ಮೈಸೂರಲ್ಲಿ ಮಹಿಷ ದಸರಾಗೆ ವಿರೋಧ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ಹಾರೋಹಳ್ಳಿಯ ರಾಮಮಂದಿರ ನಿರ್ಮಾಣ ಫೂಜೆ ಕಾರ್ಯಕ್ರಮಕ್ಕೆ ಕಾಂಗ್ರೆಸ್ ನಾಯಕರು ಬಹಿಷ್ಕರಿಸಿದ್ದಾರೆ.
ಮೈಸೂರು (ಜ.22): ಅಯೋಧ್ಯೆಯಲ್ಲಿ ಪ್ರಾಣ ಪ್ರತಿಷ್ಠೆ ಆಗುತ್ತಿರುವ ರಾಮಲಲ್ಲಾ (ಬಾಲ ರಾಮ) ಮೂರ್ತಿಯ ಶಿಲೆ ಸಿಕ್ಕ ಮೈಸೂರಿನ ಹಾರೋಹಳ್ಳಿಯ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಭೂಮಿಪೂಜೆ ನೆರವೇರಿಸಲು ಆಗಮಿಸಿದ ಸಂಸದ ಪ್ರತಾಪ್ ಸಿಂಹ ಅವರಿಗೆ ತಾಲೂಕು ಪಂಚಾಯಿತಿ ಸದಸ್ಯರು ಪ್ರವೇಶ ನಿರಾಕರಿಸಿದ್ದಾರೆ. ಇದರಿಂದ ದೈವಿಕ ಕಾರ್ಯಕ್ರಮಕ್ಕೆ ಬಂದ ಪ್ರತಾಪ್ ಸಿಂಹ ಪೂಜೆಯಲ್ಲಿ ಪಾಲ್ಗೊಳ್ಳದೇ ವಾಪಸ್ ಹೋಗಿದ್ದಾರೆ.
ಹೌದು, ದೈವಿಕ ಕಾರ್ಯದಲ್ಲೂ ಕ್ಷುಲ್ಲಕ ರಾಜಕಾರಣವನ್ನು ಮಾಡಿರುವುದು ಬೆಳೆಕಿಗೆ ಬಂದಿದೆ. ಹಾರೋಹಳ್ಳಿ ಹಾಗೂ ಗುಜ್ಜೆಗೌಡನಪುರ ವ್ಯಾಪ್ತಿಯ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರಿಂದ ಗಲಾಟೆ ಮಾಡಲಾಗಿದೆ. ಸಂಸದ ಪ್ರತಾಪ್ ಸಿಂಹ ಅವರು ರಾಮಮಂದಿರ ಭೂಮಿ ಪೂಜೆಯಲ್ಲಿ ಪಾಲ್ಗೊಳ್ಳದಂತೆ ಘೇರಾವ್ ಮಾಡಿದ್ದಾರೆ. ಶಾಸಕ ಜಿ.ಟಿ. ದೇವೇಗೌಡ ಅವರು ಮನವೊಲಿಕೆಗೆ ಎಷ್ಟೇ ಪ್ರಯತ್ನ ಮಾಡಿದರೂ ಮಾತು ಕೇಳದ ಹಿನ್ನೆಲೆಯಲ್ಲಿ ಸಂಸದ ಪ್ರತಾಪ್ ಸಿಂಹ ಅವರು ಸ್ಥಳದಿಂದ ನಿರ್ಗಮಿಸಿದರು.
ರಾಮಲಲ್ಲಾ ಶಿಲೆ ಸಿಕ್ಕ ಹಾರೋಹಳ್ಳಿಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿಪೂಜೆ
ಇನ್ನು ಹರೋಹಳ್ಳಿ ಗಲಾಟೆ ವಿಚಾರದ ಬಗ್ಗೆ ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಮಾತನಾಡಿ, ನಾನು ಈ ಕ್ಷಣಕ್ಕೂ ಮಹಿಷ ದಸರಾ ವಿರೋಧಿಯಾಗಿದ್ದೇನೆ. ಮಹಿಷಾ ದಸರಾ ವಿರೋದ ಮಾಡಿದ್ದಕ್ಕೆ ಯಾರೋ ನಾಲ್ಕು ಜನ ಕಿಡಿಗೇಡಿಗಳು ಗಲಾಟೆ ಮಾಡಿದರು. ಕಾಂಗ್ರೆಸ್ ನ ಪುಡಾರಿಗಳಿಂದ ಗಲಾಟೆ ನಡೆದಿದೆ. ಮತ್ತೆ ಯಾರೋ ನಾಲ್ಕು ಜನ ಮಹಿಷನ ಭಕ್ತರಿದ್ದಾರೆ. ಚಾಮುಂಡಿ ತಾಯಿಯ ಭಕ್ತರು ಕೋಟ್ಯಾಂತರ ಇದ್ದಾರೆ. ನಾನು ಚಾಮುಂಡಿಯ ಭಕ್ತನಾಗಿದ್ದೇನೆ. ನನ್ನನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ನವರಿಂದ ಸೋಲಿಸಲು ಸಾಧ್ಯವಿಲ್ಲ. ಈ ಕಾರಣಕ್ಕೆ ಇಂತಹ ಗಲಾಟೆಗಳು ಮುಂದೆನೋ ನಡೆಯುತ್ತದೆ. ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ಹೇಳಿದ್ದಾರೆ.
ಕೇದಾರನಾಥದಲ್ಲಿ ಶಂಕರಾಚಾರ್ಯರ ಮೂರ್ತಿ ಕೆತ್ತಿದಾಗ ಶಿಲ್ಪಿ ಅರುಣ್ ಯೋಗಿರಾಜ್ ಗೆ ಜಿಂದಾಲ್ ಕಂಪನಿ ಗೌರವ ಕೊಟ್ಟಿರಲಿಲ್ಲ. ಕನಿಷ್ಠ ಅವರ ಹೆಸರು ಬೆಳಕಿಗೆ ತರುವ ಕೆಲಸ ಆಗಿರಲಿಲ್ಲ. ಆದರೆ ನನ್ನ ಭೇಟಿ ನಂತರ ಪ್ರಧಾನಿಗೆ ಪರಿಚಯಿಸುವ ಕೆಲಸ ಮಾಡಿದೆ. ದೆಹಲಿಯಲ್ಲಿ ಸುಭಾಷ್ ಚಂದ್ರ ಬೋಸ್ ಪ್ರತಿಮೆ ಮಾಡಲು ಅವರಿಗೆ ಸಬ್ ಕೆಂಡರ್ ಮಾತ್ರ ಸಿಕ್ಕಿತ್ತು. ನಂತರ ನಾನು ಪ್ರಧಾನಿ ಬಳಿ ಅರುಣ್ ಕರೆದುಕೊಂಡು ಹೋಗಿದ್ದೆನು. ಆಗ ಅವರಿಗೆ ನೇರವಾಗಿ ಗುರುತಿಸುವ ಕೆಸಲ ಆಯಿತು. ಪಾರ್ಲಿಮೆಂಟ್ ಬಳಿಯೂ ಅರುಣ್ ಮೂರ್ತಿ ಕೆತ್ತಬೇಕಿತ್ತು. ಅಷ್ಟರಲ್ಲಿ ಅವರಿಗೆ ಅಯೋಧ್ಯೆ ಕೆಲಸ ಬಂತು ಎಂದರು.
ರಾಮಮಂದಿರದ ಮೇಲೆ ಇಸ್ಲಾಂ ಧರ್ಮದ ಧ್ವಜ ಹಾರಿಸಿದ ಕಿಡಿಗೇಡಿ ತಾಜುದ್ದೀನ್ ಬಂಧನ
ಇನ್ನು ಅಯೋಧ್ಯೆ ರಾಮ ಮಂದಿರದ ಬಾಲರಾಮನ ಮೂರ್ತಿ ಕೆತ್ತನೆಗೆ ಮೂರು ಜನ ಕಲಾವಿದರು ಇದ್ದರು. 15 ಜನ ಆಯ್ಕೆ ಸಮಿತಿಯಲ್ಲಿ 14 ಜನ ಅರುಣ್ ಅವರ ಪ್ರತಿಮೆ ಮೆಚ್ಚಿಕೊಂಡಿದ್ದಾರೆ. ಇದು ಅರುಣ್ ಅವರ ಕಾರ್ಯ ಶೈಲಿಗೆ ಹಿಡಿ ಕನ್ನಡಿಯಾಗಿದೆ. ಇಂದು ಶಿಲೆ ಸಿಕ್ಕ ಗುಜ್ಜೇಗೌಡನಪುರದಲ್ಲೂ ಭೂಮಿ ಪೂಜೆ ನಡೆಯುತ್ತಿದೆ. ಇನ್ನು ಮುಂದೆ ಅಯೋಧ್ಯೆ ಹಾಗೂ ಮೈಸೂರು ನಡುವೆ ನಿರಂತರ ಸಂಬಂಧ ಉಳಿದಿರುತ್ತದೆ ಎಂದು ಹೇಳಿದರು.
ಪ್ರತಾಪ್ ಸಿಂಹ ಪೂಜೆಯಲ್ಲಿ ಪಾಲ್ಗೊಳ್ಳೂದು ಇಷ್ಟವಿಲ್ಲ:
ಸಂಸದ ಪ್ರತಾಪ್ ಸಿಂಹ 10 ವರ್ಷದಿಂದ ಒಮ್ಮೆಯೂ ನಮ್ಮೂರಿಗೆ ಬಂದಿಲ್ಲ. ನಮ್ಮ ಸಮಸ್ಯೆ ಏನು ಅಂತ ಕೇಳಿಲ್ಲ. ಪ್ರತಾಪ್ ಸಿಂಹ ಪೂಜೆಯಲ್ಲಿ ಭಾಗವಹಿಸೋದು ನಮಗೆ ಇಷ್ಟ ಇಲ್ಲ. ಆದ್ದರಿಂದ ವಾಪಸ್ ಕಳುಹಿಸಿದ್ದೇವೆ.
- ಚಲುವರಾಜು, ಹಾರೋಹಳ್ಳಿ ಗ್ರಾಮ