
ಕಳೆದ ಫೆಬ್ರವರಿ 19ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಮೆರವಣಿಗೆಯ ವೇಳೆ ನಡೆದ ಕಲ್ಲೆಸೆತ ಪ್ರಕರಣವನ್ನು ಖಂಡಿಸಿ, ನಾಳೆ (ಫೆಬ್ರವರಿ 26) ಬಾಗಲಕೋಟೆಯಲ್ಲಿ ಹಿಂದೂ ಪರ ಸಂಘಟನೆಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿವೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬಾಗಲಕೋಟೆ ನಗರದಾದ್ಯಂತ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಖಡಕ್ ಆದೇಶ ಹೊರಡಿಸಿದ್ದಾರೆ.
ಪ್ರತಿಭಟನೆಯ ವೇಳೆ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಬಾಗಲಕೋಟೆ ಜಿಲ್ಲಾ ಪೊಲೀಸ್ ಅಧೀಕ್ಷಕರು (SP) ಮದ್ಯ ಮಾರಾಟ ನಿಷೇಧಕ್ಕೆ ಕೋರಿಕೆ ಸಲ್ಲಿಸಿದ್ದರು. ಅದರಂತೆ ಜಿಲ್ಲಾಧಿಕಾರಿ ಸಂಗಪ್ಪ ಅವರು, ಇಂದು (ಫೆ. 25) ಮಧ್ಯರಾತ್ರಿಯಿಂದ ನಾಳೆ (ಫೆ. 26) ಮಧ್ಯರಾತ್ರಿವರೆಗೆ ಹಳೆ ಬಾಗಲಕೋಟೆ, ನವನಗರ ಹಾಗೂ ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಎಲ್ಲಾ ರೀತಿಯ ಮದ್ಯ ಮಾರಾಟ ಮತ್ತು ಸಾಗಾಣಿಕೆಯನ್ನು ನಿಷೇಧಿಸಿದ್ದಾರೆ.
ಹಿಂದೂ ಸಮಾಜದ ವಿವಿಧ ಮುಖಂಡರ ನೇತೃತ್ವದಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1:30ರವರೆಗೆ ನವನಗರದ ಜಿಲ್ಲಾಡಳಿತ ಭವನದ ಎದುರು ಬೃಹತ್ ಪ್ರತಿಭಟನಾ ಧರಣಿ ನಡೆಯಲಿದೆ. ಮೂಲತಃ ಈ ಪ್ರತಿಭಟನೆಯನ್ನು ಹಳೇ ಬಾಗಲಕೋಟೆಯಲ್ಲಿ ನಡೆಸಲು ಉದ್ದೇಶಿಸಲಾಗಿತ್ತು, ಆದರೆ ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಸ್ಥಳವನ್ನು ನವನಗರದ ಜಿಲ್ಲಾಡಳಿತ ಭವನಕ್ಕೆ ಶಿಫ್ಟ್ ಮಾಡಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಾವಿರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಈ ಧರಣಿಯಲ್ಲಿ ಭಾಗಿಯಾಗಲಿದ್ದಾರೆ.
ಶಿವಾಜಿ ಜಯಂತಿ ಮೆರವಣಿಗೆಯ ಮೇಲೆ ಕಲ್ಲೆಸೆದ ಘಟನೆಗೆ ಸಂಬಂಧಿಸಿದಂತೆ ಮಸೀದಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ಕೂಡಲೇ ಬಂಧಿಸಬೇಕು ಎಂಬುದು ಪ್ರತಿಭಟನಾಕಾರರ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು ನಾಳೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಿರುವ ಮುಖಂಡರು, ಆರೋಪಿಗಳ ಬಂಧನಕ್ಕೆ 15 ದಿನಗಳ ಕಾಲಾವಕಾಶ ನೀಡಲಿದ್ದಾರೆ. ಈ ಗಡುವಿನೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಎರಡನೇ ಹಂತದಲ್ಲಿ ಉಗ್ರವಾದ ಬೀದಿ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆಯಲ್ಲಿ ಬಾಗಲಕೋಟೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ನಗರದ ಪ್ರಮುಖ ವೃತ್ತಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆ ಬಾರದಂತೆ ನೋಡಿಕೊಳ್ಳಲು ಸಜ್ಜಾಗಿದ್ದಾರೆ.