
ಬೆಂಗಳೂರು: ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ತನ್ನ ನೆರೆಮನೆಯ ಆರು ವರ್ಷದ ಬಾಲಕಿಯನ್ನು ಅಪಹರಿಸಿ ಅಮಾನುಷವಾಗಿ ಕೊಲೆ ಮಾಡಿ, ಮೃತದೇಹವನ್ನು ರಸ್ತೆ ಬದಿಯಲ್ಲಿ ಎಸೆದು ಪರಾರಿಯಾಗಿದ್ದ ಚಿಂದಿ ಆಯುವ ವ್ಯಕ್ತಿಯನ್ನು ವೈಟ್‌ಫೀಲ್ಡ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಹತ್ಯೆಗೆ ಬಲಿಯಾದ ಬಾಲಕಿ ಶಹನ್ಹಾಝ್ ಖತುನ್ ಎಂದು ಗುರುತಿಸಲಾಗಿದ್ದು, ಆಕೆ ಪಶ್ಚಿಮ ಬಂಗಾಳ ಮೂಲದ ಕೂಲಿ ಕಾರ್ಮಿಕ ದಂಪತಿ ಇಜಾಮುಲ್ ಶೇಖ್ ಅವರ ಪುತ್ರಿ. ಈ ಭೀಕರ ಕೃತ್ಯ ಎಸಗಿ ಪರಾರಿಯಾಗಿದ್ದ ಆರೋಪಿ ಯೂಸೆಫ್ ಅಲಿಯಾಸ್ ಕಬೀರ್ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇಜಾಮುಲ್ ಶೇಖ್ ಹಾಗೂ ಯೂಸೆಫ್ ಇಬ್ಬರೂ ಮೂಲತಃ ಪಶ್ಚಿಮ ಬಂಗಾಳ ರಾಜ್ಯದವರಾಗಿದ್ದು, ಕೆಲ ದಿನಗಳ ಹಿಂದೆ ಕೂಲಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ವೈಟ್‌ಫೀಲ್ಡ್ ವ್ಯಾಪ್ತಿಯ ನೆಲ್ಲೂರಹಳ್ಳಿಯ ಲೇಬರ್ ಶೆಡ್‌ಗಳಲ್ಲಿ ನೆರೆಹೊರೆಯಲ್ಲೇ ವಾಸವಾಗಿದ್ದು, ಇಬ್ಬರೂ ಚಿಂದಿ ಆಯ್ದು ಜೀವನ ಸಾಗಿಸುತ್ತಿದ್ದರು. ಕಳೆದ ಕೆಲವು ದಿನಗಳಿಂದ ವೈಯಕ್ತಿಕ ವಿಷಯಗಳಿಗೆ ಸಂಬಂಧಿಸಿದಂತೆ ಆರೋಪಿ ಯೂಸೆಫ್ ಹಾಗೂ ಬಾಲಕಿ ತಾಯಿ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸಣ್ಣಪುಟ್ಟ ವಿಚಾರಗಳು ದೊಡ್ಡ ಗಲಾಟೆಗೆ ತಿರುಗಿದ್ದು, ಈ ವೈಮನಸ್ಸೇ ಭೀಕರ ಅಪರಾಧಕ್ಕೆ ಕಾರಣವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸೋಮವಾರ ಮಧ್ಯಾಹ್ನ ಮನೆ ಬಳಿ ಆಟವಾಡುತ್ತಿದ್ದ ಆರು ವರ್ಷದ ಬಾಲಕಿಯನ್ನು ಆರೋಪಿ ಯೂಸೆಫ್ ಅಪಹರಿಸಿದ್ದಾನೆ. ಬಳಿಕ ಆಕೆಯನ್ನು ಒಂಟಿ ಸ್ಥಳಕ್ಕೆ ಕರೆದೊಯ್ದು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಮೃತದೇಹವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಸುತ್ತಿ, ನೆಲ್ಲೂರಹಳ್ಳಿಯ ದೇವಾಲಯದ ರಸ್ತೆಯ ಬದಿಯಲ್ಲಿ ಎಸೆದು ಆರೋಪಿ ಪರಾರಿಯಾಗಿದ್ದಾನೆ.
ಸಂಜೆಯಾದರೂ ಮಗಳು ಮನೆಗೆ ಮರಳದೇ ಇದ್ದುದರಿಂದ ಆತಂಕಗೊಂಡ ಪೋಷಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ. ಎಲ್ಲೆಡೆ ಹುಡುಕಿದರೂ ಬಾಲಕಿ ಪತ್ತೆಯಾಗದ ಹಿನ್ನೆಲೆಯಲ್ಲಿ, ಮಂಗಳವಾರ ವೈಟ್‌ಫೀಲ್ಡ್ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ದೂರು ಸ್ವೀಕರಿಸಿದ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸ್ಥಳೀಯವಾಗಿ ಹುಡುಕಾಟ ನಡೆಸಿದಾಗ, ಮಂಗಳವಾರ ರಾತ್ರಿ ನೆಲ್ಲೂರಹಳ್ಳಿಯ ರಸ್ತೆ ಬದಿಯಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ. ಈ ದೃಶ್ಯ ಕಂಡು ಸ್ಥಳದಲ್ಲಿ ಶೋಕ ಮತ್ತು ಆಕ್ರೋಶದ ವಾತಾವರಣ ನಿರ್ಮಾಣವಾಯಿತು.
ಘಟನೆ ಬೆಳಕಿಗೆ ಬಂದ ತಕ್ಷಣವೇ ವೈಟ್‌ಫೀಲ್ಡ್ ಉಪವಿಭಾಗದ ಎಸಿಪಿ ರೀನಾ ಸುವರ್ಣ ಅವರ ನೇತೃತ್ವದಲ್ಲಿ, ಇನ್ಸ್‌ಪೆಕ್ಟರ್ ಗುರುಪ್ರಸಾದ್ ಸೇರಿದಂತೆ ವಿಶೇಷ ಪೊಲೀಸ್ ತಂಡ ರಚಿಸಿ ಆರೋಪಿಗಾಗಿ ಶೋಧ ಕಾರ್ಯ ಆರಂಭಿಸಲಾಯಿತು. ಹತ್ಯೆ ಎಸಗಿ ಯೂಸೆಫ್ ರಾತ್ರೋರಾತ್ರಿ ನಗರ ತೊರೆಯಲು ಯತ್ನಿಸುತ್ತಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು, ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪ್ರಾಥಮಿಕ ತನಿಖೆಯಲ್ಲಿ ನೆರೆಹೊರೆಯ ಜಗಳ ಹಾಗೂ ವೈಯಕ್ತಿಕ ದ್ವೇಷವೇ ಈ ಹತ್ಯೆಗೆ ಕಾರಣ ಎನ್ನುವುದು ದೃಢಪಟ್ಟಿದೆ. ಆದರೆ ಆರೋಪಿಯನ್ನು ಇನ್ನಷ್ಟು ವಿಚಾರಣೆ ನಡೆಸಿದ ಬಳಿಕ, ಕೊಲೆಗೆ ನಿಖರ ಕಾರಣ ಮತ್ತು ಇತರ ಅಂಶಗಳು ಸ್ಪಷ್ಟವಾಗಲಿವೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವರ್ಷದ ಏನೂ ಅರಿಯದ ಕಂದಮ್ಮನ ಹತ್ಯೆ ಪ್ರಕರಣವು ನಗರದಲ್ಲಿ ತೀವ್ರ ಆಕ್ರೋಶ ಮತ್ತು ಆತಂಕ ಮೂಡಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು ಎಂಬ ಒತ್ತಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ.