ಮಂಗಳೂರಿನಲ್ಲಿ 100 ಮೀ. ರಾಷ್ಟ್ರಧ್ವಜದ ಜೊತೆ 28 ಕಿ.ಮೀ ನಡಿಗೆ!

By Gowthami KFirst Published Aug 14, 2022, 4:30 PM IST
Highlights

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ 100 ಮೀ. ಉದ್ದದ ಬೃಹತ್ ರಾಷ್ಟ್ರಧ್ವಜದ ಜೊತೆ ದಾಖಲೆಯ ಬರೋಬ್ಬರಿ 28 ಕಿ.ಮೀ ನಡಿಗೆ ಕಾರ್ಯಕ್ರಮ ನಡೆಯಿತು.

ವರದಿ: ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್

ಮಂಗಳೂರು (ಆ.14): 75 ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಮುಲ್ಕಿ-ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ 100 ಮೀ. ಉದ್ದದ ಬೃಹತ್ ರಾಷ್ಟ್ರಧ್ವಜದ ಜೊತೆ ದಾಖಲೆಯ ಬರೋಬ್ಬರಿ 28 ಕಿ.ಮೀ ನಡಿಗೆ ಕಾರ್ಯಕ್ರಮ ನಡೆಯಿತು. ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ರಾಷ್ಟ್ರಧ್ವಜದೊಂದಿಗೆ ಬೃಹತ್ ತಿರಂಗ ಯಾತ್ರೆ ಹಮ್ಮಿಕೊಳ್ಳಲಾಗಿತ್ತು.  100 ಮೀ. ತ್ರಿವರ್ಣ ಧ್ವಜ ಹಿಡಿದು ಬರೋಬ್ಬರಿ 28 ಕಿ.ಮೀ ನಡಿಗೆಯಲ್ಲಿ 5 ಸಾವಿರಕ್ಕೂ ಅಧಿಕ ದೇಶಭಕ್ತರು ಪಾಲ್ಗೊಂಡರು. ಸ್ವಾತಂತ್ರ್ಯ ಹೋರಾಟಗಾರ ಕಾರ್ನಾಡು ಸದಾಶಿವ ರಾಯರ ಊರಿನಿಂದ ವೀರ ರಾಣಿ ಅಬ್ಬಕ್ಕನ ಊರಾದ ಮೂಡಬಿದ್ರೆಗೆ ಯಾತ್ರೆ ಸಾಗಿತು.‌ ಮುಲ್ಕಿಯ ಬಪ್ಪನಾಡು ದೇವಸ್ಥಾನದಿಂದ ಮೂಡಬಿದ್ರೆಗೆ ತಿರಂಗ ಯಾತ್ರೆ ಹಮ್ಮಿಕೊಂಡಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ‌ನಳಿನ್ ಕುಮಾರ್ ಕಟೀಲ್ ಯಾತ್ರೆಗೆ ಚಾಲನೆ ನೀಡಿದರು. ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ನೇತೃತ್ವದಲ್ಲಿ ನಡೆದ ಈ ಯಾತ್ರೆಯಲ್ಲಿ 100  ಮೀ. ಉದ್ದದ ಬಾವುಟವನ್ನು ಎರಡೂ ಬದಿಯಲ್ಲಿ ಹಿಡಿದು ಸಾಗಲಾಯಿತು. ಕಿನ್ನಿಗೋಳಿ, ನಿಡ್ಡೋಡಿ, ಕಲ್ಲಮುಂಡ್ಕೂರು, ವಿದ್ಯಾಗಿರಿ ಮೂಲಕ ಯಾತ್ರೆ ಮೂಡಬಿದ್ರೆ ತಲುಪಿದೆ.

Latest Videos

ಯಾತ್ರೆ ಸಾಗುವ ದಾರಿಯಲ್ಲಿ ದೇಶ ಭಕ್ತರು ತಿರಂಗ ಯಾತ್ರೆ ಸ್ವಾಗತಿಸಿ ‌ಸಂಭ್ರಮಿಸಿದ್ದು, ಈ ವೇಳೆ ದೇಶದ ಸಂಸ್ಕೃತಿ ಮತ್ತು ಪರಂಪರೆ ಪರಿಚಯಿಸುವ ಪ್ರದರ್ಶನ ಆಯೋಜಿಸಲಾಗಿತ್ತು. ಇನ್ನು ಈ ಯಾತ್ರೆಯಲ್ಲಿ ಭಜನಾ ತಂಡಗಳು, ವಿವಿಧ ಟ್ಯಾಬ್ಲೋಗಳು ಹಾಗೂ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.

ಸೂರತ್ ನಿಂದ ತಂದ 100 ಮೀ. ಧ್ವಜ: ಇನ್ನು ತಿರಂಗ ಯಾತ್ರೆ ಹಿನ್ನೆಲೆಯಲ್ಲಿ ವಿಭಿನ್ನ ಕಾರ್ಯಕ್ರಮದ ಆಯೋಜನೆಯ ಪರಿಕಲ್ಪನೆ ಹಾಕಿಕೊಂಡು ಇಂಥದ್ದೊಂದು ಬೃಹತ್ ಧ್ವಜ ಸಿದ್ದಪಡಿಸಲಾಗಿದೆ. ಮೊದಲೇ ಆರ್ಡರ್ ಕೊಟ್ಟು ಸೂರತ್ ನಲ್ಲಿ ಈ ಬೃಹತ್ ಧ್ವಜ ತಯಾರಿಸಲಾಗಿದೆ. 100 ಮೀ ಉದ್ದ ಮತ್ತು 9.3 ಮೀ ಅಗಲದ ಬೃಹತ್ ರಾಷ್ಟ್ರಧ್ವಜ ಇದಾಗಿದ್ದು, ಮೂಡಬಿದ್ರೆ ಬಿಜೆಪಿ ‌ಮಂಡಲ ಮತ್ತು ಯುವಮೋರ್ಛಾ ಇದರ ಜವಾಬ್ದಾರಿ ಹೊತ್ತಿತ್ತು.

Har Ghar Tiranga: ಕೊಡಗಿನ ಮನೆ ಮನೆಗಳಲ್ಲಿ ರಾರಾಜಿಸಿದ ತ್ರಿವರ್ಣ ಧ್ವಜ

ಅಲ್ಲದೇ ಧ್ವಜದ ಗೌರವಕ್ಕೆ ಚ್ಯುತಿ ಬರದಂತೆ 28 ಕಿ.ಮೀ ಹಿಡಿದು ಸಾಗಬೇಕಾಗಿದ್ದು, ಹೀಗಾಗಿ ಮೊದಲೇ ಎಲ್ಲರಿಗೂ ಅಗತ್ಯ ಸೂಚನೆಗಳನ್ನ ನೀಡಲಾಗಿದೆ. ಅಲ್ಲದೇ ಸಾಗುವ ದಾರಿಯಲ್ಲಿ ಅಲ್ಲಲ್ಲಿ ಜನರು ಪುಷ್ಪಾರ್ಚಣೆ ಮೂಲಕ ಧ್ವಜವನ್ನು ಸ್ವಾಗತಿಸಿದ್ದಾರೆ.‌ ಇನ್ನು ಇಷ್ಟು ದೂರ, ಇಷ್ಟು ಉದ್ದದ ತಿರಂಗ ಯಾತ್ರೆ ರಾಜ್ಯದಲ್ಲೇ ಮೊದಲು ಎನ್ನುತ್ತಾರೆ ತಿರಂಗಾ ಯಾತ್ರೆ ಅಭಿಯಾನ ಸಮಿತಿ ಸಂಚಾಲಕ ಅಭಿಲಾಷ್ ಶೆಟ್ಟಿ ಕಟೀಲು.

ಬೆಳಗಾವಿ ಕೋಟೆಕೆರೆಯಲ್ಲಿ ಬೃಹತ್‌ ಧ್ವಜಾರೋಹಣ

ಮಂಗಳೂರಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ತಿರಂಗಾ ಯಾತ್ರೆ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜಗದ್ವಂದ್ಯ, ಸ್ವಾಭಿಮಾನಿ, ಸ್ವಾವಲಂಬಿ ಭಾರತ ಎದ್ದು ನಿಲ್ಲುತ್ತಿದೆ. ಅಮೃತ ಮಹೋತ್ಸವವನ್ನು ನಾಡಹಬ್ಬದ ಮಾದರಿಯಲ್ಲಿ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸುವ ಮೂಲಕ ಎಲ್ಲರೂ ಸಂಭ್ರಮ ಪಡಬೇಕು ಎಂದು ದ.ಕ. ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲು ಹೇಳಿದ್ದಾರೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ನಗರದ ಪುರಭವನದ ಮುಂಭಾಗ ಶನಿವಾರ ತಿರಂಗ ಯಾತ್ರೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ದ.ಕ. ಜಿಲ್ಲೆಯೂ ಕೊಡುಗೆ ನೀಡಿದೆ. ಪರಕೀಯರ ವಿರುದ್ಧ ರಾಣಿ ಅಬ್ಬಕ್ಕ ಸಮರ್ಥ ಹೋರಾಟ ಸಂಘಟಿಸಿದ್ದರು. ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ 20 ವರ್ಷ ಮುನ್ನವೇ 1837ರಲ್ಲಿ ಸುಳ್ಯದಲ್ಲಿ ರೈತರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಈ ಹೋರಾಟದ ನಾಯಕತ್ವ ವಹಿಸಿ, ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟಕೆದಂಬಾಡಿ ರಾಮಯ್ಯ ಗೌಡ ಪ್ರತಿಮೆಯನ್ನು ಶಾಸಕ ವೇದವ್ಯಾಸ ಕಾಮತ್‌ ನೇತೃತ್ವದಲ್ಲಿ ಬಾವುಟಗುಡ್ಡೆಯಲ್ಲಿ ನಿರ್ಮಿಸಲಾಗುತ್ತಿದೆ ಎಂದರು.

ಜಗತ್ತಿನ ಯಾವುದೇ ದೇಶದ ಮೇಲೆ ಆಕ್ರಮಣ ಮಾಡದ ರಾಷ್ಟ್ರ, ಸಂಸ್ಕೃತಿ ನಮ್ಮದು. ಒಂದು ಸಾವಿರ ವರ್ಷಗಳ ಪರಕೀಯರ ಆಡಳಿತ ಕ್ರಾಂತಿಕಾರಿಗಳ ಹೋರಾಟ, ಅಹಿಂಸಾತ್ಮಕ ಚಳವಳಿಯಿಂದ ಕೊನೆಗೊಂಡಿತು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಅವಕಾಶ ಸಿಗದ ನಮಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಪುಣ್ಯ ಲಭಿಸಿದೆ. ಸ್ವಾತಂತ್ರ್ಯದ ಶತಮಾನೋತ್ಸವ ಆಚರಿಸುವ ವೇಳೆ ಭಾರತ ಜಗತ್ತಿನ ಸರ್ವಶ್ರೇಷ್ಠ ದೇಶ ಆಗಲಿದೆ ಎಂದು ನಳಿನ್‌ ಕುಮಾರ್‌ ಹೇಳಿದರು.

ಶಾಸಕ ವೇದವ್ಯಾಸ ಕಾಮತ್‌, ಮೇಯರ್‌ ಪ್ರೇಮಾನಂದ ಶೆಟ್ಟಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಬಿಜೆಪಿ ದ.ಕ. ಜಿಲ್ಲಾಧ್ಯಕ್ಷ ಸುದರ್ಶನ್‌, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕಸ್ತೂರಿ ಪಂಜ, ಸುಧೀರ್‌ ಶೆಟ್ಟಿಕಣ್ಣೂರು, ಮಂಗಳೂರು ದಕ್ಷಿಣ ಮಂಡಲ ಅಧ್ಯಕ್ಷ ವಿಜಯ ಕುಮಾರ್‌ ಶೆಟ್ಟಿ, ಮುಖಂಡರಾದ ನಿತಿನ್‌ ಕುಮಾರ್‌, ರವಿಶಂಕರ ಮಿಜಾರ್‌, ಸಂತೋಷ್‌ ಕುಮಾರ್‌ ರೈ ಬೋಳಿಯಾರ್‌, ದಿವಾಕರ ಪಾಂಡೇಶ್ವರ, ಸುರೇಂದ್ರ, ದ.ಕ. ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿಇದ್ದರು.

click me!