Haveri: ಒಂದು ಕಿಲೋಮೀಟರ್ ನೀರಲ್ಲಿ ತೇಲಿ, ಗಿಡಗಂಟಿ ಹಿಡಿದು ಬದುಕಿತು ಬಡ ಜೀವ

By Gowthami K  |  First Published Aug 14, 2022, 7:15 PM IST

ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕುಮದ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ. ಯಡಗೋಡ ಗ್ರಾಮದ ಬಳಿ ನದಿಯಲ್ಲಿ ಸಿಲುಕಿದ್ದ ತಾಲೂಕಿನ ಹಿರೇಮೊರಬ ಗ್ರಾಮದ ಹ ಹಾಲಪ್ಪ ಕೆಳಗಿನಮನಿ(50) ಅವರನ್ನು ರಕ್ಷಿಸಲಾಗಿದೆ.


ವರದಿ; ಪವನ್ ಕುಮಾರ್ , ಏಷ್ಯಾನೆಟ್ ಸುವರ್ಣ ನ್ಯೂಸ್

ಹಾವೇರಿ (ಆ.14): ಆಕಸ್ಮಿಕವಾಗಿ ಕಾಲುಜಾರಿ ಬಿದ್ದು ಕುಮದ್ವತಿ ನದಿಯಲ್ಲಿ ಕೊಚ್ಚಿಕೊಂಡು ಹೋಗಿದ್ದ ವ್ಯಕ್ತಿಯನ್ನು ಶನಿವಾರ ರಕ್ಷಣೆ ಮಾಡಲಾಗಿದೆ. ಯಡಗೋಡ ಗ್ರಾಮದ ಬಳಿ ನದಿಯಲ್ಲಿ ಸಿಲುಕಿದ್ದ ತಾಲೂಕಿನ ಹಿರೇಮೊರಬ ಗ್ರಾಮದ ಹ ಹಾಲಪ್ಪ ಕೆಳಗಿನಮನಿ(50) ಅವರನ್ನು ರಕ್ಷಿಸಲಾಗಿದೆ. ಶುಕ್ರವಾರ ಸಂಜೆ ತಾಲೂಕಿನ ಹಿರೇಮಾದಾಪುರ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದರು ಎಂದು ಹೇಳಲಾಗುತ್ತಿದ್ದು ಈ ವೇಳೆ ಸಮೀಪದಲ್ಲಿರುವ ನದಿ ಕಡೆಗೆ ಹೋದಾಗ ಕಾಲು ತೊಳೆದುಕೊಳ್ಳುವ ವೇಳೆ ಕಾಲುಜಾರಿದೆ. ನದಿಯಲ್ಲಿ 1ಕಿಮೀ ನಷ್ಟು ಕೊಚ್ಚಿಕೊಂಡು  ಹೋಗಿ ಯಡಗೋಡ ಗ್ರಾಮದ ಬಳಿ ಕುಮದ್ವತಿ ನದಿಯ ನಡುಗಡ್ಡೆಯಲ್ಲಿ ಗಿಡಗಂಟೆ ಹಿಡಿದು ನಿಂತಿದ್ದಾರೆ. ಶನಿವಾರ ಬೆಳಿಗ್ಗೆ 10 ಗಂಟೆಗೆ ಯಡಗೋಡ ಗ್ರಾಮದ ರೈತ ಸಿದ್ದನಗೌಡ ಚನ್ನಪ್ಪನವರ ನದಿ ದಂಡೆಯಲ್ಲಿರುವ ತಮ್ಮ ಜಮೀನಿಗೆ ಬಂದಾಗ ರಕ್ಷಣೆ ಮಾಡುವಂತೆ ಕೂಗಿದ್ದಾರೆ. ಕೂಗಾಟ ಕೇಳಿದ ರೈತ ತಕ್ಷಣ ಹೊಲದಿಂದ ಗ್ರಾಮಕ್ಕೆ ಬಂದು ಗ್ರಾಮಸ್ಥರಿಗೆ ಮಾಹಿತಿ ನೀಡಿದ್ದಾರೆ. ಜನರು ನದಿಯತ್ತ ಬಂದಿದ್ದಾರೆ. ನದಿಯಲ್ಲಿದ್ದ ವ್ಯಕ್ತಿ ತನ್ನ ಗ್ರಾಮದ ಹೆಸರು ಮತ್ತು ತನ್ನ ಹೆಸರನ್ನು ಕೂಗಿ ಹೇಳಿದ್ದಾನೆ. ಆಗ ಜನರು ಪೊಲೀಸರಿಗೆ ಮತ್ತು ಹಿರೇಮೊರಬ ಗ್ರಾಮಕ್ಕೆ ಮಾಹಿತಿ ನೀಡಿದ್ದಾರೆ. 

Latest Videos

undefined

ಸ್ಥಳಕ್ಕೆ ಆಗಮಿಸಿದ ರಟ್ಟೀಹಳ್ಳಿ ಪೊಲೀಸ್ ಠಾಣೆಯ ಪಿಎಸ್‌ಐ ಕೃಷ್ಣಪ್ಪ ತೋಪಿನ ಹಾಗೂ ತಹಸೀಲ್ದಾರ್ ಅರುಣಕುಮಾರ ಆ ಕಾರಗಿ ಅವರು ಮೀನುಗಾರರಾದ ಸ್ಥಳೀಯ - ಫಕ್ಕೀರಸಾಬ ಮೇಗಳಮನಿ ಹಾಗೂ ರಮೇಶ ನಾಯ್ಕರ ಅವರ ಸಹಾಯ ಪಡೆದು ತೆಪ್ಪದ ಮೂಲಕ ನಡುಗಡ್ಡೆಯಲ್ಲಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಿದ್ದಾರೆ. ಪ್ರಾಣಾಪಾಯದಿಂದ ಹಾಲಪ್ಪ ಪಾರಾಗಿದ್ದಾರೆ. ರಾತ್ರಿಯಿಂದ ಆಹಾರವಿಲ್ಲದೇ ಅಸ್ವಸ್ಥವಾಗಿದ್ದ ಹಾಲಪ್ಪ ಅವರನ್ನು ತಕ್ಷಣ ರಟ್ಟಿಹಳ್ಳಿ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಅತಿವೃಷ್ಟಿಯಿಂದ 324 ಕೋಟಿ ಹಾನಿ
ಹಾವೇರಿ: ಪ್ರಸಕ್ತ ಮುಂಗಾರಿನ ಅತಿವೃಷ್ಟಿಯಿಂದ ಈವರೆಗೆ ಜಿಲ್ಲೆಯಲ್ಲಿ .324 ಕೋಟಿ ಮೊತ್ತದ ಆಸ್ತಿಪಾಸ್ತಿ ಹಾನಿಯಾಗಿದೆ. 43 ಸಾವಿರ ಹೆಕ್ಟೇರ್‌ ಕೃಷಿ, ತೋಟಗಾರಿಕಾ ಬೆಳೆ ಹಾನಿಯಾಗಿದೆ.ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ .34.30 ಕೋಟಿ ಪರಿಹಾರದ ಮೊತ್ತವಾಗುತ್ತದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು,ಈಗಾಗಲೇ ಕಳೆದ ಎರಡು ದಿನದಿಂದ ಮಳೆ ಕಡಿಮೆಯಾಗಿದೆ. ಬೆಳೆಹಾನಿ ಸರ್ವೇಗೆ ಕೃಷಿ,ಕಂದಾಯ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ತಂಡಗಳನ್ನು ರಚಿಸಿ ಸರ್ವೇ ಕಾರ್ಯಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.

ಜಿಲ್ಲೆಯಲ್ಲಿ 4,440 ಮನೆಗಳು ಹಾನಿಯಾಗಿರುವ ಕುರಿತಂತೆ ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಈ ಪೈಕಿ 2,540 ಪ್ರಕರಣಗಳನ್ನು ಕಂದಾಯ ಇಲಾಖೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು, ಎಂಜಿನೀಯರ ತಂಡ ಪರಿಶೀಲನೆ ನಡೆಸಿದೆ. 1,870 ಅರ್ಜಿಗಳು ಪರಿಶೀಲನೆಗೆ ಬಾಕಿ ಉಳಿದಿವೆ. ಮಳೆ ನಿಂತರೂ ಈಗಲೂ ಮನೆಹಾನಿ ಕುರಿತಂತೆ ಅರ್ಜಿಗಳು ಬಂದರೆ ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಲಾಗುವುದು.ಒಂದೊಮ್ಮೆ ಅರ್ಜಿಗಳು ಬರದಿದ್ದರೂ ಸ್ಥಳೀಯ ಅಧಿಕಾರಿಗಳಿಗೆ ಹಾನಿ ಕುರಿತಂತೆ ಪರಿಶೀಲಿಸಿ ಮಾಹಿತಿಯನು ದಾಖಲಿಸುವಂತೆ ಸೂಚಿಸಲಾಗಿದೆ ಎಂದರು.

1407 ಪ್ರಕರಣಗಳಲ್ಲಿ ಈಗಾಗಲೇ ಪರಿಹಾರ ನೀಡಲಾಗಿದೆ. 23 ಪ್ರಕರಣಗಳು ಸಂಪೂರ್ಣ ಹಾನಿಯಾದ ಪ್ರಕರಣಗಳಾಗಿವೆ ಹಾಗೂ 1009 ಪ್ರಕರಣಗಳು ಬಿ2 ಪ್ರಕರಣಗಳಾಗಿವೆ. ಇವೆರಡೂ ಕೆಟಗರಿಯಲ್ಲಿ ತಲಾ .5 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿದ್ದಾರೆ. 122 ಪ್ರಕರಣಗಳು ಬಿ1 ವರ್ಗಕ್ಕೆ ಸೇರುತ್ತವೆ. ಇವರು .3 ಲಕ್ಷ ಪರಿಹಾರ ಪಡೆಯಲು ಅರ್ಹರಾಗಿರುತ್ತಾರೆ. 248 ಪ್ರಕರಣಗಳು ಸಿ ವರ್ಗಕ್ಕೆ ಸೇರಿದ್ದು, 50 ಸಾವಿರ ಪರಿಹಾರಕ್ಕೆ ಅರ್ಹರಾಗಿರುತ್ತಾರೆ ಎಂದರು.

ಮಳೆಯಿಂದ 1361 ಕಿಮೀ ಗ್ರಾಮೀಣ ರಸ್ತೆ, 97 ಕಿಮೀ ರಾಜ್ಯ ಹೆದ್ದಾರಿ, 318 ಕಿಮೀ ಜಿಲ್ಲಾ ಮುಖ್ಯರಸ್ತೆ, 2 ಟ್ರಾನ್ಸ್‌ಫರ್ಮರ್‌, 198 ವಿದ್ಯುತ್‌ ಪೋಲ್ಸ್‌ ಹಾಳಾಗಿವೆ. 19 ಸರ್ಕಾರಿ ಕಟ್ಟಡ, 971 ಪ್ರಾಥಮಿಕ ಶಾಲಾ ಕಟ್ಟಡ, 87 ಅಂಗನವಾಡಿ, 67 ಸೇತುವೆ, 18 ಸಣ್ಣ ನೀರಾವರಿ ಕೆರೆ,ಮೂರು ಕುಡಿಯುವ ನೀರಿನ ಘಟಕಗಳಿಗೆ ಹಾನಿಯಾಗಿದೆ. ಅಂದಾಜು 324 ಕೋಟಿ ಮೊತ್ತದ ನಷ್ಟಸಂಭವಿಸಿದೆ ಎಂದು ತಿಳಿಸಿದರು.

ಈಗಾಗಲೇ ಶಾಲಾ, ಅಂಗನವಾಡಿ ಕಟ್ಟಡಗಳ ದುರಸ್ತಿಗೆ 5.80 ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ 13 ಕೋಟಿ ಬೇಡಿಕೆ ಬಂದಿದೆ. ಅತಿವೃಷ್ಟಿಪ್ರವಾಹ ನಿರ್ವಹಣೆಗೆ ಯಾವುದೇ ಅನುದಾನದ ಕೊರತೆ ಇಲ್ಲ ಎಂದು ಮಾಹಿತಿ ನೀಡಿದರು. ಅಪರ ಜಿಲ್ಲಾಧಿಕಾರಿ ಡಾ.ಎನ್‌.ತಿಪ್ಪೇಸ್ವಾಮಿ, ಉಪವಿಭಾಗಾಧಿಕಾರಿ ಶಿವಾನಂದ ಉಳ್ಳಾಗಡ್ಡಿ ಇದ್ದರು.

click me!