆಲೆ ಕುಸಿಯುವ ಸಾಧ್ಯತೆ ಇರುತ್ತದೆ. ಉದಾಹರಣೆಗೆ, ಎಲ್ಲರೂ ಟೊಮೆಟೊ ಬೆಳೆದರೆ ಬೇಡಿಕೆಗಿಂತ ಪೂರೈಕೆ ಹೆಚ್ಚಾಗಿ ರೈತರಿಗೆ ನಷ್ಟವಾಗಬಹುದು. ಹೀಗಾಗಿ ತಮ್ಮ ಜಮೀನಿನಲ್ಲಿ ವಿವಿಧ ಬೆಳೆಗಳನ್ನು ಬೆಳೆಯುವ ಮೂಲಕ ಆದಾಯದ ಮೂಲಗಳನ್ನು ಹೆಚ್ಚಿಸಿಕೊಂಡಿದ್ದಾರೆ.
ಒಂದು ಬೆಳೆಗೆ ಉತ್ತಮ ಬೆಲೆ ಸಿಗದಿದ್ದರೂ ಮತ್ತೊಂದು ಬೆಳೆ ಕೈಹಿಡಿಯಬಹುದು. ಸೀಮಿತ ಭೂಮಿಯಲ್ಲಿ ಹೆಚ್ಚು ಉತ್ಪಾದನೆ ಪಡೆಯಲು ಸಾಂದ್ರ ಕೃಷಿ ಸಹಕಾರಿಯಾಗಿದೆ ಎನ್ನುವುದು ಅವರ ಅನುಭವ.
ವಿರೂಪಾಕ್ಷ ಮೂರ್ತಿ ಅವರ ಜೀವನ ಪಯಣವೂ ಅಷ್ಟೇ ವಿಶೇಷ. ಬಡತನದ ನಡುವೆಯೂ ವಿದ್ಯಾಭ್ಯಾಸ ಮುಂದುವರಿಸಿದ ಅವರು ಕೆಪಿಎಸ್‌ಸಿ ಮತ್ತು ಯುಪಿಎಸ್‌ಸಿ ಪರೀಕ್ಷೆಗಳನ್ನು ಎದುರಿಸಿದ್ದರು. ಬಳಿಕ ಸಾರಿಗೆ ಇಲಾಖೆಯಲ್ಲಿ ಕೆಲಸಕ್ಕೆ ಸೇರಿ ಸುಮಾರು 30 ವರ್ಷ ಸೇವೆ ಸಲ್ಲಿಸಿದರು. ಕಚೇರಿ ಅಧೀಕ್ಷಕರ ಹುದ್ದೆಯವರೆಗೂ ಬಡ್ತಿ ಪಡೆದಿದ್ದರು. ನಿವೃತ್ತಿಗೆ ಇನ್ನೂ ಕೆಲವು ವರ್ಷಗಳು ಬಾಕಿ ಇರುವಾಗಲೇ ಸ್ವಯಂ ನಿವೃತ್ತಿ ಪಡೆದು ಕೃಷಿಯಲ್ಲಿ ಏನಾದರೂ ಸಾಧಿಸಬೇಕೆಂಬ ಉದ್ದೇಶದಿಂದ ತಮ್ಮ ಜಮೀನಿಗೆ ಮರಳಿದರು.
ಇವರ ಕೃಷಿ ಸಾಧನೆಯನ್ನು ಗುರುತಿಸಿ 2023ರ ಆಗಸ್ಟ್ 15ರಂದು ದೆಹಲಿಯ ಕೆಂಪುಕೋಟೆಯಲ್ಲಿ ನಡೆದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಹ್ವಾನಿಸಿ ಗೌರವಿಸಲಾಯಿತು. ಮಂಡ್ಯ ಜಿಲ್ಲೆಯಿಂದ ಆಯ್ಕೆಯಾದ ರೈತರಾಗಿ ಈ ಗೌರವ ಪಡೆದಿರುವುದು ಅವರಿಗೆ ಹೆಮ್ಮೆಯ ಸಂಗತಿ.
71ನೇ ವಯಸ್ಸಿನಲ್ಲಿಯೂ ಕಾರ್ಮಿಕರೊಂದಿಗೆ ತೋಟದಲ್ಲಿ ಕೆಲಸ ಮಾಡುವ ವಿರೂಪಾಕ್ಷ ಮೂರ್ತಿ, ಕೃಷಿ ಎಂದರೆ ಕೇವಲ ಉದ್ಯೋಗವಲ್ಲ, ಅದು ಜವಾಬ್ದಾರಿ ಮತ್ತು ಬದುಕಿನ ಭಾಗ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಡಿಮೆ ಭೂಮಿಯಲ್ಲಿಯೂ ವಿಭಿನ್ನ ಬೆಳೆಗಳ ಮೂಲಕ ಕೃಷಿಯನ್ನು ಲಾಭದಾಯಕವಾಗಿಸಬಹುದು ಎಂಬ ಅವರ ಪ್ರಯತ್ನ ಇತರ ರೈತರಿಗೂ ಮಾದರಿಯಾಗಿದೆ.