
ಚಿಟಗುಪ್ಪ (ಬೀದರ್) : ಬೈಕ್ ಮೇಲೆ ತೆರಳುವ ವೇಳೆ ಗಾಳಿಪಟ ಹಾರಿಸುವ ನಿಷೇಧಿತ ಚೀನಿ ಮಾಂಜಾ ದಾರ ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ತಾಳಮಡಗಿ ಗ್ರಾಮದ ಸೇತುವೆ ಸಮೀಪ ಸಂಭವಿಸಿದೆ.
ತಾಲೂಕಿನ ಬಂಬುಳಗಿ ಗ್ರಾಮದ ಸಂಜುಕುಮಾರ ಗುಂಡಪ್ಪ ಹೊಸಮನಿ (48) ಮೃತರು. ಹುಮನಾಬಾದ್ ಪಟ್ಟಣದ ವಸತಿ ನಿಲಯದಲ್ಲಿ ಓದುತ್ತಿರುವ ತಮ್ಮ ಪುತ್ರಿಯನ್ನು ಸಂಕ್ರಾಂತಿ ಹಬ್ಬದ ನಿಮಿತ್ತ ಮನೆಗೆ ಕರೆದುಕೊಂಡು ಹೋಗಲು ಸಂಜು ಅವರು ಬೈಕ್‌ನಲ್ಲಿ ವೇಗವಾಗಿ ಹೊರಟಿದ್ದರು. ತಾಳಮಡಗಿ ಗ್ರಾಮದ ಸೇತುವೆ ಸಮೀಪ ಬರುತ್ತಿದ್ದಂತೆ ಕಣ್ಣಿಗೆ ಕಾಣಿಸದ ಗಾಳಿಪಟದ ಚೀನಿ ಮಾಂಜಾ ದಾರ ಕುತ್ತಿಗೆಗೆ ತಗುಲಿ, ಕುತ್ತಿಗೆ ಕೊಯ್ದುಕೊಂಡಿದೆ. ಬೈಕ್ ಮೇಲಿಂದ ಕೆಳಗೆ ಬಿದ್ದ ಸಂಜುಕುಮಾರ, ಕೆಲ ಹೊತ್ತು ರಸ್ತೆ ಮೇಲೆಯೇ ರಕ್ತದ ಮಡುವಿನಲ್ಲಿ ಹೊರಳಾಡಿದ್ದಾರೆ. ಆ ನೋವಿನಲ್ಲಿಯೇ ಮೊಬೈಲ್ ನಿಂದ ತಮ್ಮ ಮಗಳ ಸಂಖ್ಯೆಗೆ ಕರೆ ಮಾಡಿದ್ದಾರೆ. ಬಳಿಕ, ನರಳುತ್ತಾ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಕೆಲ ದಿನಗಳ ಹಿಂದೆ ಚಿಟಗುಪ್ಪ ಸಮೀಪ ಓರ್ವ ಬಾಲಕನ ಕೈಗೆ ಗಾಳಿಪಟದ ದಾರ ಸಿಲುಕಿ, ಆತ ಗಂಭೀರ ಗಾಯಗೊಂಡಿದ್ದ ಘಟನೆ ಕೂಡ ನಡೆದಿತ್ತು. ಅದನ್ನು ಮನಗಂಡು ತಹಸೀಲ್ದಾರ್ ಮಂಜುನಾಥ ಪಾಂಚಾಳ ಅವರು ತಾಲೂಕಿನಾದ್ಯಂತ ಗಾಳಿಪಟ ಹಾರಿಸುವ ಮಾಂಜಾ ದಾರ ಮಾರಾಟ ನಿಷೇಧಿಸಿ ಪ್ರಕಟಣೆ ಹೊರಡಿಸಿದ್ದರು.
ಈಗ ಒಂದು ಸಾವೇ ಸಂಭವಿಸಿದೆ. ಸಂಜುಕುಮಾರ ಸಾವಿನ ಬೆನ್ನಲ್ಲಿಯೇ ಹಲವು ಗ್ರಾಮಗಳಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮೈಕ್ ಮೂಲಕ ನೈಲಾನ್ (ಮಾಂಜಾ) ದಾರ ಬಳಕೆಗೆ ನಿಷೇಧ ಹೇರಿರುವುದನ್ನು ಸಾರುತ್ತಿದ್ದಾರೆ.
ಸಂಕ್ರಾಂತಿ ಹಬ್ಬದಂದು ಹುಮನಾಬಾದ್, ಚಿಟಗುಪ್ಪ ತಾಲೂಕಿನ ಹಲವು ಗ್ರಾಮಗಳಲ್ಲಿ ಈ ನೈಲಾನ್ (ಮಾಂಜಾ) ದಾರದಿಂದ ಗಾಳಿಪಟ ಹಾರಿಸಲಾಗುತ್ತದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಮಾಂಜಾ ದಾರ, ನೈಲಾನ್ ದಾರ, ಸಾರ್ವಜನಿಕರಿಗೆ ಹಾನಿ ಮಾಡುವಂತಹ ದಾರಗಳನ್ನು ಉಪಯೋಗಿಸದೆ ಸಾಮಾನ್ಯ ದಾರವನ್ನು ಉಪಯೋಗಿಸಿ ಹಬ್ಬ ಆಚರಣೆ ಮಾಡಬೇಕೆಂದು ಹುಮನಾಬಾದ್ ತಹಸೀಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗಾಳಿಪಟ ಹಾರಿಸುವದಕ್ಕೆ ಮಾಂಜಾ ದಾರ ಬಳಕೆ ಮಾಡದಂತೆ ಈಗಾಗಲೇ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದ್ದರೂ ಕೆಲ ಅಂಗಡಿಗಳಲ್ಲಿ ನೈಲಾನ್, ಮಾಂಜಾ ದಾರವನ್ನು ಮಾರಾಟ ಮಾಡಲಾಗುತ್ತಿದೆ. ಅಂಥವುಗಳನ್ನು ಕೆಲವೆಡೆ ಸೀಜ್ ಮಾಡಲಾಗಿದೆ. ಕಾರ್ಯಾಚರಣೆಯನ್ನು ಮತ್ತಷ್ಟು ಚುರುಕುಗೊಳಿಸಲಾಗುತ್ತಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರದೀಪ ಗುಂಟಿ, ಎಸ್ಪಿ, ಬೀದರ್
ಬಲಿ ಪಡೆದಿದ್ದು ಚೀನಿ ಮಾಂಜಾ
ಸಂಕ್ರಾಂತಿ ವೇಳೆ ಗಾಳಿ ಪಟ ಹಾರಿಸಲು ಬಳಸುವ ದಾರ ಕಿತ್ತು ಹೋಗದಿರಲಿ ಎಂದು ಅದಕ್ಕೆ ಗಾಜಿನಪುಡಿಯನ್ನು ಅಂಟಿನ ಜತೆ ಸವರಿ ಬಲಿಷ್ಠಗೊಳಿಸಲಾಗುತ್ತದೆ. ಈ ದಾರ ದೇಶದ ಉದ್ದಗಲಕ್ಕೂ ಹಲವು ಜನರನ್ನು ಬಲಿ ಪಡೆದ ಕಾರಣ ಇದರ ಮಾರಾಟಕ್ಕೆ ಹಲವೆಡೆ ನಿಷೇಧವಿದೆ. ಚೀನಾದಿಂದ ಬರುತ್ತದೆ ಎಂಬ ಕಾರಣಕ್ಕೆ ಇದನ್ನು ಚೀನಿ ಮಾಂಜಾ ಎಂದು ಕರೆಯಲಾಗುತ್ತದೆಯಾದರೂ ಇದನ್ನು ಭಾರತದಲ್ಲೂ ತಯಾರಿಸಲಾಗುತ್ತದೆ.
ಆಗಿದ್ದೇನು?
- ಬೀದರ್ ಜಿಲ್ಲೆ ಚಿಟಗುಪ್ಪ ತಾಲೂಕಿನ ಬಂಬುಳಗಿ ಗ್ರಾಮದ ಸಂಜುಕುಮಾರ ಪುತ್ರಿ ಹಾಸ್ಟೆಲ್‌ನಲ್ಲಿದ್ದಳು
- ಸಂಕ್ರಾಂತಿ ಹಬ್ಬಕ್ಕೆ ಮನೆಗೆ ಕರೆದುಕೊಂಡು ಬರಲು ಹುಮನಾಬಾದ್‌ಗೆ ಹೊರಟಿದ್ದ ಸಂಜುಕುಮಾರ
- ಬೈಕ್‌ನಲ್ಲಿ ವೇಗವಾಗಿ ಸಾಗುತ್ತಿದ್ದಾಗ ದಾರಿ ಮಧ್ಯೆ ಕುತ್ತಿಗೆ ಸೀಳಿದ ಮಾಂಜಾ ದಾರ. ಕೆಳಕ್ಕೆ ಬಿದ್ದ ಸಂಜು
- ರಕ್ತದ ಮಡುವಿನಲ್ಲಿ ಒದ್ದಾಡುತ್ತಲೇ, ಪುತ್ರಿಗೆ ಕರೆ ಮಾಡಿ ನಡೆದಿದ್ದನ್ನು ಹೇಳಿದ ಸಂಜು. ಕೆಲ ಹೊತ್ತಲ್ಲೇ ಸಾವು