ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

Kannadaprabha News   | Asianet News
Published : Mar 08, 2020, 10:08 AM IST
ತನ್ನ ಹೆಸರು ಹೇಳದ ಮಗಳನ್ನು ಕೋಲಿನಿಂದ ಹೊಡೆದು ಕೊಂದ ತಂದೆ..!

ಸಾರಾಂಶ

ಅಪ್ಪನ ಹೆಸರೇನೆಂದು ಕೇಳಿದಾಗ ತನ್ನ ಹೆಸರು ಹೇಳಲಿಲ್ಲವೆಂದು 6 ವರ್ಷದ ಬಾಲಕಿಯನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ಹನೂರು ತಾಲೂಕಿನ ಮುತ್ತುಶೆಟ್ಟಿಯೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.  

ಚಾಮರಾಜನಗರ(ಮಾ.08): ಅಪ್ಪನ ಹೆಸರೇನೆಂದು ಕೇಳಿದಾಗ ತನ್ನ ಹೆಸರು ಹೇಳಲಿಲ್ಲವೆಂದು 6 ವರ್ಷದ ಬಾಲಕಿಯನ್ನು ಕೋಲಿನಿಂದ ಹೊಡೆದು ಕೊಂದ ಘಟನೆ ಹನೂರು ತಾಲೂಕಿನ ಮುತ್ತುಶೆಟ್ಟಿಯೂರು ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹನೂರು ತಾಲೂಕಿನ ರಾಮಾಪುರ ಹೋಬಳಿ ಕೇಂದ್ರ ಸ್ಥಾನದಲ್ಲಿ ನಡೆದಿರುವ ಘಟನೆಯನ್ನು ರಾಮಾಪುರ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಪೂರ್ಣಿಮಾ (6) ಮೃತಪಟ್ಟಬಾಲಕಿಯಾಗಿದ್ದು, ನಾಗರಾಜ ಅಲಿಯಾಸ್‌ ಕೆಂಡ ಮಗಳನ್ನೇ ಕೊಂದಿರುವ ತಂದೆ. ಮಲೆ ಮಹದೇಶ್ವರ ಬೆಟ್ಟದ ರಾಜೇಶ್ವರಿ ಎಂಬಾಕೆಯೊಂದಿಗೆ ಮದುವೆಯಾಗಿದ್ದ ನಾಗರಾಜ್‌ 6 ವರ್ಷದ ಹಿಂದೆ ಪತ್ನಿ ತೊರೆದಿದ್ದ ವೇಳೆಯಲ್ಲಿ ಕಳ್ಳತನ ಪ್ರಕರಣವೊಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಒಳಗಾಗಿ ನಂತರ ಹೊರಬಂದಿದ್ದ. ಪತ್ನಿ ರಾಜೇಶ್ವರಿ ಬೇರೆ ಮಹೇಶ ಎಂಬಾತನೊಂದಿಗೆ ಎರಡನೇ ಮದುವೆಯಾಗಿದ್ದಳು. ಹೆಂಡತಿ ಬಿಡುವಾಗ ಮಗು ಪೂರ್ಣಿಮಾಗೆ 6 ತಿಂಗಳು ಎಂದು ತಿಳಿದುಬಂದಿದೆ.

ಘಟನೆಯ ವಿವರ:

ಕಳೆದ ಸೆಪ್ಟೆಂಬರ್‌ನಲ್ಲಿ ಮಕ್ಕಳನ್ನು ನೋಡಬೇಕೆಂದು ಪೂರ್ಣಿಮಾ ಹಾಗೂ ಇನ್ನೊಬ್ಬ ಮಗನನ್ನು ಕರೆದೊಯ್ದ ನಾಗರಾಜ ಮಗಳ ಬಳಿ ಅಪ್ಪನ ಹೆಸರೇನು ಎಂದು ಕೇಳಿದ್ದಾನೆ. ಆಗ ತಾಯಿಯ ಎರಡನೇ ಗಂಡನಾದ ಮಹೇಶನ ಹೆಸರನ್ನು ಹೇಳಿದ್ದರಿಂದ ಕುಪಿತಗೊಂಡ ನಾಗರಾಜ್‌ ದೊಣ್ಣೆಯಿಂದ ಮಗಳ ಮುಖಕ್ಕೆ ಹೊಡೆದು ಕೊಂದು ಬಳಿಕ ಶವ ಹೂತಿಟ್ಟು ಪರಾರಿಯಾಗಿದ್ದಾನೆ.

 

ಇತ್ತ ರಾಮಾಪುರ ಠಾಣೆಯಲ್ಲಿ ತಾಯಿ ರಾಜೇಶ್ವರಿ ಕಳೆದ ಸೆ. 6ರಂದು ಮಗಳು ಕಾಣೆಯಾಗಿದ್ದಾಳೆಂದು ದೂರು ನೀಡಿದ್ದರು. ದೂರು ದಾಖಲಿಸಿಕೊಂಡು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಇನ್ಸ್‌ಪೆಕ್ಟರ್‌ ಮನೋಜ್‌ಕುಮಾರ್‌ ತನಿಖಾ ತಂಡವನ್ನು ರಚನೆ ಮಾಡಿ ಸಯ್ಯದ್‌ಮುಷ್ರಫ್‌, ಸಿದ್ದರಾಜೇಗೌಡ, ಸುರೇಶ್‌ ಮೂವರು ಮುಖ್ಯಪೇದೆಗಳನ್ನು ತನಿಖಾ ತಂಡದಲ್ಲಿ ನಿಯೋಜನೆ ಮಾಡಿ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಳೆದ 3 ರಂದು ಆನೇಕಲ್‌ನ ಬಳಿ ಬರುವ ಜಿಗಣಿ ಗ್ರಾಮವೊಂದರ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕಾರ್ಮಿಕನಾಗಿ ಕೆಲಸ ಮಾಡಲಾಗುತ್ತಿದ್ದ ನಾಗರಾಜನನ್ನು ಬಂಧಿಸಿ ವಿಚಾರಣೆಗೊಳಡಿಸಿದಾಗ ಮಗಳನ್ನು ಕೊಂದಿರುವ ಘಟನೆ ಬೆಳಕಿಗೆ ಬಂದಿದೆ.

ಶನಿವಾರ ರಾಮಾಪುರ ಪಿಐ ಮನೋಜ್‌ ಕುಮಾರ್‌ ತಹಸಿಲ್ದಾರ್‌ ಬಸವರಾಜು ಚಿಗರಿ, ಸಮ್ಮುಖದಲ್ಲಿ ಹೂತಿಟ್ಟಿದ್ದ ಬಾಲಕಿಯ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ರಾಮಾಪುರ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

PREV
click me!

Recommended Stories

Bengaluru: ಕ್ಯಾಬ್ ಚಾಲಕನ ಮೇಲೆ ಯುವತಿ ರೇಪ್ ಆರೋಪ, ತನಿಖೆ ವೇಳೆ ಬಿಗ್ ಟ್ವಿಸ್ಟ್!
ನಮ್ಮನ್ನು ಗುಲಾಮರನ್ನಾಗಿಸಿ ಹಿಂದೂ ಧರ್ಮ ಸೃಷ್ಟಿಸಿದ್ದು ಬ್ರಾಹ್ಮಣರು: ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿ