Kunigal hotel fire: ಹೆದ್ದಾರಿ ಬದಿಯ ಹೋಟೆಲ್‌ಗೆ ಬೆಂಕಿ, ನೋಡನೋಡುತ್ತಿದ್ದಂತೆ ಇಡೀ ಕಟ್ಟಡವೇ ಸುಟ್ಟು ಕರಕಲು!

Published : Feb 25, 2026, 07:34 PM IST
Kunigal hotel fire accident

ಸಾರಾಂಶ

ತುಮಕೂರು ಜಿಲ್ಲೆಯ ಕುಣಿಗಲ್ ಬಳಿಯ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ 'ತಾಜ್ ದರ್ಬಾರ್' ಹೋಟೆಲ್‌ನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಈ ದುರಂತದಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದ್ದು, ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಕಾರಣವೆಂದು ಶಂಕಿಸಲಾಗಿದೆ.

ತುಮಕೂರು (ಫೆ.25): ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ ನಾಗೇಗೌಡನಪಾಳ್ಯದಲ್ಲಿ ಇಂದು ಸಂಜೆ ಭೀಕರ ಅಗ್ನಿ ಅವಘಡ ಸಂಭವಿಸಿದೆ. ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲೇ ಇರುವ 'ತಾಜ್ ದರ್ಬಾರ್' ಹೋಟೆಲ್‌ನಲ್ಲಿ ಸಂಜೆ ಸುಮಾರು 5:30ರ ವೇಳೆಗೆ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲಿ ಇಡೀ ಹೋಟೆಲ್ ಆವರಿಸಿದ ಬೆಂಕಿಯ ಕೆನ್ನಾಲಿಗೆ ಕಟ್ಟಡವೇ ಸುಟ್ಟು ಕರಕರಲಾಗಿದೆ.

ಲಕ್ಷಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿ

ಈ ಅಗ್ನಿ ದುರಂತದಲ್ಲಿ ಹೋಟೆಲ್‌ನಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪೀಠೋಪಕರಣಗಳು, ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಹೋಟೆಲ್ನಲ್ಲಿಟ್ಟ ಆಹಾರ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಹೋಟೆಲ್ ಮಾಲೀಕರಿಗೆ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಹೋಟೆಲ್‌ನಲ್ಲಿದ್ದ ಸಿಬ್ಬಂದಿ ಹಾಗೂ ತಿಂಡಿ ಸೇವಿಸಲು ಬಂದಿದ್ದ ಗ್ರಾಹಕರು ತಕ್ಷಣವೇ ಹೊರಗೆ ಓಡಿ ಬಂದಿದ್ದರಿಂದ ದೊಡ್ಡ ಮಟ್ಟದ ಪ್ರಾಣಾಪಾಯ ತಪ್ಪಿದಂತಾಗಿದೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಶಂಕೆ

ಹೋಟೆಲ್‌ನಲ್ಲಿ ಸಂಭವಿಸಿದ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಲೇ ಈ ಅಗ್ನಿ ಅವಘಡ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಘಟನಾ ಸ್ಥಳಕ್ಕೆ ಅಮೃತೂರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ಅಗ್ನಿಶಾಮಕ ಸಿಬ್ಬಂದಿಯಿಂದ ಯಶಸ್ವಿ ಕಾರ್ಯಾಚರಣೆ

ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. 

PREV
Read more Articles on
click me!

Recommended Stories

ಇಂದು ಮಧ್ಯರಾತ್ರಿಯಿಂದಲೇ ಮದ್ಯ ಮಾರಾಟ ನಿಷೇಧ; ಜಿಲ್ಲಾಧಿಕಾರಿ ಆದೇಶ, ಪೊಲೀಸರಿಂದ ಹೈ-ಅಲರ್ಟ್!
ಪಂಚಗಂಗಾ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುವ ಕರಾವಳಿಗರಿಗೆ ಗುಡ್‌ನ್ಯೂಸ್‌ ನೀಡಿದ ರೈಲ್ವೇಸ್‌!