ಮಹದಾಯಿ ಹೋರಾಟಕ್ಕೆ ದೊಡ್ಡ ಶಕ್ತಿ ಮಲ್ಲಣ್ಣದ್ದು!

By Kannadaprabha News  |  First Published Jul 30, 2022, 1:13 PM IST

ಇವರಿದ್ದರೆ ಹೋರಾಟಕ್ಕೆ ಇಳಿದರೆ ಊಟ, ಉಪಾಹಾರಕ್ಕೇನೂ ಕೊರತೆ ಇರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿರಲಿ, ಯಾವುದೇ ಪಕ್ಷದ ಕಚೇರಿಯಿರಲಿ, ದೆಹಲಿ(Dehli) ಬೀದಿಯೇ ಇರಲಿ ಎಲ್ಲೇ ಹೋರಾಟ ನಡೆಸಿದರೂ ರಸ್ತೆ ಮಧ್ಯೆಯೇ ಅಡುಗೆ ಮಾಡಲು ಇಳಿಯುವುದೇ ಇವರು! ಯಾರು ಅವರು?


ಹುಬ್ಬಳ್ಳಿ (ಜು.30): ಕಾರ್ಮಿಕ ಹೋರಾಟಗಾರ ಇದೀಗ ಮಹದಾಯಿ ಹೋರಾಟಗಾರ...! ಇದು ಕರ್ನಾಟಕ ರೈತ ಸೇನೆಯ ರಾಜ್ಯ ಉಪಾಧ್ಯಕ್ಷ, ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿಗ್ರಾಮದ ನಿವಾಸಿ ಮಲ್ಲಿಕಾರ್ಜುನ ಆಲೇಕೇರಿಯ ಒಂದು ಸಾಲಿನ ವಿವರಣೆ. 63 ವರ್ಷದ ಮಲ್ಲಿಕಾರ್ಜುನ, ಮೂಲತಃ ಕಾರ್ಮಿಕ ಹೋರಾಟಗಾರ. ಮಹದಾಯಿ ಹೋರಾಟಗಾರರಿಗೆ ಪ್ರೀತಿಯ ಮಲ್ಲಣ್ಣ ಇವರು.

ಇವರಿದ್ದರೆ ಹೋರಾಟಕ್ಕೆ ಇಳಿದರೆ ಊಟ, ಉಪಾಹಾರಕ್ಕೇನೂ ಕೊರತೆ ಇರುವುದಿಲ್ಲ. ಜಿಲ್ಲಾಧಿಕಾರಿ ಕಚೇರಿಯಿರಲಿ, ಯಾವುದೇ ಪಕ್ಷದ ಕಚೇರಿಯಿರಲಿ, ದೆಹಲಿ(Dehli) ಬೀದಿಯೇ ಇರಲಿ ಎಲ್ಲೇ ಹೋರಾಟ ನಡೆಸಿದರೂ ರಸ್ತೆ ಮಧ್ಯೆಯೇ ಅಡುಗೆ ಮಾಡಲು ಇಳಿಯುವುದೇ ಇವರು. ಅತ್ತ ಎಲ್ಲರೂ ಹೋರಾಟಕ್ಕಿಳಿದರೆ, ಇವರು ಎಲ್ಲರ ಊಟಕ್ಕೆ ಎಷ್ಟುಅಕ್ಕಿಯ ಅನ್ನ ಮಾಡಬೇಕಾಗುತ್ತದೆ. ಅದಕ್ಕೆ ಸಾಂಬಾರು ಎಷ್ಟುಮಾಡಬೇಕು ಅಥವಾ ಪಲಾವ್‌ ಮಾಡಬೇಕೇ ಎಂದು ಯೋಚಿಸುವ ಮೊದಲಿಗರು ಇವರು. ಬಳಿಕ ರಸ್ತೆ ಮೇಲೆ ಒಲೆ ಹೂಡಿ ಅನ್ನ ಮಾಡಲು ಶುರು ಮಾಡುವರು. ಅತ್ತ ಅನ್ನ ಇಟ್ಟು ಬಳಿಕ ಹೋರಾಟದತ್ತ ಹೆಜ್ಜೆ ಹಾಕುತ್ತಾರೆ. ಹೀಗೆ ಹೋರಾಟದೊಂದಿಗೆ ಚಳವಳಿಗಾರರ ಹೊಟ್ಟೆತುಂಬಿಸುವ ಕೆಲಸ ಮಾಡುವ ಮಹಾನ ಹೋರಾಟಗಾರಿವರು. ಹೀಗಾಗಿ ಇವರು ಎಲ್ಲರಿಗೂ ಪ್ರೀತಿಯ ಮಲ್ಲಣ್ಣ ಎನಿಸಿಕೊಂಡಿದ್ದಾರೆ.

Latest Videos

undefined

ಕೇಂದ್ರ- ರಾಜ್ಯ ಸರ್ಕಾರದ ನಡೆಗೆ ಖಂಡನೆ: ಕಳಸಾ ಬಂಡೂರಿ ಹೋರಾಟಗಾರರ ಆಕ್ರೋಶ

ಐಟಿಐ ಶಿಕ್ಷಣ(ITI) ಮುಗಿಸಿ ಬೋರಕಾ ಟೆಕ್ಸ್‌ಟೈಲ್‌ನಲ್ಲಿ ಕೆಲವರ್ಷ ಕೆಲಸ ಮಾಡಿದ್ದಾರೆ. ಬಳಿಕ ಗುಜರಾತ್‌ನ ನರ್ಮದಾ ಪ್ರೊಜೆಕ್ಟ್ನಲ್ಲಿ ಕೆಲವರ್ಷ ಎಲೆಕ್ಟ್ರಿಶನ್‌ ಎಂದು ಕೆಲಸ ಮಾಡಿದವರು. ಬಳಿಕ ಹುಬ್ಬಳ್ಳಿಯ ಕಿರ್ಲೋಸ್ಕರ್‌ ಎಲೆಕ್ಟ್ರಿಕಲ್‌ ಕಂಪನಿಯಲ್ಲಿ ಕೆಲಸಕ್ಕೆ ಸೇರಿದವರು. ಕೆಇಸಿಯಲ್ಲಿ ಯೂನಿಯನ್‌ ಲೀಡರ್‌ ಆಗಿದ್ದ ಇವರನ್ನು ಕಾರ್ಮಿಕರ ಪರವಾಗಿ ಹೋರಾಟ ಕೂಡ ಮಾಡಿದ್ದುಂಟು. ಈ ಹಿನ್ನೆಲೆಯಲ್ಲಿ ಇವರನ್ನು ಕೆಲಸದಿಂದ ತೆಗೆದು ಹಾಕಿತ್ತು. ಕಂಪನಿ ವಿರುದ್ಧ ಸುಪ್ರೀಂಕೋರ್ಚ್‌ಗೆ ಹೋಗಿ ಅಲ್ಲಿ ಕೇಸ್‌ ಗೆದ್ದು ಕೈಗಾರಿಕೆಯಿಂದ ತಮಗೆ ಸಿಗಬೇಕಾದ ಸೌಲಭ್ಯಗಳನ್ನು ಪಡೆದವರು. ಬಳಿಕ ಅಲ್ಲಿಂದ ನಿವೃತ್ತಿಯಾಗಿ ಮಹದಾಯಿ ಹೋರಾಟಕ್ಕೆ ಧುಮುಕಿದವರು.

2016ರಿಂದ ಮಹದಾಯಿ ಹೋರಾಟಕ್ಕಿಳಿದ ಇವರು, ರೈತಸೇನೆ ಕರ್ನಾಟಕಕ್ಕೆ ಸೇರಿದರು. ವೀರೇಶ ಸೊಬರದ ಮಠ ಅವರೊಂದಿಗೆ ಜತೆಗೂಡಿ ಹೋರಾಟ ನಡೆಸುವ ಇವರು ಸದ್ಯ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ಮಹದಾಯಿ ಹೋರಾಟದ ಬಲಗೈ ಬಂಟ ಎಂದರೆ ತಪ್ಪಾಗಲಾರದು. ಸೊಬರದಮಠ ಎಲ್ಲಿಯೇ ಹೋಗಲಿ ಅವರೊಂದಿಗೆ ಇವರ ಸಾಥ್‌ ಇದ್ದೇ ಇರುತ್ತದೆ.

ದೆಹಲಿ, ಬೆಂಗಳೂರು, ಧಾರವಾಡ, ನರಗುಂದ ಹೀಗೆ ಎಲ್ಲಿಯೇ ಸೊಬರದಮಠ ಹೋರಾಟ ನಡೆಸಿದರೂ ಅಲ್ಲಿ ಇವರ ಹಾಜರಾತಿ ಕಡ್ಡಾಯ ಎಂಬಂತಾಗಿದೆ. ಇವರ ಮೇಲೂ ಹತ್ತಾರು ಕೇಸ್‌ಗಳಾಗಿದ್ದು, ಯಾವುದಕ್ಕೂ ಅಂಜದೇ ಅಳುಕದೇ ಹೋರಾಟವನ್ನೇ ಜೀವವನ್ನಾಗಿ ಮಾಡಿಕೊಂಡವರು. ಮಹದಾಯಿ ನೀರನ್ನು ನಮ್ಮೂರಿಗೆ ತರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದವರಲ್ಲಿ ಇವರು ಒಬ್ಬರು. ಮಹದಾಯಿ ನೀರು ಬಂದ ಮೇಲೆ ಮತ್ತೆ ರೈತರಿಗಾಗಿ ಹೋರಾಟ ನಡೆಸುತ್ತೇವೆ. ಒಟ್ಟಿನಲ್ಲಿ ಉಸಿರು ಇರುವವರೆಗೂ ನಮ್ಮ ಹೋರಾಟ ಮಾತ್ರ ನಿಲ್ಲದು ಎಂದು ಸ್ಪಷ್ಟವಾಗಿ ನುಡಿಯುತ್ತಾರೆ ಇವರು.

ಮಹದಾಯಿ ನದಿ ವಿಚಾರ; ರಾಜಕಾರಣಿಗಳು ಪ್ರಮಾಣಿಕ ಪ್ರಯತ್ನ ಮಾಡಿಲ್ಲ

ಒಟ್ಟಿನಲ್ಲಿ ಅಂದು ಕಾರ್ಮಿಕರಿಗಾಗಿ ಹೋರಾಟ ನಡೆಸಿ ಕೆಲಸ ಕಳೆದುಕೊಂಡ ಮಲ್ಲಣ್ಣ, ಇದೀಗ ಮಹದಾಯಿ ಹೋರಾಟಕ್ಕೆ ಇಳಿಯುವ ಮೂಲಕ ರೈತರ ಧ್ವನಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರೆ ತಪ್ಪಾಗಲಿಕ್ಕಿಲ್ಲ.

click me!