ಶಾಸಕನಾಗುವ ಮೊದಲು ರೇಣುಕಾಚಾರ್ಯ ಬೋರ್‌ವೆಲ್ ಏಜೆಂಟ್ ಆಗಿದ್ದ. ಯಾರದ್ದೋ ತಲೆಒಡೆದು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ| ರೇಣುಕಾಚಾರ್ಯ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಆಕ್ರೋಶ|
ದಾವಣಗೆರೆ(ಡಿ.19): ಕೋಡಿಹಳ್ಳಿ ಚಂದ್ರಶೇಖರ್ ಡೋಂಗಿ ಅಲ್ಲ, ಶಾಸಕ ಎಂ.ಪಿ. ರೇಣುಕಾಚಾರ್ಯ ಡೋಂಗಿಯಾಗಿದ್ದಾರೆ. ಈ ಕೂಡಲೇ ಕ್ಷಮೆ ಯಾಚಿಸಬೇಕು. ತಪ್ಪಿದ್ರೆ ರೇಣುಕಾಚಾರ್ಯ ವಿರುದ್ಧ ಕಪ್ಪುಪಟ್ಟಿ ಪ್ರದರ್ಶನ ಮಾಡತ್ತೇವೆ. ರೇಣುಕಾಚಾರ್ಯ ಎಲ್ಲಾದ್ರೂ ಸಿಕ್ರೆ ಮುಖಕ್ಕೆ ಮಸಿ ಬಳಿಯುತ್ತೇವೆ. ತಾಕತ್ತಿದರೆ ದಾವಣಗೆರೆಗೆ ಬರಲಿ, ಇಲ್ಲವೇ ನಾವೇ ಹೊನ್ನಾಳಿಗೆ ಬರುತ್ತೇವೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ಹೇಳಿದ್ದಾರೆ.
ಕೋಡಿಹಳ್ಳಿ ಚಂದ್ರಶೇಖರ್ ಬಗ್ಗೆ ರೇಣುಕಾಚಾರ್ಯ ಅವಹೇಳನ ಮಾಡಿದ ಬಗ್ಗೆ ಇಂದು(ಶನಿವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಶಾಸಕನಾಗುವ ಮೊದಲು ರೇಣುಕಾಚಾರ್ಯ ಬೋರ್‌ವೆಲ್ ಏಜೆಂಟ್ ಆಗಿದ್ದ. ಯಾರದ್ದೋ ತಲೆಒಡೆದು ಸಾವಿರಾರು ಕೋಟಿ ಆಸ್ತಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
'ರೇಣುಕಾಚಾರ್ಯ ನರ್ಸ್ ಜೊತೆ ಏನೇನ್ ಮಾಡಿದ್ದಾರೆ ಅಂತ ಇಡೀ ರಾಜ್ಯಕ್ಕೆ ಗೊತ್ತಿದೆ'
ಮೊಳಕಾಲುದ್ದ ನೀರಲ್ಲಿ ನಿಂತು ತೆಪ್ಪ ಓಡಿಸುವ ನಾಟಕ ಮಾಡಿದ್ದು ರೇಣುಕಾಚಾರ್ಯ ಎಂಬ ಡೋಂಗಿ ರಾಜಕಾರಣಿ. ಕೋಡಿಹಳ್ಳಿ ಚಂದ್ರಶೇಖರ್ ಅವರ ಅಕ್ರಮ ಆಸ್ತಿ ಮಾಡಿದ ಆರೋಪ ಮಾಡ್ತಾರೆ. ಸರ್ಕಾರ ಅವರದ್ದೇ ಇದೆ, ಕೂಡಲೇ ತನಿಖೆ ಮಾಡಿಸಿ, ಅಕ್ರಮ, ಬೇನಾಮಿ ಅಸ್ತಿ ಕಂಡು ಬಂದ್ರೆ ಜಪ್ತಿ ಮಾಡ್ಲಿ ಎಂದು ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ ರೇಣುಕಾಚಾರ್ಯ ಅವರಿಗೆ ಬಹಿರಂಗವಾಗಿಯೇ ಸವಾಲ್ ಹಾಕಿದ್ದಾರೆ.