ಮಂಡ್ಯ : ಕಟ್ಟೆದೊಡ್ಡಿ ಗ್ರಾಮದಲ್ಲಿ ಬೀಡು ಬಿಟ್ಟ ಗಜಪಡೆ

By Kannadaprabha NewsFirst Published Oct 4, 2023, 8:38 AM IST
Highlights

ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೋಮವಾರ ಪ್ರತ್ಯಕ್ಷಗೊಂಡಿದ್ದ ಕಾಡಾನೆಗಳು ಕಟ್ಟೆದೊಡ್ಡಿ ಗ್ರಾಮದ ಬಳಿ ಬೀಡು ಬಿಟ್ಟಿವೆ.

  ಮಂಡ್ಯ :  ತಾಲೂಕಿನ ಚಿಕ್ಕಮಂಡ್ಯ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಸೋಮವಾರ ಪ್ರತ್ಯಕ್ಷಗೊಂಡಿದ್ದ ಕಾಡಾನೆಗಳು ಕಟ್ಟೆದೊಡ್ಡಿ ಗ್ರಾಮದ ಬಳಿ ಬೀಡು ಬಿಟ್ಟಿವೆ.

ಮದ್ದೂರಿನ ಕೋಡಿಹಳ್ಳಿ ಬಳಿ ಸೆಪ್ಟೆಂಬರ್ 25ರಂದು ಕಾಣಿಸಿಕೊಂಡ ಕಾಡಾನೆಗಳು ಒಂದು ವಾರದಿಂದ ಮದ್ದೂರು ಮತ್ತು ಮಂಡ್ಯ ತಾಲೂಕಿನ ವಿವಿಧೆಡೆ ರೈತರ ಜಮೀನುಗಳ ಮೇಲೆ ದಾಳಿ ಮಾಡುತ್ತಿವೆ.

Latest Videos

ನೆನ್ನೆ ಸಂಜೆಯಿಂದಲೇ ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ಕೈಗೊಂಡಿದ್ದರು. ರಾತ್ರಿಯಿಂದ ಮುಂಜಾನೆ 3 ಗಂಟೆವರೆಗೆ ಆನೆ ಕಾಡಿಗಟ್ಟಲು ವಿಶೇಷ ಡ್ರೋನ್ ಮೂಲಕ ಕಾರ್ಯಾಚರಣೆ ನಡೆಸಲಾಯಿತು.

ಆನೆಗಳು ಮಾತ್ರ ಕೇವಲ 10 ಕಿ.ಮೀ ದೂರದ ಕಟ್ಟೆದೊಡ್ಡಿ ಗ್ರಾಮದವರೆಗೆ ತಲುಪಲು ಸಾಧ್ಯವಾಗಿದೆ. ಚಿಕ್ಕಮಂಡ್ಯದಿಂದ ಬೂದನೂರು ವರೆಗೂ ಕಾರ್ಯಾಚರಣೆ ನಡೆಸಿದ್ದ ಅಧಿಕಾರಿಗಳ ತಂಡ ಇದೀಗ ಕಟ್ಟೇದೊಡ್ಡಿಯ ಕಬ್ಬಿನ ಗದ್ದೆಯಲ್ಲೆ ಬೀಡು ಬಿಡುವಂತೆ ಮಾಡಿದ್ದಾರೆ. ಆನೆಗಳು ಮತ್ತೆ ಕಾಡಿಗೆ ಹೋಗಲು ಸತಾಯಿಸುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ತಲೆನೋವಾಗಿದೆ.

ತಾಲೂಕಿನ ಬೂದನೂರು ರೇಲ್ವೆ ಟ್ರಾಕ್ ಬಳಿ ಆನೆಗಳು ಕೆಲಕಾಲ ಇದ್ದ ಕಾರಣ ಕಾರ್ಯಾಚರಣೆಗೆ ಕೆಲಕಾಲ ತಡೆ ಉಂಟಾಗಿದೆ. ಕಟ್ಟೆದೊಡ್ಡಿಯಲ್ಲೇ ಅರಣ್ಯ ಅಧಿಕಾರಿಗಳು ಬೀಡು ಬಿಟ್ಟು ಆನೆಗಳ ಚಲನವಲನಗಳನ್ನು ಗಮನಿಸುತ್ತಿದ್ದಾರೆ. ಬೆಂಗಳೂರು - ಮೈಸೂರು ಹೆದ್ದಾರಿ ಪಕ್ಕದಲ್ಲೇ ಕಟ್ಟೇದೊಡ್ಡಿ ಗ್ರಾಮವಿದ್ದು, ಆನೆಗಳು ಮತ್ತೆ ಮಂಡ್ಯ ನಗರದತ್ತ ಕದಲದಂತೆ ಎಚ್ಚರ ವಹಿಸಿದ್ದಾರೆ.

ಕಾಡಾನೆಗಳು ತೆರಳುತ್ತಿರುವ ಸ್ಥಳಗಳಲ್ಲಿ ಜನರು ಆನೆ ನೋಡಲು ಮುಗಿಬಿಳುತ್ತಿರುವುದರಿಂದ ಆನೆಗಳು ಕಾಡಿಗೆ ಹೋಗಲು ಬೆಚ್ಚುತ್ತಿವೆ ಎಂದು ಹೇಳಲಾಗಿದೆ. ಹಲವು ದಿನಗಳಿಂದ ಒಂದು ಹಳ್ಳಿಯಿಂದ ಮತ್ತೊಂದು ಹಳ್ಳಿಗೆ ಹೋಗುತ್ತಿರುವ ಆನೆಗಳು ನಿತ್ಯ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ಹಾನಿ ಮಾಡುತ್ತಿವೆ.

ರೈತನ ಕಬ್ಬಿಗೆ ಬೆಂಕಿ 10 ಗುಂಟೆ ಕಬ್ಬು ನಾಶ:

ಚಿಕ್ಕಮಂಡ್ಯದಿಂದ ಆನೆಗಳನ್ನು ಓಡಿಸುವಾಗ ತಾಲೂಕಿನ ದೇವೇಗೌಡರದೊಡ್ಡಿ ಗ್ರಾಮದ ರೈತ ಉಮೇಶ್ ಅವರ ಕಬ್ಬಿನ ಗದ್ದೆಗೆ ಆನೆಗಳು ಸೇರಿಕೊಂಡಿವೆ. ಈ ವೇಳೆ ಕಬ್ಬಿನ ಗದ್ದೆ ಸಮೀಪ ಆನೆಗಳನ್ನು ಓಡಿಸಲು ಪಟಾಕಿ ಸಿಡಿಸಿದಾಗ ಪಟಾಕಿ ಕಿಡಿ ಕಬ್ಬಿನ ಗದ್ದೆ ಬಿಟ್ಟು ಸುಮಾರು 10 ಗುಂಟೆ ಕಬ್ಬು ನಾಶವಾಗಿದೆ ಸಾವಿರಾರು ರು. ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಮಂಗಳವಾರ ಸಂಜೆ ಮತ್ತೆ ಕಾರ್ಯಾಚರಣೆ ನಡೆಸಿರುವ ಅರಣ್ಯಾಧಿಕಾರಿಗಳು, ಸಿಬ್ಬಂದಿಗಳು ಬುಧವಾರದ ಬೆಳಗ್ಗೆ ವೇಳೆ ಚನ್ನಪಟ್ಟಣದ ಅರಣ್ಯ ಪ್ರದೇಶ ಅಥವಾ ಮುತ್ತತ್ತಿ ಕಾಡಿಗೆ ಓಡಿಸಲಾಗುವುದು ಎಂದು ತಿಳಿಸಿದ್ದಾರೆ. 

click me!