ಉಳ್ಳಾಲ: ಮ್ಯಾಂಡಸ್‌ ಚಂಡಮಾರುತ, ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದ ವ್ಯಕ್ತಿ ನೀರುಪಾಲು

By Kannadaprabha News  |  First Published Dec 12, 2022, 2:30 AM IST

ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ಚಂಡಾಮಾರುತವಾಗಿ ಮಾರ್ಪಟ್ಟು, ಡಿ.12ರವರೆಗೆ ಚಳಿ ಜತೆಗೆ ಮಳೆ ಇರುವ ಕುರಿತು ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ 


ಉಳ್ಳಾಲ(ಡಿ.12): ಸಮುದ್ರ ಸ್ನಾನಕ್ಕೆ ತೆರಳಿದ ವ್ಯಕ್ತಿ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟ ಘಟನೆ ಸೋಮೇಶ್ವರ ಸಮುದ್ರತೀರದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ. ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ಮ್ಯಾಂಡಸ್‌ ಚಂಡಮಾರುತದ ಹಿನ್ನೆಲೆಯಲ್ಲಿ ಶನಿವಾರ ತಡರಾತ್ರಿಯಿಂದ ಮಳೆಯಿದ್ದು, ಸಮುದ್ರದಲ್ಲಿ ಗಾಳಿಯಿದ್ದ ಹಿನ್ನೆಲೆಯಲ್ಲಿ ಅಲೆಗಳ ಗಾತ್ರ ಹೆಚ್ಚಾಗಿ ಘಟನೆ ಸಂಭವಿಸಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಅಂಬಿಕಾರೋಡ್‌ ನಿವಾಸಿ ಪ್ರಶಾಂತ್‌ ಬೇಕಲ್‌ (47) ಮೃತರು.

ಪುತ್ರ ಚಿರಾಯು ಬೇಕಲ್‌, ಸಹೋದರ ವರದರಾಜ್‌ ಬೇಕಲ್‌ ಅವರ ಪುತ್ರ ವಂದನ್‌ ಬೇಕಲ್‌, ಸಂಕೋಳಿಗೆಯ ಸ್ನೇಹಿತ ಮಣಿ ಎಂಬವರ ಜತೆಗೆ ತೆರಳಿದ್ದ ಸಂದರ್ಭ ಘಟನೆ ನಡೆದಿದೆ. ಪ್ರತಿ ಭಾನುವಾರವೂ ಮಕ್ಕಳನ್ನು ಕರೆದುಕೊಂಡು ಸಮುದ್ರ ತೀರಕ್ಕೆ ಸಹೋದರರು ತೆರಳುತ್ತಿದ್ದರು. ಮೃತ ಪ್ರಶಾಂತ್‌ ಅವರ ಪುತ್ರ ಚಿರಾಯು ಇಂಜಿನಿಯರಿಂಗ್‌ ವಿದ್ಯಾರ್ಥಿಯಾಗಿದ್ದು, ಈಜುಪಟುವಾಗಿದ್ದಾನೆ.

Tap to resize

Latest Videos

ಬೆಂಗಳೂರು ಜನತೆಯನ್ನು ನಡುಗಿಸುತ್ತಿರುವ Cyclone Mandous ಹೆಸರು ಬಂದಿದ್ದೇಗೆ..? ಅರ್ಥ ಏನು ನೋಡಿ..

ಕಣ್ಣಮುಂದೆಯೇ ತಂದೆ ಸಮುದ್ರ ಪಾಲಾಗುವುದನ್ನು ಕಂಡು ಹಗ್ಗದ ಸಹಾಯದಿಂದ ಅಲೆಗಳ ನಡುವೆ ಕಾದಾಡಿ ಇತರರ ಜೊತೆಗೆ ಮೇಲಕ್ಕೆ ಎತ್ತಿದರೂ ಪ್ರಯೋಜನಕಾರಿಯಾಗಲಿಲ್ಲ. ಪ್ರಶಾಂತ್‌ ಮಂಗಳೂರಿನ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಬಸ್ಸಿನಲ್ಲಿ ಚಾಲಕರಾಗಿದ್ದಾರೆ. ಈ ಹಿಂದೆ ಕೆಎಂಸಿ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಉಳ್ಳಾಲ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತ ತೀವ್ರಗೊಂಡು ಚಂಡಾಮಾರುತವಾಗಿ ಮಾರ್ಪಟ್ಟು, ಡಿ.12ರವರೆಗೆ ಚಳಿ ಜತೆಗೆ ಮಳೆ ಇರುವ ಕುರಿತು ಹವಾಮಾನ ಇಲಾಖೆ ಎಚ್ಚರಿಕೆ ನೀಡಿತ್ತು.
 

click me!