
ಬೆಂಗಳೂರಿನಲ್ಲಿ ಕೌಟುಂಬಿಕ ಕಲಹವಾಗಿದೆ. ಹೀಗಾಗಿ ಅಣ್ಣನ ಮನೆಗೆ ಬೆಂಕಿ ಹಚ್ಚಬೇಕು ಎಂದು ಯತ್ನಿಸಿದ ವ್ಯಕ್ತಿಯೊಬ್ಬ, ಆಕಸ್ಮಿಕವಾಗಿ ತನಗೇ ಬೆಂಕಿ ತಗುಲಿಸಿಕೊಂಡು ಸುಟ್ಟ ಗಾಯಗಳಿಂದ ನರಳುತ್ತಿದ್ದಾನೆ.
ಮಾಡಿದ್ದ ಸಾಲ ತೀರಿಸಬೇಕಿತ್ತು, ಅದಕ್ಕೆ ಜಮೀನು ಮಾರಬೇಕಿತ್ತು. ಆದರೆ ಅಣ್ಣ ಜಮೀನು ಮಾರಲು ಒಪ್ಪಲಿಲ್ಲ. ಹೀಗಾಗಿ ಸ್ವಂತ ತಮ್ಮನೇ ರಾತ್ರಿಯ ಹೊತ್ತು ಅಣ್ಣನ ಮನೆಗೆ ಕಿಡಕಿಯಿಂದ ಬೆಂಕಿ ಹಚ್ಚಲು ನೋಡಿದ್ದಾನೆ. ಪೆಟ್ರೋಲ್ ತಂದು ಕಿಡಕಿಯೊಳಗಡೆ ಎರಚಿದ್ದಾನೆ. ಬೆಂಕಿ ಹಚ್ಚಲು ಹೋದಾಗ ಬೆಂಕಿ ತಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾನೆ. ಈ ಘಟನೆಯು ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ.
ಅಣ್ಣನ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚುವಾಗ, ಬೆಂಕಿಯ ಜ್ವಾಲೆಯು ಅಚಾನಕ್ಕಾಗಿ ಆತನ ಮೈಮೇಲೆ ಹರಡಿದೆ. ಇದರಿಂದಾಗಿ ಅಣ್ಣನ ಮನೆಗೆ ಹಾನಿ ಮಾಡೋ ಮುನ್ನ, ಅವನಿಗೆ ಅವನೇ ತೊಂದರೆ ತಂದುಕೊಂಡಿದ್ದಾನೆ. ಬೆಂಕಿಯಿಂದಾಗಿ ವ್ಯಕ್ತಿಗೆ ಗಂಭೀರ ಸ್ವರೂಪದ ಸುಟ್ಟ ಗಾಯಗಳಾಗಿದ್ದು, ಆತನೀಗ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಖಾಸಗಿ ಕಂಪನಿಯಲ್ಲಿ ಮುನಿರಾಜು ಎನ್ನುವವರು ಕೆಲಸ ಮಾಡುತ್ತಿದ್ದರು. ಈತನ ಅಣ್ಣ ರಾಮಕೃಷ್ಣ ಕ್ಯಾಬ್ ಓಡಿಸುತ್ತಿದ್ದರು. ಮುನಿರಾಜು ಕಳೆದ 8 ವರ್ಷಗಳಿಂದ ಖಾಸಗಿ ಕಂಪನಿ ಕೆಲಸದ ಜೊತೆಗೆ, ಊರಿನ ಜನರ ಜೊತೆ ಚೀಟಿ ವ್ಯವಹಾರ ಮಾಡುತ್ತಿದ್ದರು. ಆದರೆ 2 ವರ್ಷಗಳಿಂದ ಪಟಾಕಿ ಚೀಟಿಯಲ್ಲಿ ನಷ್ಟವುಂಟಾಗಿ, ಹಣ ಕೊಟ್ಟ ಗ್ರಾಮಸ್ಥರು ಪ್ರತಿ ದಿನ ಮನೆಗೆ ಬಂದು ಹಣ ಕೊಡಿ ಎಂದು ಪೀಡಿಸುತ್ತಿದ್ದರು. ಹೀಗಾಗಿ ಮನೆಯಲ್ಲಿದ್ದ ಒಡವೆಗಳು, ಸೈಟ್ ಮಾರಿದರೂ ಕೂಡ ಸಾಲ ತೀರಿಲ್ಲ. ಜಮೀನು ಮಾರೋಣವೆಂದು ಮನೆಯಲ್ಲಿ ತನ್ನ ತಂದೆ ಹಾಗೂ ಅಣ್ಣನನ್ನು ಪೀಡಿಸಿ, ಗಲಾಟೆಯನ್ನು ಮಾಡಿದ್ದನು.
ಜನವರಿ 5ರ ಸೋಮವಾರ ರಾತ್ರಿ 10 ಗಂಟೆ ವೇಳೆ ಅಣ್ಣ ರಾಮಕೃಷ್ಣ ಗೋವಿಂದಪುರ ಗ್ರಾಮದಲ್ಲಿ ಎಂದಿನಂತೆ ಊಟ ಮುಗಿಸಿ ಮಲಗಿದ್ದರು. ಆ ವೇಳೆ ತಮ್ಮ ಮುನಿರಾಜು, ಇವರನ್ನು ಕೊಂದಾದರೂ ಜಮೀನು ಮಾರಿ ಸಾಲ ತೀರಸಬೇಕು ಎಂದು ಸಂಚು ರೂಪಿಸಿದ್ದರು. ಕಳ್ಳನ ರೀತಿ ಮನೆಗೆ ಬಂದು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಇದು ಸಿಸಿಟಿವಿಯಲ್ಲಿ ರೆಕಾರ್ಡ್ ಆದಂತಿದೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.
ಬೆಂಕಿ ಹಚ್ಚುವ ವೇಳೆ ಮುನಿರಾಜು ದೇಹಕ್ಕೆ ಬೆಂಕಿ ತಗುಲಿ ಕಿರುಚಾಡಿದ್ದಾನೆ. ತಕ್ಷಣ ಅಕ್ಕಪಕ್ಕದವರು ಎಚ್ಚರಗೊಂಡು ಬೆಂಕಿ ನಂದಿಸಿ ಮುನಿರಾಜುನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮನೆಯಲ್ಲಿದ್ದ ಮಲಗಿದ್ದ ರಾಮಕೃಷ್ಣ, ಆತನ ಹೆಂಡತಿ, ಮಗಳಿಗೂ ಸಣ್ಣ ಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಕೊಲೆ ಸಂಚು ರೂಪಿಸಿದ ತಮ್ಮನ ಮೇಲೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ. ಇನ್ನೊಬ್ಬರಿಗೆ ಕೇಡು ಬಯಸಿ ಮಾಡಿದ ಕೆಲಸವು, ಅಂತಿಮವಾಗಿ ಆರೋಪಿಯ ಮೇಲೆಯೇ ತಿರುಗುಬಾಣವಾದ ಘಟನೆ ಇದಾಗಿದೆ.