ಮಂಡ್ಯದ ಹೊಸ ಬೂದನೂರಿನಲ್ಲಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ 17 ಕುರಿಗಳು ಮೃತಪಟ್ಟಿವೆ. ನಾಯಿಗಳು ಅಟ್ಟಾಡಿಸಿದ್ದರಿಂದ ಹಳಿ ದಾಟಲು ಯತ್ನಿಸಿದಾಗ ಈ ದುರ್ಘಟನೆ ಸಂಭವಿಸಿದೆ.
ಮಂಡ್ಯ (ಜ.30): ಮಂಡ್ಯದಲ್ಲಿ ದಾರುಣ ಘಟನೆ ನಡೆದಿದ್ದು, ಚಲಿಸುತ್ತಿದ್ದ ರೈಲಿಗೆ ಸಿಲುಕಿ 17 ಕುರಿಮರಿಗಳು ದಾರುಣ ಸಾವು ಕಂಡಿದೆ.ಮಂಡ್ಯ ತಾಲೂಕಿನ ಹೊಸ ಬೂದನೂರು ಬಳಿ ಗುರುವಾರ ಸಂಜೆ ಈ ಘಟನೆ ನಡೆದಿದೆ. ನಾಯಿಗಳು ಅಟ್ಟಾಡಿಸಿದ ವೇಳೆ ಕುರಿ ಮಂದೆ ಚದುರಿದೆ. ಈ ವೇಳೆ ಪಕ್ಕದಲ್ಲಿಯೇ ಇದ್ದ ರೈಲ್ವೇ ಹಳಿಯನ್ನು ದಾಟಲು 17 ಕುರಿಗಳು ಯತ್ನ ಮಾಡಿದ್ದವು. ಈ ಹಂತದಲ್ಲಿ ವೇಗವಾಗಿ ಬಂದ ರೈಲು ಈ ಕುರಿಗಳಿಗೆ ಢಿಕ್ಕಿ ಹೊಡೆದಿವೆ. ಢಿಕ್ಕಿ ಹೊಡೆದ ರಭಸಕ್ಕೆ ಕುರಿಗಳು ದಿಕ್ಕಾಪಾಲಾಗಿದ್ದು, ಎಲ್ಲಾ 17 ಕುರಿಗಳೂ ಸಾವು ಕಂಡಿವೆ. ಹೊಸಬೂದನೂರು ಜಯಮ್ಮ ಅವರಿಗೆ ಸೇರಿದ ಕುರಿಗಳು ಇವಾಗಿದ್ದು, ಸುಮಾರು 2 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವಾಗಿದೆ ಎನ್ನಲಾಗಿದೆ. ಕುರಿ ಮಂದೆ ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಪೊಲೀಸ್ ಅಧಿಕಾರಿಗಳ ಭೇಟಿ, ಪರಿಶೀಲನೆ ಮಾಡಿದ್ದಾರೆ. ಜಯಮ್ಮ ಅವರು ಬಯಲಿನಲ್ಲಿ ಕುರಿಗಳನ್ನು ಮೇಯಿಸಿಕೊಂಡು ಮನೆಗೆ ವಾಪಸ್ ಆಗುತ್ತಿದ್ದ ವೇಳೆ ನಾಯಿಗಳು ಅಟ್ಟಾಡಿಸಿದಾಗ ಚದುರಿದ ಕುರಿಗಳು ರೈಲಿಗೆ ಸಿಲುಕಿ ಮೃತಪಟ್ಟಿವೆ. ಘಟನೆಯ ಸುದ್ದಿ ತಿಳಿದ ಶಾಸಕ ಪಿ.ರವಿಕುಮಾರ್ ಗೌಡ ಅವರು ಕುರಿಗಳನ್ನು ಕಳೆದುಕೊಂಡು ನಷ್ಟಕ್ಕೀಡಾಗಿರುವ ಜಯಮ್ಮ ಅವರಿಗೆ ವೈಯಕ್ತಿಕವಾಗಿ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ.