ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಸಾವು..!

By Kannadaprabha News  |  First Published May 18, 2020, 11:59 AM IST

ತಬ್ಲಿಘಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ನಗರದ ಧವಳಗಿರಿ ಬಡಾವಣೆಗೆ ಸೇರಿದ 55 ವರ್ಷದ ವ್ಯಕ್ತಿಯನ್ನು ಕರೆತಂದು ಜಿಪಂ ಕಚೇರಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಈ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.


ಚಿತ್ರದುರ್ಗ(ಮೇ.18): ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಚಿತ್ರದುರ್ಗದ ವ್ಯಕ್ತಿಯೊಬ್ಬ ಭಾನುವಾರ ಮುಂಜಾನೆ ಹೃದಯಾಘಾತದಿಂದ ಅಸುನೀಗಿದ್ದು, ಆತನಿಗೆ ಕೊರೋನಾ ಸೋಂಕು ಇರಲಿಲ್ಲವೆಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ನ ಅಹಮದಾಬಾದ್‌ನಿಂದ ಖಾಸಗಿ ಬಸ್‌ವೊಂದರಲ್ಲಿ 15 ಜನ ತಬ್ಲೀಘಿಗಳು ಮೇ 5ರಂದು ಚಿತ್ರದುರ್ಗಕ್ಕೆ ಆಗಮಿಸಿದ್ದರು. ಅವರಲ್ಲಿ ಆರು ಮಂದಿಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿತ್ತು. ಹಾಗಾಗಿ, ಅವರ ಜೊತೆ ಇದ್ದ ಎಲ್ಲರನ್ನು ಚಿತ್ರದುರ್ಗ ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಅವರಲ್ಲಿ 9 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು.

Tap to resize

Latest Videos

ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ತಬ್ಲಿಘಿಗಳೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣಕ್ಕಾಗಿ ಸರ್ಕಾರದ ಮಾರ್ಗಸೂಚಿಯನ್ವಯ ನಗರದ ಧವಳಗಿರಿ ಬಡಾವಣೆಗೆ ಸೇರಿದ 55 ವರ್ಷದ ವ್ಯಕ್ತಿಯನ್ನು ಕರೆತಂದು ಜಿಪಂ ಕಚೇರಿ ಬಳಿ ಇರುವ ಸಮಾಜ ಕಲ್ಯಾಣ ಇಲಾಖೆಗೆ ಸಂಬಂಧಿಸಿದ ವಸತಿ ನಿಲಯದಲ್ಲಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಸಾಂಸ್ಥಿಕ ಕ್ವಾರಂಟೈನ್‌ ವೇಳೆ ಅಂದರೆ ಮೇ 8ರಂದು ಆತನ ಗಂಟಲು ದ್ರವದ ಮಾದರಿ ಪಡೆದು ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, 12ರಂದು ಬಂದ ವರದಿಯಲ್ಲಿ ಆತನದು ನೆಗೆಟಿವ್‌ ಆಗಿತ್ತು. ಆದರೂ, 14 ದಿನಗಳ ಕ್ವಾರಂಟೈನ್‌ ಅವಧಿ ಮುಗಿಸುವುದು ಅನಿವಾರ್ಯವಾಗಿದ್ದರಿಂದ ಆತನನ್ನು ಹಾಸ್ಟೆಲ್‌ನಲ್ಲಿ ಉಳಿಸಿಕೊಳ್ಳಲಾಗಿತ್ತು.

ಎಸ್‌ಒಪಿ ಮಾರ್ಗಸೂಚಿಯನ್ವಯ ಪ್ರಾಥಮಿಕ ಸಂಪರ್ಕಿತರಿಗೆ ಎರಡು ಬಾರಿ ಪರೀಕ್ಷೆ ನಡೆಸುವುದು ಅಗತ್ಯವಾಗಿತ್ತು. ಹೀಗಾಗಿ, ಮೇ 20ರಂದು ಎರಡನೇ ಬಾರಿಗೆ ಗಂಟಲುದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿಕೊಡಬೇಕಾಗಿತ್ತು. 55 ವರ್ಷದ ಈ ವ್ಯಕ್ತಿಗೆ ಮೇ 16ರಂದು ಸಂಜೆ ಎದೆ ನೋವು ಕಾಣಿಸಿಕೊಂಡ ಕಾರಣ ಜಿಲ್ಲಾ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿತ್ತು.

ಕಾಫಿನಾಡಿನಿಂದ ಮರಳಿ ಊರಿಗೆ ತೆರಳುತ್ತಿದ್ದಾರೆ ವಲಸೆ ಕಾರ್ಮಿಕರು

ಇಸಿಜಿ ವರದಿ ನಾರ್ಮಲ್‌ ಬಂದಿದ್ದರಿಂದ ವೈದ್ಯರು ಸಮಾಧಾನಗೊಂಡಿದ್ದರು. ಸೂಕ್ತ ಚಿಕಿತ್ಸೆ ನೀಡಿ, ಪುನಃ ಸಾಂಸ್ಥಿಕ ಕ್ವಾರಂಟೈನ್‌ ಕೇಂದ್ರಕ್ಕೆ ಕರೆತರಲಾಗಿತ್ತು. ಮೇ 17ರ ಭಾನುವಾರ ಮುಂಜಾನೆ 5 ಗಂಟೆ ಸುಮಾರಿಗೆ ಬೆಳಗಿನ ಪ್ರಾರ್ಥನೆಗಾಗಿ ಎದ್ದಿದ್ದ ಆತನಿಗೆ ತೀವ್ರ ಹೃದಯಾಘಾತವಾಗಿ ತಕ್ಷಣಕ್ಕೆ ಅಸುನೀಗಿದ್ದಾರೆ. ವ್ಯಕ್ತಿಯ ಸಾವು ಕೊರೋನಾದಿಂದ ಸಂಬಂಧಿಸಿದ್ದಲ್ಲ. ಹಾಗಾಗಿ, ಮೃತದೇಹವನ್ನು ನಿಯಮಾನುಸಾರ ಸಂಬಂಧಿಸಿದ ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ತಿಳಿಸಿದ್ದಾರೆ.

ಸಂಬಂಧಿಗಳಲ್ಲಿ ಆತಂಕ

ಕ್ವಾರಂಟೈನ್‌ನಲ್ಲಿದ್ದ ವ್ಯಕ್ತಿ ಹೃದಯಾಘಾತದಿಂದ ಮೃತಪಟ್ಟಹಿನ್ನೆಲೆಯಲ್ಲಿ ಇಲ್ಲಿನ ಜಿಲ್ಲಾಸ್ಪತ್ರೆ ತುರ್ತು ಚಿಕಿತ್ಸಾ ಘಟಕದ ಮುಂಭಾಗ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ಮೃತ ವ್ಯಕ್ತಿ ಸಂಬಂಧಿಗಳು ಆಸ್ಪತ್ರೆ ಮುಂಭಾಗ ಧಾವಿಸಿ ಸಾವಿಗೆ ಕಾರಣಗಳ ತಲಾಶ್‌ ಮಾಡಿ ನಂತರ ಹೃದಯಾಘಾತವಾಗಿರುವುದನ್ನು ಖಚಿತಪಡಿಸಿಕೊಂಡು ನಿರ್ಗಮಿಸಿದರು.

click me!